ADVERTISEMENT

ಬೀದರ್‌ ಉತ್ಸವಕ್ಕೆ ಸಕಲ ಸಿದ್ಧತೆ: ಗೋವಿಂದ ರೆಡ್ಡಿ

ಉದ್ಘಾಟನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2023, 14:12 IST
Last Updated 5 ಜನವರಿ 2023, 14:12 IST
ಬೀದರ್ ಕೋಟೆ ಆವರಣದಲ್ಲಿ ನಡೆದಿರುವ ಬೀದರ್‌ ಉತ್ಸವದ ಮುಖ್ಯ ವೇದಿಕೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಪರಿಶೀಲಿಸಿದರು
ಬೀದರ್ ಕೋಟೆ ಆವರಣದಲ್ಲಿ ನಡೆದಿರುವ ಬೀದರ್‌ ಉತ್ಸವದ ಮುಖ್ಯ ವೇದಿಕೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಪರಿಶೀಲಿಸಿದರು   

ಬೀದರ್‌: ಮೂರು ದಿನಗಳ ಅದ್ದೂರಿ ಬೀದರ್‌ ಉತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜ. 7 ರಂದು ಉತ್ಸವದ ಉದ್ಘಾಟನೆಗೆ ಕೇಂದ್ರ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಹಾಗೂ ಜ.9ರಂದು ಸಮಾರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸಲಿದ್ದಾರೆ.

ಬೀದರ್ ಉತ್ಸವದ ಅಂಗವಾಗಿ ರೈತ ಉತ್ಸವ, ಗಾಳಿಪಟ ಉತ್ಸವ, ಸಂಗೀತ, ನೃತ್ಯ ಉತ್ಸವ, ಕ್ರೀಡಾ ಉತ್ಸವ, ಬೋಟಿಂಗ್ ಉತ್ಸವ, ಚಿತ್ರಕಲೆ ಸೇರಿದಂತೆ ಒಟ್ಟು 26 ಉತ್ಸವಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಉದ್ಯೋಗ ಮೇಳ, ಪಶು ಮೇಳ, ಆಹಾರ ಮೇಳ ಹಾಗೂ ಸ್ತ್ರೀಶಕ್ತಿ ಉತ್ಪನ್ನಗಳ ಮಾರಾಟ ಮೇಳಗಳೂ ನಡೆಯಲಿವೆ ಎಂದು ನಗರದ ಕೋಟೆ ಆವರಣದಲ್ಲಿ ಗುರುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬೀದರ್‌ ಕೋಟೆ ಆವರಣದಲ್ಲಿ ಸಿದ್ಧಪಡಿಸಿರುವ ಮುಖ್ಯ ವೇದಿಕೆಯಲ್ಲಿ ಸಂಜೆ 5.30ಕ್ಕೆ ಕಾರ್ಯಕ್ರಮಗಳು ಆರಂಭವಾಗಲಿವೆ. ಸಂಜೆ 5.30 ರಿಂದ 7.15 ರ ವರೆಗೆ ಸ್ಥಳೀಯ ಕಲಾವಿದರಿಂದ, ನಂತರ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲಾವಿದರಿಂದ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ADVERTISEMENT

ಜನವರಿ 7 ರಂದು ಸಂಜೆ 7.15ಕ್ಕೆ ಬೀದರ್ ಉತ್ಸವಕ್ಕೆ ಕೇಂದ್ರದ ಪ್ರವಾಸೋದ್ಯಮ ಸಚಿವ ಕಿಶನ್ ರೆಡ್ಡಿ ಚಾಲನೆ ನೀಡುವರು. ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ರಾಜ್ಯ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲಕುಮಾರ ಆಗಮಿಸಲಿದ್ದಾರೆ. ಶಾಸಕ ರಹೀಂ ಖಾನ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಶಾಸಕರು, ವಿಧಾನ ಪರಿಷತ್‌ ಸದಸ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಉತ್ಸವಕ್ಕೆ ಬರುವುದು ಹೇಗೆ?

ಬೀದರ್‌ ಕೋಟೆಯ ಮುಖ್ಯ ಪ್ರವೇಶ ದ್ವಾರದ ಮೂಲಕ ಸಾರ್ವಜನಿಕರಿಗೆ ಪ್ರವೇಶ ಇರಲಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ವಿಜ್ಞಾನ ಉಪ ಕೇಂದ್ರದ ಆವರಣದಲ್ಲಿ ನಿಲುಗಡೆ ಮಾಡಿ ಕೋಟೆಯೊಳಗೆ ನಡೆದುಕೊಂಡು ಬರಬೇಕು. ದ್ವಿಚಕ್ರ ವಾಹನಗಳಿಗೆ ಕೋಟೆ ಮುಂಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ.

ಕಾರ್ಡ್‌ ಹೊಂದಿದವರು ಕೋಟೆ ಹಿಂಭಾಗದಲ್ಲಿರುವ ದೆಹಲಿ ದರ್ವಾಜಾ ಮೂಲಕ ಕೋಟೆಯೊಳಗೆ ಪ್ರವೇಶಿಸಬೇಕು. ಬೊಮ್ಮಗೊಂಡೇಶ್ವರ ಕೆರೆ ದಾಟಿ ಕಾಕತೀಯರ ಕಾಲದ ಕೋಟೆಗೆ ಹೋಗುವ ಮಾರ್ಗದಲ್ಲಿ ಖುಲ್ಲಾ ಜಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು.

ತಾಲ್ಲೂಕು ಕೇಂದ್ರಗಳಿಂದ ಬೀದರ್‌ ನಗರಕ್ಕೆ ಹಾಗೂ ಕೇಂದ್ರ ಬಸ್‌ ನಿಲ್ದಾಣದಿಂದ ಕೋಟೆ ಆವರಣದ ವರೆಗೂ ಬರಲು ಸಿಟಿ ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಉತ್ಸವಕ್ಕೆ ಬರುವ ಜನರಿಂದ ಹೆಚ್ಚಿನ ಹಣ ವಸೂಲಿ ಮಾಡದಂತೆ ಸೂಚನೆ ನೀಡಲಾಗಿದೆ. ಉತ್ಸವಕ್ಕೆ ಬಂದು ಹೋಗುವ ಜನರಿಗೆ ಕೇವಲ ₹ 45 ದರದಲ್ಲಿ ಊಟ ಕೊಡುವಂತೆ ಹೋಟೆಲ್‌ ಮಾಲೀಕರಿಗೆ ಮನವಿ ಮಾಡಲಾಗಿದೆ.

ಅನುಭವ ಮಂಟಪ ಮಾದರಿ ವೇದಿಕೆ

ಕೋಟೆ ಆವರಣದಲ್ಲಿರುವ ಸೋಲಾ ಗುಂಬಜ್ ಹಿಂಬದಿಯಲ್ಲಿ ಬೀದರ್‌ ಉತ್ಸವದ ಪ್ರಧಾನ ವೇದಿಕೆಗೆ ನೂತನ ಅನುಭವ ಮಂಟಪದ ರೂಪ ನೀಡಲಾಗಿದೆ.

ಪ್ರಧಾನ ವೇದಿಕೆಯ ಎದುರಲ್ಲಿ ಕಾರ್ಡ್‌ ಹೊಂದಿದವರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಒಟ್ಟು 20 ಸಾವಿರ ಕುರ್ಚಿಗಳನ್ನು ಹಾಕಲಾಗುವುದು. ಇದರ ಹಿಂದೆ ಸಾರ್ವಜನಿಕರು ಮೈದಾನದಲ್ಲಿ ಆರಾಮಾಗಿ ನೆಲದ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಣೆ ಮಾಡಬಹುದು. ಸಾರ್ವಜನಿಕರಿಗೆ ಅನುಕೂಲವಾಗುವಂತೆ 8 ಎಲ್‌ಇಡಿ ಟಿವಿಗಳನ್ನು ಅಳವಡಿಸುವ ಕಾರ್ಯ ನಡೆದಿದೆ.

ವೇದಿಕೆ ಬಲಭಾಗದಲ್ಲಿ ಪೊಲೀಸ್‌ ಕಂಟ್ರೋಲ್‌ ರೂಮ್ ಸ್ಥಾಪಿಸಲಾಗಿದೆ. ಎಡಗಡೆ ಮಾಧ್ಯಮ ಕೇಂದ್ರ ಸ್ಥಾಪಿಸಲಾಗಿದೆ. ಸರ್ಕಾರದ ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ಇಲ್ಲಿ ಅವಕಾಶ ಇರಲಿದೆ. ಯುಟ್ಯೂಬ್‌ ವರದಿಗಾರರಿಗೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.

ಕೋಟೆ, ನಗರದ ಪ್ರಮುಖ ವೃತ್ತಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಹೋಟೆಲ್‌ ಹಾಗೂ ಮಾರಾಟ ಮಳಿಗೆಗಳಿಗೂ ವಿದ್ಯುತ್‌ ದೀಪಗಳಿಂದ ಅಲಂಕಾರ ಮಾಡುವಂತೆ ಮಾಲೀಕರಿಗೆ ಮನವಿ ಮಾಡಲಾಗಿದೆ.

ಐದು ಕಡೆ ಕಾರ್ಯಕ್ರಮ

ಬೀದರ್‌ ಉತ್ಸವದ ಅಂಗವಾಗಿ ಐದು ಕಡೆ ಕಾರ್ಯಕ್ರಮಗಳು ನಡೆಯಲಿವೆ. ಕೋಟೆಯೊಳಗಿನ ಪ್ರಧಾನ ವೇದಿಕೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಲಾವಿದರು ಕಾರ್ಯಕ್ರಮ ನೀಡುವರು.

ರಂಗ ಮಂದಿರದಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣ, ಸಂಗೀತ ಹಾಗೂ ನೃತ್ಯೋತ್ಸವ, ಬಿವಿಬಿ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ, ಹೆಲಿಕಾಪ್ಟರ್ ಸಂಚಾರ, ಹಾಟ್‌ ಬಲೂನ್‌ ಉತ್ಸವ, ಝೀರಾ ಕನ್ವೆನ್ಷನ್‌ ಹಾಲ್‌ ಆವರಣದಲ್ಲಿ ಪ್ಯಾರಾ ಸೇಲಿಂಗ್, ಪ್ಯಾರಾ ಮೌಂಟಿಂಗ್, ಆಹಾರ ಮೇಳ, ಮಹಮೂದ್‌ ಗವಾನ ಮದರಸಾ ಆವರಣದಲ್ಲಿ ಮುಷಾಯಿರಾ ನಡೆಯಲಿದೆ.

ಕಿಡಿಗೇಡಿಗಳ ಮೇಲೆ ನಿಗಾ ಇಡಲು ಸಿಸಿಟಿವಿ

ಬೀದರ್‌: ಬೀದರ್‌ ಉತ್ಸವದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಅನುಕೂಲವಾಗುವಂತೆ ಕೋಟೆಯೊಳಗೆ ಹಾಗೂ ಪ್ರವೇಶ ದ್ವಾರ ಸೇರಿ ಒಟ್ಟು 50 ಕಡೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ಡ್ರೋಣ್‌ ಕ್ಯಾಮೆರಾ ಬಳಸಲಾಗುವುದು. ಎಎಸ್‌ಐ ಕಚೇರಿ ಸಮೀಪದಲ್ಲೇ ಕಂಟ್ರೋಲ್‌ ರೂಮ್‌ ಸ್ಥಾಪನೆ ಮಾಡಿ ನಿಗಾ ಇಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು ತಿಳಿಸಿದರು.

ಕೋಟೆ ಹಾಗೂ ಕೋಟೆ ಹೊರಗಡೆ ಒಟ್ಟು 7 ಕಡೆ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಮೂವರು ಡಿವೈಎಸ್‌ಪಿ, 23 ಸಿಪಿಐ, 92 ಪಿಎಸ್‌ಐ, 219 ಎಎಸ್‌ಐ, 376 ಹೆಡ್‌ ಕಾನ್‌ಸ್ಟೆಬಲ್, 712 ಕಾನ್‌ಸ್ಟೆಬಲ್, 84 ಮಹಿಳಾ ಕಾನ್‌ಸ್ಟೆಬಲ್, 497 ಹೋಮ್‌ ಗಾರ್ಡ್, ಕೆೆೆಎಸ್‌ಆರ್‌ಪಿ 4, ಡಿಎಆರ್ 4 ತುಕ್ಕಡಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾಂ ಎಂ, ಬೀದರ್ ಉತ್ಸವದ ಸಾಹಸ ಕ್ರೀಡೆಗಳ ನೋಡಲ್ ಅಧಿಕಾರಿ ಗೌತಮ ಅರಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಜಿ.ಸುರೇಶ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ ಕಿರಣಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.