ADVERTISEMENT

ವಚನ ಸಾಹಿತ್ಯ ಬಹುದೊಡ್ಡ ಕೊಡುಗೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 8:58 IST
Last Updated 8 ಫೆಬ್ರುವರಿ 2018, 8:58 IST

ಭಾಲ್ಕಿ: ‘ಬಸವಾದಿ ಶರಣರು ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅನಿಷ್ಟ ಪದ್ಧತಿಗಳನ್ನು ಹೊಡೆದೋಡಿಸಲು ರಚಿಸಿದ ವಚನಗಳು ಪ್ರಪಂಚಕ್ಕೆ ಅವರು ನೀಡಿದ ಬಹುದೊಡ್ಡ ಕೊಡುಗೆ’ ಎಂದು ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್‌ ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಕಾಂತ ಬಿರಾದಾರ ಹೇಳಿದರು.

ಪಟ್ಟಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ ಬುಧವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆ ತಾಲ್ಲೂಕು ಘಟಕ ವತಿಯಿಂದ ಬಸವ ಉತ್ಸವ ಪ್ರಚಾರ ನಿಮಿತ್ತ ಆಯೋಜಿಸಿದ್ದ ಬಸವ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸಾಮಾಜಿಕ ಸಮಾನತೆಯ ತಳಹದಿಯ ಮೇಲೆ 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಜಗತ್ತಿನ ಪ್ರಪ್ರಥಮ ಸಂಸತ್ತು’ ಎಂದು
ಅವರು ಹೇಳಿದರು.

ADVERTISEMENT

ಶರಣ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಪ್ರೊ.ಶಂಭುಲಿಂಗ ಕಾಮಣ್ಣ ಮಾತನಾಡಿ, ‘ಸರಳ ಮತ್ತು ಸುಂದರವಾಗಿರುವ ವಚನಗಳನ್ನು ಪ್ರತಿಯೊಬ್ಬರು ನಿತ್ಯ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು. ಮುಖ್ಯಶಿಕ್ಷಕ ವಿಶ್ವನಾಥ ಪಕ್ಕಾ ಮಾತನಾಡಿದರು.

ಹಿರಿಯ ಶಿಕ್ಷಕ ಶೇಷಾರಾವ್‌ ಬಿರಾದಾರ ಅವರನ್ನು ಕದಳಿ ವೇದಿಕೆ ವತಿಯಿಂದ ಗೌರವಿಸಲಾಯಿತು. ಆಡಳಿತಾಧಿಕಾರಿ ಶಂಕರೆಡ್ಡಿ ಯಾದಲೆ, ಶಿವಶರಣಪ್ಪ ಟಪಗೆ, ವಿದ್ಯಾವತಿ ಅಷ್ಟೂರೆ, ಗಂಗಾ ಅಷ್ಟೂರೆ ಇದ್ದರು. ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗನಕೇರೆ ಪ್ರಾಸ್ತಾವಿಕ ಮಾತನಾಡಿದರು. ಪ್ರದೀಪ ಘಂಟೆ ನಿರೂಪಿಸಿದರು. ಶಿವಕಲ್ಯಾಣಿ ನಾಗನಕೇರೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.