ADVERTISEMENT

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜನವರಿ 2018, 9:13 IST
Last Updated 30 ಜನವರಿ 2018, 9:13 IST

ಭಾಲ್ಕಿ: ಅನುದಾನಿತ ಪ್ರೌಢಶಾಲೆಗಳಲ್ಲಿ 2017ರ ವರೆಗೆ ಖಾಲಿಯಾಗಿರುವ ಎಲ್ಲ ಹುದ್ದೆಗಳ ಭರ್ತಿಗೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರ ಹೇಳಿದರು. ಪಟ್ಟಣದ ಸತ್ಯನಿಕೇತನ ಕಾಲೇಜಿನಲ್ಲಿ ಶನಿವಾರ ಶಿಕ್ಷಕರೊಂದಿಗೆ ಆಯೋಜಿಸಿದ್ದ ನೇರ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೂನ್‌ 1, 1987 ರಿಂದ ಆಗಸ್ಟ್‌ 4, 1990 ರವರೆಗೆ ಅನುದಾನಕ್ಕೆ ಒಳಪಟ್ಟ ಅನುದಾನಿತ ಪ್ರೌಢಶಾಲೆ ಶಿಕ್ಷಕರ ಕಾಲ್ಪನಿಕ ವೇತನವನ್ನು ಶಿಕ್ಷಕರ ನೇಮಕಾತಿ ದಿನದಿಂದಲೇ ಕೊಡುವ ಬಗ್ಗೆ ಆದೇಶಿಸಲಾಗಿದೆ. ಸರ್ಕಾರದ ಮೇಲೆ ಒತ್ತಡ ಹೇರಿ ಅನುದಾನಿತ ಪ್ರೌಢಶಾಲೆಗಳಲ್ಲಿ 2014ರ ವರೆಗೆ ಖಾಲಿಯಾದ ಹುದ್ದೆಗಳನ್ನೂ ಭರ್ತಿಮಾಡಿಕೊಳ್ಳಲು ಆದೇಶಿಸಲಾಗಿದೆ ಎಂದು ಹೇಳಿದರು.

ನೂತನ ಪಿಂಚಣಿ ಯೋಜನೆ ಕೇಂದ್ರ ಸರ್ಕಾರದ್ದಾಗಿದ್ದು, ರಾಜ್ಯದಲ್ಲಿ ಈ ಯೋಜನೆ ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನೇ ಮುಂದುವರಿಸುವಂತೆ ಕ್ರಮಕೈಗೊಳ್ಳಲು ಆಗ್ರಹಿಸಲಾಗುವುದು. ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಆಡಳಿತ ಪಕ್ಷದ ವಿರುದ್ಧವೇ 11 ದಿನ ಉಪವಾಸ ಸತ್ಯಾಗ್ರಹ ಮಾಡಿದ್ದೇನೆ ಎಂದರು.

ADVERTISEMENT

ಈಶಾನ್ಯ ಪದವೀಧರ ಕ್ಷೇತ್ರದ ನಿಯೋಜಿತ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ತಮಗೆ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಗೆಲ್ಲಿಸಬೇಕು ಎಂದು ಶಿಕ್ಷಕರಲ್ಲಿ ಮನವಿ ಮಾಡಿಕೊಂಡರು.

ಕೇತ್ರ ಶಿಕ್ಷಣಾಧಿಕಾರಿ ಶಿವಲಿಂಗಪ್ಪ ಎಚ್.ಎಸ್. ಪ್ರಾಸ್ತಾವಿಕ ಮಾತನಾಡಿದರು. ಸತ್ಯನಿಕೇತನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶರದಕುಮಾರ ಸಿರ್ಸೆ ಅಧ್ಯಕ್ಷತೆ ವಹಿಸಿದ್ದರು. ಡಿ.ಡಿ.ಸಿಂಧೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಾಜಿ ಕಾಂಬಳೆ, ಕಾಶೀನಾಥ ಚಲವಾ, ಜೈಕಾಂತ ಗಂಗೋಜಿ, ಶಿವಕುಮಾರ ಘಂಟೆ, ವಿಜಯಕುಮಾರ ಗೌಡಗಾವೆ, ಹಣಮಂತ ಕಾರಾಮುಂಗೆ, ಗಣಪತಿ ಬೋಚರೆ ಇದ್ದರು. ದತ್ತು ಕಾಟಕರ್ ಸ್ವಾಗತಿಸಿದರು. ಜಿಪ್ಸನ್ ಕೋಟೆ ನಿರೂಪಿಸಿದರು. ಧೂಳಪ್ಪಾ ಸಿಂಧೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.