ADVERTISEMENT

ಕವಿ ತನ್ನೊಳಗೆ ತಾನು ಶೋಧಿಸಲಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2018, 9:22 IST
Last Updated 9 ಫೆಬ್ರುವರಿ 2018, 9:22 IST

ಬಸವಕಲ್ಯಾಣ: ‘ಕವಿಯು ಮೊದಲು ತನ್ನೊಳಗೆ ತಾನು ಶೋಧಿಸಿ ನೋಡಿ ಸಮಾಜ ಶೋಧನೆ ನಡೆಸುವುದು ಉತ್ತಮ’ ಎಂದು ಸಾಹಿತಿ ಡಾ.ಎಚ್.ಬಿ.ಕೋಲ್ಕಾರ್ ಹೇಳಿದರು. ತಾಲ್ಲೂಕಿನ ಬೇಲೂರಿನಲ್ಲಿ ಗುರುವಾರ ನಡೆದ ಶರಣ ಉರಿಲಿಂಗ ಪೆದ್ದಿ ಉತ್ಸವ ಮತ್ತು ಸಾಮಾಜಿಕ ಸಾಮರಸ್ಯ ಸಮ್ಮೇಳನದ ಎರಡನೇ ದಿನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಭಾಷೆ ಬಲ್ಲವರಾಗಿರಬೇಕು. ತನ್ನ ಒಳಗಣ್ಣು ಯಾವಾಗಲೂ ತೆರೆದಿಟ್ಟು ಸಮಾಜದ ಆಗು ಹೋಗುಗಳನ್ನು ಗಮನಿಸುತ್ತಿರಬೇಕು. ಪ್ರತಿಯೊಂದರ ಬಗ್ಗೆ ಸ್ಪಂದನೆ ವ್ಯಕ್ತಪಡಿಸಬೇಕು. ಟೀಕೆಯ ಜತೆಗೆ ಉತ್ತಮ ಮಾರ್ಗದರ್ಶನ ಮಾಡಬೇಕು’ ಎಂದರು.

‘ಸಮಾಜದಲ್ಲಿ ಸಾಮರಸ್ಯ ಅತ್ಯಗತ್ಯ. ಸೌಹಾರ್ದತೆಯ ವಾತಾವರಣ ನಿರ್ಮಾಣ ಮಾಡುವಲ್ಲಿ ಕವಿ, ಸಾಹಿತಿಗಳ ಪಾತ್ರ ಬಹುಮುಖ್ಯವಾದುದು. ಭಾವ, ವಿಚಾರ ಸಾಮರಸ್ಯವಿರಬೇಕು. ಮತ ಸಾಮರಸ್ಯವಿದ್ದಾಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯವಾಗಬಲ್ಲದು’ ಎಂದು ಹೇಳಿದರು. ಪ್ರಭುಶೆಟ್ಟಿ ಸೈನಿಕಾರ್ ಮಾತನಾಡಿ, ‘ದೇಶಾಭಿಮಾನ ಬೆಳೆಸಿಕೊಳ್ಳಬೇಕು. ಸಮಾಜದ ಒಳಿತಿನ ವಿಚಾರ ಎಲ್ಲರದ್ದಾಗಿರಬೇಕು’ ಎಂದರು.

ADVERTISEMENT

ಪೀಠಾಧಿಪತಿ ಪಂಚಾಕ್ಷರಿ ಸ್ವಾಮೀಜಿ, ಬಸವ ಮಹಾಮನೆಯ ಬಸವಪ್ರಭು ಸ್ವಾಮೀಜಿ, ಸಮ್ಮೇಳನಾಧ್ಯಕ್ಷ ಡಾ.ಅರ್ಜುನ ಗೊಳಸಂಗಿ, ಉಪ ತಹಶೀಲ್ದಾರ್ ಶಿವಾನಂದ ಮೇತ್ರೆ, ಸೂರ್ಯಕಾಂತ ಸೂಜ್ಯಾತ್, ಲಿಂಗರಾಜ ಅರಸ್, ಗಿರೀಶ ರಂಜೋಳಕರ್ ಇದ್ದರು.

ಎಸ್.ಎಂ.ಜನವಾಡಕರ್, ಭೀಮಶೇನ್ ಗಾಯಕವಾಡ, ವೀರಶೆಟ್ಟಿ ಪಾಟೀಲ, ವೀರಣ್ಣ ಮಂಠಾಳಕರ್, ಎಂ.ಆರ್.ಶ್ರೀಕಾಂತ, ಮಾಯಾದೇವಿ ಭೋಸ್ಲೆ, ಮರೆಪ್ಪ ನಾಟಿಕಾರ್ ಕವನ ವಾಚಿಸಿದರು. ಸಂಜೀವಕುಮಾರ ನಡುಕರ್ ಸ್ವಾಗತಿಸಿದರು. ವೀರಶೆಟ್ಟಿ ಮಲಶೆಟ್ಟಿ ನಿರೂಪಿಸಿದರು. ಜೈಭೀಮ ಹೊಲಕೇರಿ ವಂದಿಸಿದರು.

ಮಾರೋಪ ಭಾಷಣ ಮಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ಎಚ್.ಟಿ.ಪೋತೆ , ‘ಬಸವಾದಿ ಶರಣರ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆ ಅಳವಡಿಸಿಕೊಂಡರೆ ಸಮಾಜದಲ್ಲಿ ಸಾಮರಸ್ಯ ಸಾಧ್ಯ. ವಿವಿಧ ಚಿಂತಕರ ಸಾಹಿತ್ಯ ಓದಬೇಕು. ಸಮಾಜದ ಆಗು ಹೋಗುಗಳ ಬಗ್ಗೆ ಚಿಂತನ ಮಂಥನ ನಡೆದರೆ ಮಾತ್ರ ವೈಚಾರಿಕ ಪ್ರಜ್ಞೆ ಬೆಳೆಯಲು ಸಾಧ್ಯ’ ಎಂದು ಹೇಳಿದರು.

ಮುದ್ದಣ್ಣ ಸ್ವಾಮೀಜಿ, ಪಂಚಾಕ್ಷರಿ ಸ್ವಾಮೀಜಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಪ್ರದೀಪಕುಮಾರ ವಾತಡೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಡಾ.ಪ್ರಕಾಶ ಪಾಟೀಲ, ಆಮ್ ಆದ್ಮಿ ಪಕ್ಷದ ಮುಖಂಡ ದೀಪಕ ಮಾಲಗಾರ, ಲತಾ ಹಾರಕೂಡೆ, ಡಾ.ಗವಿಸಿದ್ದಪ್ಪ ಪಾಟೀಲ ಪಾಲ್ಗೊಂಡಿದ್ದರು.

ಸಂವಾದಗೋಷ್ಠಿ: ಡಾ.ನಾರಾಯಣ ರೋಳೆಕರ್ ಅಧ್ಯಕ್ಷತೆಯಲ್ಲಿ ಸಾಮಾಜಿಕ ಸಾಮರಸ್ಯ ಸಂವಾದಗೋಷ್ಠಿ ನಡೆಯಿತು. ಡಾ.ವೈ.ಎಂ.ಭಜಂತ್ರಿ, ಹಂಶಕವಿ, ಕವಿತಾ ಹುಷಾರೆ, ರಾಜಕುಮಾರ ಅಲ್ಲೂರೆ ಪಾಲ್ಗೊಂಡಿದ್ದರು. ದತ್ತಪ್ಪ ಕೀರ್ತಿಕರ್ ಸ್ವಾಗತಿಸಿದರು. ನಾಗೇಂದ್ರ ಬಿರಾದಾರ ನಿರೂಪಿಸಿದರು. ಶರಣಪ್ಪ ವಂದಿಸಿದರು.

ಪ್ರಶಸ್ತಿ ಪ್ರದಾನ: ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಗ್ರಂಥಾಲಯ ತಜ್ಞ ಡಾ.ಸತೀಶ ಹೊಸಮನಿ ಮತ್ತು ಕೋಲಾರದ ಸಾಹಿತಿ ಡಾ.ಸಿ.ನಾಗಭೂಷಣ ಅವರಿಗೆ ಪ್ರಸಕ್ತ ಸಾಲಿನ ಶರಣ ಉರಿಲಿಂಗಪೆದ್ದಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.