ADVERTISEMENT

ತುತ್ತು ಅನ್ನಕ್ಕಾಗಿ ವೃದ್ಧೆಯ ನಿತ್ಯ ಪರದಾಟ

ಪಡಿತರ ಚೀಟಿ ರದ್ದು: ನಾಲ್ಕು ತಿಂಗಳಿನಿಂದ ಬಾರದ ಮಾಸಾಶನ

ಮನ್ನಥಪ್ಪ ಸ್ವಾಮಿ
Published 18 ಜೂನ್ 2021, 5:24 IST
Last Updated 18 ಜೂನ್ 2021, 5:24 IST
ಔರಾದ್ ತಾಲ್ಲೂಕಿನ ಕಪ್ಪೆಕೇರಿ ಗ್ರಾಮದಲ್ಲಿ ಜ್ಞಾನಾಬಾಯಿ ಅವರು ಗುಡಿಸಲಿನಲ್ಲಿ ವಾಸವಿರುವುದು
ಔರಾದ್ ತಾಲ್ಲೂಕಿನ ಕಪ್ಪೆಕೇರಿ ಗ್ರಾಮದಲ್ಲಿ ಜ್ಞಾನಾಬಾಯಿ ಅವರು ಗುಡಿಸಲಿನಲ್ಲಿ ವಾಸವಿರುವುದು   

ಔರಾದ್: ತಾಲ್ಲೂಕಿನ ಕಪ್ಪೆಕೇರಿ ಗ್ರಾಮದ 70ರ ವಯೋವೃದ್ಧೆಯೊಬ್ಬರು ಅನ್ನ ಹಾಗೂ ಆಶ್ರಯಕ್ಕಾಗಿ ದಿನನಿತ್ಯ ಪರದಾಡುತ್ತಿದ್ದಾರೆ.

ಜ್ಞಾನಾಬಾಯಿ ಲಕ್ಷ್ಮಣರಾವ್ ಹೆಸರಿನ ಈ ವೃದ್ಧೆ ಅನಾಥರು. ಹತ್ತು ವರ್ಷಗಳ ಹಿಂದೆ ಪತಿ ಸಾವನ್ನಪ್ಪಿದ್ದಾರೆ.

‘ಮಕ್ಕಳಿಲ್ಲ ಎಂಬ ಕಾರಣಕ್ಕೆ ತಮ್ಮ ಸಂಬಂಧಿಕರ ಯುವಕನೊಬ್ಬನನ್ನು ದತ್ತು ಪಡೆದಿದ್ದೆ. ಮಗ ಪಟ್ಟಣ ಸೇರಿದ್ದಾನೆ. ಈಗ ನನಗೆ ಆಶ್ರಯ ಇಲ್ಲ’ ಎಂದು ಅವರು ದುಃಖಿಸಿದರು.

ADVERTISEMENT

ಜ್ಞಾನಾಬಾಯಿ ಅವರ ಒಂದು ಕಾಲು ಶಕ್ತಿ ಕಳೆದುಕೊಂಡು ಅಂಗವಿಕಲರಾಗಿದ್ದಾರೆ. ಸಣ್ಣದೊಂದು ಗುಡಿಸಲ ಕೋಣೆಯಲ್ಲಿ ಒಬ್ಬರೇ ಇರುತ್ತಾರೆ. ಇಳಿವಯಸ್ಸಿನಲ್ಲೂ ಒಲೆಯ ಮೇಲೆ ಅಡುಗೆ ಮಾಡಿಕೊಂಡು ಉಪಜೀವನ ಮಾಡುತ್ತಿದ್ದಾರೆ.

ಜ್ಞಾನಾಬಾಯಿ ಒಬ್ಬರೇ ಇರುವ ಕಾರಣ ಪಡಿತರ ಚೀಟಿ ರದ್ದು ಆಗಿದೆ. ನಾಲ್ಕು ತಿಂಗಳಿನಿಂದ ಮಾಸಾಶನ ಕೂಡ ನಿಂತು ಹೋಗಿದೆ.

‘ರೇಷನ್ ಮುಗಿದು ಹೋಗಿದೆ. ಇದರಿಂದಾಗಿ ಕಳೆದ ತಿಂಗಳು ಲಾಕ್‍ಡೌನ್‍ನಲ್ಲಿ ಬಹಳ ಸಂಕಷ್ಟ ಎದುರಿಸಬೇಕಾಯಿತು. ದಿನಸಿ ತಂದು ಕೊಡುವವರು ಯಾರೂ ಇಲ್ಲ. ಕೊಳ್ಳಲು ಹಣವೂ ಇಲ್ಲ. ಪಕ್ಕದ ಮನೆಯವರು ಆಗಾಗ ಕೊಟ್ಟ ಅನ್ನ ತಿಂದು 15 ದಿನಗಳ ಕಾಲ ಅರೆ ಹೊಟ್ಟೆಯಲ್ಲಿ ಜೀವನ ಕಳೆದಿದ್ದೇನೆ’ ಎಂದು ಜ್ಞಾನಾಬಾಯಿ ಕಣ್ಣೀರಿಟ್ಟರು.

ಲಾಕ್‍ಡೌನ್ ವೇಳೆ ಆಹಾರದ ಕಿಟ್ ಹಂಚುವಾಗ ವಿಷಯ ತಿಳಿದ ಸಾಮಾಜಿಕ ಕಾರ್ಯಕರ್ತ ಸಾಯಿನಾಥ ಘೋಡ್ಕೆ ಅವರು ವೃದ್ಧೆಯ ಮನೆಗೆ ಹೋಗಿ ಆರೋಗ್ಯ ವಿಚಾರಿಸಿದ್ದಾರೆ. ಐದು ದಿನಗಳಿಗೆ ಸಾಕಾಗುವಷ್ಟು ಆಹಾರಧಾನ್ಯ ಕೊಟ್ಟು ಧೈರ್ಯ ತುಂಬಿದ್ದಾರೆ.

‘ಜ್ಞಾನಾಬಾಯಿ ಗಾಳಿ ಬೆಳಕು ಬರದ ಒಂದು ಚಿಕ್ಕ ಕೊಠಡಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಒಳಗೆ ಮಳೆ ನೀರು ನಿಂತಿದೆ. ಸಣ್ಣದಾದ ಕಟ್ಟಿಗೆ ಮಂಚದ ಮೇಲೆ ಇವರು ಮಲಗುತ್ತಾರೆ. ಏಳಲು ಬರುವುದಿಲ್ಲ. ಕೈ ಹಿಡಿದು ಎಬ್ಬಿಸಬೇಕಾಗುತ್ತದೆ’ ಎಂದು ಸಾಯಿಕುಮಾರ ಘೋಡ್ಕೆ ಕಳವಳ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.