ADVERTISEMENT

ಸೋಯಾಗೆ ಬಸವನ ಹುಳು ಬಾಧೆ- ನಿರ್ವಹಣೆಗೆ ರೈತರಿಗೆ ಕೃಷಿ ವಿಜ್ಞಾನಿಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 5:50 IST
Last Updated 23 ಜೂನ್ 2021, 5:50 IST
ಬೀದರ್ ತಾಲ್ಲೂಕಿನ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಕೌಠಾದಲ್ಲಿ ಸೋಯಾ ಅವರೆ ಬೆಳೆ ಪರೀಕ್ಷೆ ನಡೆಸಿದರು. ಡಾ. ಸುನೀಲಕುಮಾರ ಎನ್.ಎಂ, ಡಾ. ಅಕ್ಷಯಕುಮಾರ, ಅರ್ಚನಾ ಪಾಟೀಲ, ಓಂಕಾರ ಸೆಳಕೆ, ರಾಜಕುಮಾರ ಇದ್ದರು
ಬೀದರ್ ತಾಲ್ಲೂಕಿನ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಕೌಠಾದಲ್ಲಿ ಸೋಯಾ ಅವರೆ ಬೆಳೆ ಪರೀಕ್ಷೆ ನಡೆಸಿದರು. ಡಾ. ಸುನೀಲಕುಮಾರ ಎನ್.ಎಂ, ಡಾ. ಅಕ್ಷಯಕುಮಾರ, ಅರ್ಚನಾ ಪಾಟೀಲ, ಓಂಕಾರ ಸೆಳಕೆ, ರಾಜಕುಮಾರ ಇದ್ದರು   

ಜನವಾಡ: ಬೀದರ್ ತಾಲ್ಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಯಾ ಅವರೆ ಬೆಳೆಯಲ್ಲಿ ಬಸವನ ಹುಳುವಿನ ಬಾಧೆ ಕಂಡು ಬಂದಿದೆ.

ಬೀದರ್ ತಾಲ್ಲೂಕಿನ ಜನವಾಡ, ಔರಾದ್ ತಾಲ್ಲೂಕಿನ ಕೌಠಾ, ವಡಗಾಂವ, ಭಾಲ್ಕಿ ತಾಲ್ಲೂಕಿನ ನಿಟ್ಟೂರು, ಗೋರನಾಳ, ಹಜನಾಳ ಹಾಗೂ ಬಾಳೂರ ಗ್ರಾಮಗಳ ಹೊಲಗಳಲ್ಲಿ ಸೋಯಾಗೆ ಬಸವನ ಹುಳು ಬಾಧೆ ಉಂಟು ಮಾಡುತ್ತಿರುವುದು ಕಂಡು ಬಂದಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ. ತಿಳಿಸಿದ್ದಾರೆ.

ಬಸವನ ಹುಳುಗಳು ಬೆಳೆಯ ದೇಟು, ಕಾಂಡ, ತೊಗಟೆ ಹಾಗೂ ಎಲೆಗಳನ್ನು ತಿನ್ನುತ್ತಿವೆ. ಹುಳುಗಳ ಬಾಧೆ ಜಾಸ್ತಿಯಾದಲ್ಲಿ ರೈತರು ಮತ್ತೊಮ್ಮೆ ಬಿತ್ತನೆ ಮಾಡುವ ಸಾಧ್ಯತೆಯೂ ಉಂಟಾಗಬಹುದು ಎಂದು ಹೇಳಿದ್ದಾರೆ.

ADVERTISEMENT

ಮಳೆಗಾಲದಲ್ಲಿ ತುಂತುರು ಮಳೆ ಹಾಗೂ ಸೂರ್ಯನ ಮಂದ ಪ್ರಕಾಶ ಇರುವಾಗ ಹಗಲಲ್ಲೂ ಬಸವನ ಹುಳುಗಳ ಬಾಧೆ ಕಾಣಬಹುದು. ಸಾಮಾನ್ಯವಾಗಿ ಇವು ಸಂಜೆಯಿಂದ ಬೆಳಗಿನ ಜಾವದವರೆಗೂ ಬೆಳೆಗಳನ್ನು ತಿಂದು, ಬೆಳಿಗ್ಗೆ ತಮ್ಮ ಅಡಗು ತಾಣಗಳನ್ನು ಸೇರಿಕೊಳ್ಳುತ್ತವೆ ಎಂದು ತಿಳಿಸಿದ್ದಾರೆ.

ಮಳೆಗಾಲದಲ್ಲಿ ನೀರಿನ ಮೂಲದ ಸುತ್ತಮುತ್ತ, ಹೊಲದಲ್ಲಿ ನಡೆದಾಡಲು ಬಳಸುವ ಕಟ್ಟೆಗಳು, ಓಡಾಡುವ ಸ್ಥಳಗಳು, ಕಳೆ ಕಸಗಳು ಹುಳುಗಳ ಅಡಗು ತಾಣಗಳಲ್ಲಿ ಸೇರಿವೆ. ಒಂದು ಹುಳು ತನ್ನ ಜೀವಿತದ ಅವಧಿಯಲ್ಲಿ 100 ರಿಂದ 500 ಮೊಟ್ಟೆಗಳನ್ನು ಇಡುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಹೇಳಿದ್ದಾರೆ.

ಹುಳುಗಳ ನಿರ್ವಹಣೆಗೆ ಅವುಗಳ ಅಡಗು ತಾಣಗಳಾದ ಹುಲ್ಲು, ಕಸ ಕಡ್ಡಿ ತೆಗೆದು ಸ್ವಚ್ಛವಾಗಿ ಇಡಬೇಕು. ಹೊಲದಲ್ಲಿ ಅಲ್ಲಲ್ಲಿ ಹಾಕುವ ಕೃಷಿ ತ್ಯಾಜ್ಯಗಳ ರಾಶಿಗಳಲ್ಲಿ ಹುಳುಗಳು ಅಡಗಿ ಕೂಡುತ್ತವೆ. ಹೀಗಾಗಿ ಇಂಥ ರಾಶಿಗಳನ್ನು ಸುಟ್ಟು ಹಾಕಬೇಕು ಎಂದು ಸಲಹೆ ನೀಡಿದ್ದಾರೆ.

ಹೊಲದ ನಡೆದಾಡುವ ಕಟ್ಟೆ, ಗಡಿ ಗುಂಟ ಹರಳು ಉಪ್ಪು ಸುರಿಯಬೇಕು. ಸಂಜೆ ಅಥವಾ ಬೆಳಗಿನ ವೇಳೆ ಹುಳುಗಳನ್ನು ಕೈಯಿಂದ ಆರಿಸಿ ಗೋಣಿ ಚೀಲದಲ್ಲಿ ಕಲೆ ಹಾಕಿ, ಅವುಗಳ ಮೇಲೆ ಉಪ್ಪು ಹಾಕಿ ನಾಶಪಡಿಸಬಹುದು ಎಂದು ತಿಳಿಸಿದ್ದಾರೆ.

ಹೊಲದಲ್ಲಿ ಅಲ್ಲಲ್ಲಿ ನೀರಿನಲ್ಲಿ ನೆನೆಸಿದ ಗೋಣಿ ಚೀಲ ಹರಡಿ. ಕೊಳೆತ ಕಸ ಗುಂಪಾಗಿಟ್ಟು ಆಸರೆಗಾಗಿ ಬರುವ ಹುಳುಗಳ ಮೇಲೆ ಬ್ಲೀಚಿಂಗ್ ಪುಡಿ (8-10 ಗ್ರಾಂ ಪ್ರತಿ ಎಕರೆಗೆ) ಧೂಳೀಕರಿಸಿ, ನಾಶಪಡಿಸಬಹುದು. ಮೆಟಾಲ್ಡಿಹೈಡೆಡ್ (2.5 ಶೇ) ಮಾತ್ರೆಗಳನ್ನು ಎಕರೆಗೆ 2 ಕಿ.ಗ್ರಾಂನಂತೆ ಹೊಲದಲ್ಲಿ ಎರಚಿಸಿದ್ದಲ್ಲಿ ಹುಳುಗಳು ಅವುಗಳ ಆಕರ್ಷಣೆಗೆ ಒಳ ಗಾಗಿ ಸಾಯುತ್ತವೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.