ಬೀದರ್: ಕಮಲನಗರ ತಾಲ್ಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕೈಗೆತ್ತಿಕೊಂಡ ಕಾಮಗಾರಿ ಕಳಪೆಯಾಗಿದ್ದು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯ ಸೋಮನಾಥ ಸ್ವಾಮಿ ಮುಧೋಳ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಶನಿವಾರ ಏಕಾಂಗಿಯಾಗಿ ಧರಣಿ ನಡೆಸಿದರು.
ತನಿಖೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಲ ಜೀವನ್ ಮಿಷನ್ ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಯಾಗಿದೆ. ದೇಶದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಸಿಗಬೇಕು ಎನ್ನುವುದು ಯೋಜನೆಯ ಮುಖ್ಯ ಉದ್ದೇಶ. ಆದರೆ, ಕಮಲನಗರ ತಾಲ್ಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ಕಾಮಗಾರಿ ಕಳಪೆಯಾಗಿದೆ. ಗುತ್ತಿಗೆದಾರರು ಸರ್ಕಾರದ ಮಾರ್ಗಸೂಚಿ ಪ್ರಕಾರ ಕಾಮಗಾರಿ ಕೈಗೊಂಡಿಲ್ಲ. ಗ್ರಾಮದಲ್ಲಿ ಬೇಕಾಬಿಟ್ಟಿ ರಸ್ತೆಗಳನ್ನು ಅಗೆದು, ಅರ್ಧಕ್ಕೆ ಬಿಟ್ಟು, ಬೇರೆ ಓಣಿಗಳಲ್ಲಿ ರಸ್ತೆ ಅಗೆಯುತ್ತಿದ್ದಾರೆ. ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗುತ್ತಿದೆ. ನೀರಿನ ಪೈಪುಗಳು, ವಾಲ್‌ಗಳು ಕೆಟ್ಟು ಹೋಗಿ, ಅದರೊಳಗೆ ಮಣ್ಣು ಸೇರುತ್ತಿದೆ ಎಂದು ಆರೋಪಿಸಿದ್ದಾರೆ.
ಕಾಮಗಾರಿಗೆ ಉಪಯೋಗಿಸುತ್ತಿರುವ ಕಲ್ಲು, ಮಣ್ಣು ಗ್ರಾಮದಲ್ಲಿ ಎಲ್ಲೆಂದರಲ್ಲಿ ಬಿಸಾಕುತ್ತಿದ್ದಾರೆ. ಈ ಕುರಿತು ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಧರಣಿ ನಡೆಸುವ ಅನಿವಾರ್ಯತೆ ಸೃಷ್ಟಿಯಾಯಿತು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.