ಬೀದರ್: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಮಕ್ಕಳಿಗಾಗಿ ತೆಗೆದಿರುವ ಕೂಸಿನ ಮನೆಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿರುವ ಒಟ್ಟು 161 ಕೂಸಿನ ಮನೆಗಳಲ್ಲಿ 1,513 ಮಕ್ಕಳಿವೆ.
ಜಿಲ್ಲಾ ಪಂಚಾಯಿತಿ ಅನುದಾನದ ಅಡಿಯಲ್ಲಿ ಜಿಲ್ಲೆಯ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಕೂಸಿನ ಮನೆಗಳನ್ನು ತೆರೆಯಲಾಗಿದೆ. ಪಂಚಾಯಿತಿಗೆ ಸೇರಿದ ಹಳೆಯ ಕಟ್ಟಡವನ್ನು ಕೆಲವೆಡೆ ನವೀಕರಿಸಿದರೆ, ಕೆಲವು ಕಡೆ ಅದಕ್ಕಾಗಿ ಬಾಡಿಗೆಗೆ ಕಟ್ಟಡ ಪಡೆದು ನಡೆಸಲಾಗುತ್ತಿದೆ. ಪ್ರತಿ ಕೇಂದ್ರದಲ್ಲಿ 7ರಿಂದ 8 ಜನ ಮಕ್ಕಳ ಆರೈಕೆದಾರರನ್ನು ನೇಮಕ ಮಾಡಲಾಗಿದೆ.
ಪ್ರತಿದಿನ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3.30ರ ವರೆಗೆ ಈ ಕೂಸಿನ ಮನೆಗಳು ತೆರೆದಿರುತ್ತವೆ. ಆರು ತಿಂಗಳಿಂದ ಮೂರು ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡಲಾಗುತ್ತದೆ. ಚಕ್ಕಿ, ಹಾಲು, ಬೇಯಿಸಿದ ಮೊಟ್ಟೆ, ಕಿಚಡಿ, ಶಿರಾ, ಮೊಳಕೆಯೊಡೆದ ಕಾಳು, ಅನ್ನ ಬೇಳೆ ಸಾರು ಸೇರಿದಂತೆ ಇತರೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಒಳಗೊಂಡ ಮೆನು ಸಿದ್ಧಪಡಿಸಲಾಗಿದೆ. ವಾರದ ಏಳು ದಿನ ಬೇರೆ ಬೇರೆ ಆಹಾರ ನೀಡಲಾಗುತ್ತದೆ.
ಇತ್ತೀಚೆಗೆ ಜನವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಸಿನ ಮನೆಯಲ್ಲಿ ಮಕ್ಕಳಿಗೆ ವಾರದಲ್ಲಿ ಮೂರು ದಿನ ವಿವಿಧ ಬಗೆಯ ಹಣ್ಣುಗಳನ್ನು ಸಹ ನೀಡಲಾಗುತ್ತಿದೆ. ಇದರಿಂದ ಮಕ್ಕಳ ಸಂಖ್ಯೆ ಕೂಡ ಹೆಚ್ಚಿದೆ. ಇದನ್ನು ಬೇರೆ ಕೂಸಿನ ಮನೆಗಳಿಗೆ ವಿಸ್ತರಿಸಲು ಚಿಂತನೆ ನಡೆದಿದೆ.
‘ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ’:
‘ಕೂಸಿನ ಮನೆಗಳಲ್ಲಿ 6 ತಿಂಗಳಿಂದ 3ವರ್ಷದೊಳಗಿನ ಮಕ್ಕಳ ಆರೈಕೆ ಮಾಡಲಾಗುತ್ತದೆ. ಅಂಗನವಾಡಿಗಳಲ್ಲಿ 3ರಿಂದ 6 ವರ್ಷದೊಳಗಿನ ಮಕ್ಕಳು ಇರುತ್ತಾರೆ. ಕೂಸಿನ ಮನೆಗಳನ್ನು ಆರಂಭಿಸಿದ ನಂತರ ಕಾರ್ಮಿಕರು ಯಾವುದೇ ಚಿಂತೆಯಿಲ್ಲದೆ ಮಕ್ಕಳನ್ನು ಅಲ್ಲಿಗೆ ಕಳಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ಉತ್ತಮ ರೀತಿಯಲ್ಲಿ ನಡೆಯುತ್ತಿವೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ‘ಕೂಸಿನ ಮನೆಗಳಿಗೆ ಜಿಲ್ಲಾ ಪಂಚಾಯಿತಿಯಿಂದ ಅನುದಾನ ನೀಡಲಾಗುತ್ತದೆ. ಕೆಲವು ಪಂಚಾಯಿತಿಯವರು ಸ್ವಯಂಪ್ರೇರಣೆಯಿಂದ ಅವರ ಅನುದಾನದಿಂದ ಹಣ್ಣು ಸೇರಿದಂತೆ ಇತರೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸಹ ಕೊಡುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಏನು ಉಪಯೋಗ?:
ಉದ್ಯೋಗ ಖಾತ್ರಿ ಅಡಿ ಹೆಚ್ಚಿನ ಕಡೆಗಳಲ್ಲಿ ಮಕ್ಕಳ ತಂದೆ–ತಾಯಿ ಕೆಲಸ ನಿರ್ವಹಿಸುತ್ತಾರೆ. ಅವರು ಕೆಲಸಕ್ಕೆ ಹೋದರೆ ಮಕ್ಕಳನ್ನು ಎಲ್ಲಿ ಬಿಡುವುದು ಎಂಬ ಗೊಂದಲ ಇತ್ತು. ಕೆಲವರು ಅಂಗನವಾಡಿಗಳಲ್ಲಿ ಕೆಲವರು ಪರಿಚಯದವರ ಬಳಿ ಹಾಗೂ ಮತ್ತೆ ಕೆಲವರು ಕೆಲಸದ ಸ್ಥಳಗಳಿಗೆ ಕರೆದೊಯ್ಯುತ್ತಿದ್ದರು. ಈಗ ನರೇಗಾ ಕಾರ್ಮಿಕರಿಗಾಗಿಯೇ ಪ್ರತ್ಯೇಕವಾಗಿ ಕೂಸಿನ ಮನೆ ನಡೆಸುತ್ತಿರುವುದರಿಂದ ಯಾವುದೇ ಗೊಂದಲವಿಲ್ಲದೆ ಅಲ್ಲಿಗೆ ಸೇರಿಸುತ್ತಿದ್ದಾರೆ. ಕೆಲಸದ ಅವಧಿ ಮುಗಿಯುವ ತನಕ ಈ ಮನೆಗಳು ನಡೆಯುವುದರಿಂದ ಅವರಿಗೆ ಮಕ್ಕಳ ಕಡೆಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಎರಡು ವರ್ಷಗಳ ಹಿಂದೆ ಕೂಸಿನ ಮನೆಗಳನ್ನು ಆರಂಭಿಸಿದಾಗ ಹೆಚ್ಚಿನವರು ಅದರ ಬಗ್ಗೆ ಒಲವು ತೋರಿರಲಿಲ್ಲ. ಆದರೆ ಅಲ್ಲಿ ಉತ್ತಮ ರೀತಿಯಿಂದ ಆರೈಕೆ ಮಾಡುತ್ತಿರುವುದರಿಂದ ಈಗ ಹೆಚ್ಚಿನ ಕಾರ್ಮಿಕರು ತಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ. ನರೇಗಾ ಅಲ್ಲದೇ ಬೇರೆ ಕೆಲಸದಲ್ಲಿ ತೊಡಗಿಸಿಕೊಂಡಿರುವ ದುಡಿಯುವ ವರ್ಗದವರು ಅವರ ಮಕ್ಕಳನ್ನು ಸೇರಿಸಲು ಅವಕಾಶ ಇದೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.