ADVERTISEMENT

ಔರಾದ್: ವೈಶಿಷ್ಟ್ಯದೊಂದಿಗೆ ಉತ್ಸವ ಆಚರಣೆ ಸಿದ್ಧತೆ

ಔರಾದ್ ಎಸಿ ಅಧ್ಯಕ್ಷತೆಯಲ್ಲಿ ಅಮರೇಶ್ವರ ಜಾತ್ರೆ ಸಿದ್ಧತೆ ಸಭೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 8:35 IST
Last Updated 29 ಜನವರಿ 2026, 8:35 IST
ಔರಾದ್ ತಹಶೀಲ್ದಾರ್ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಮಹಮ್ಮದ್ ಶಕೀಲ್ ಅವರ ಅಧ್ಯಕ್ಷತೆಯಲ್ಲಿ ಅಮರೇಶ್ವರ ಜಾತ್ರೆ ಸಿದ್ಧತಾ ಸಭೆ ನಡೆಯಿತು. ತಹಶೀಲ್ದಾರ್ ಮಹೇಶ ಪಾಟೀಲ ಇದ್ದರು
ಔರಾದ್ ತಹಶೀಲ್ದಾರ್ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಮಹಮ್ಮದ್ ಶಕೀಲ್ ಅವರ ಅಧ್ಯಕ್ಷತೆಯಲ್ಲಿ ಅಮರೇಶ್ವರ ಜಾತ್ರೆ ಸಿದ್ಧತಾ ಸಭೆ ನಡೆಯಿತು. ತಹಶೀಲ್ದಾರ್ ಮಹೇಶ ಪಾಟೀಲ ಇದ್ದರು   

ಔರಾದ್: ಫೆಬ್ರವರಿ 12ರಿಂದ 17ರ ವರೆಗೆ ನಡೆಯಲಿರುವ ಇಲ್ಲಿಯ ಐತಿಹಾಸ ಪ್ರಸಿದ್ಧ ಅಮರೇಶ್ವರ ಜಾತ್ರೆ ಈ ಬಾರಿ ಅದ್ದೂರಿ ಹಾಗೂ ವೈಶಿಷ್ಟ್ಯದೊಂದಿಗೆ ಆಚರಿಸಲು ಸಿದ್ಧತೆ ನಡೆದಿದೆ.

ಉಪವಿಭಾಗಾಧಿಕಾರಿ ಮಹಮ್ಮದ್ ಶಕೀಲ್ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ಜಾತ್ರೆ ಸಿದ್ಧತೆ ಕುರಿತು ಸಮಾಲೋಚನೆ ನಡೆಯಿತು.

‘ಅಮರೇಶ್ವರ ಜಾತ್ರೆ ಈ ಬಾರಿ ಸ್ವಲ್ಪ ವೈಶಿಷ್ಟ್ಯದಿಂದ ಆಗಬೇಕು. ಪಲ್ಲಕ್ಕಿ ಮೆರವಣಿಗೆಯಲ್ಲಿ ಆನೆ ತಂದರೆ ಜಾತ್ರೆಗೆ ಇನ್ನಷ್ಟು ಮೆರುಗು ಬರುತ್ತದೆ’ ಎಂದು ಸ್ಥಳೀಯ ಮುಖಂಡ ಡಾ. ಶಂಕರರಾವ ದೇಶಮುಖ ಸಭೆಯ ಗಮನಕ್ಕೆ ತಂದರು. ಈ ವಿಷಯ ಜಿಲ್ಲಾಧಿಕಾರಿ ಗಮನಕ್ಕೆ ತಂದು ಅವರು ಅನುಮತಿ ನೀಡಿದರೆ ಆನೆ ತರಿಸಲಾಗುವುದು’ ಎಂದು ಉಪವಿಭಾಗಾಧಿಕಾರಿಗಳು ಹೇಳಿದರು.

ADVERTISEMENT

‘ಅಮರೇಶ್ವರ ದೇವಸ್ಥಾನ ಸರ್ಕಾರದ ಆಧೀನದಲ್ಲಿ ಬರುವುದರಿಂದ ಎಲ್ಲ ಇಲಾಖೆ ಅಧಿಕಾರಿಗಳು ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದರಲ್ಲಿ ಪಟ್ಟಣ ಪಂಚಾಯತಿ ಜವಾಬ್ದಾರಿ ಜಾಸ್ತಿ ಇದೆ. ಹೀಗಾಗಿ ಬೀದಿ ದೀಪ, ಕುಡಿಯುವ ನೀರಿನ ವ್ಯವಸ್ಥೆ, ಎಲ್ಲ ಕಡೆ ಸ್ವಚ್ಛತೆ ಮಾಡಲು ಕ್ರಮ ಕೈಗೊಳ್ಳಬೇಕು. ದೇವಸ್ಥಾನ ಗರ್ಭಗುಡಿಯಲ್ಲಿ ದರ್ಶನ ಪಡೆಯಲು ಗೊಂದಲ ಆಗದಂತೆ ಪೊಲೀಸರನ್ನು ನಿಯೋಜನೆ ಮಾಡಬೇಕು. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳು ಹಾಗೂ ತಹಶೀಲ್ದಾರ್ ಜಾತ್ರೆಯ ಐದು ದಿನಗಳ ಕಾಲ 24 ಗಂಟೆ ಕೇಂದ್ರ ಸ್ದಾನದಲ್ಲೇ ಇದ್ದು ಜಾತ್ರೆ ವ್ಯವಸ್ಥೆ ನೋಡಿಕೊಳ್ಳಬೇಕು’ ಎಂದು ಶಂಕು ನಿಷ್ಪತೆ, ಶರಣಪ್ಪ ಪಾಟೀಲ, ಬಸವರಾಜ ಶೆಟಕಾರ ಮತ್ತಿತರರು ಅನೇಕ ವಿಷಯಗಳನ್ನು ಸಭೆಯ ಗಮನಕ್ಕೆ ತಂದರು.

ಯಾವುದೇ ಕೊರತೆ ಆಗದಂತೆ ಜಾತ್ರೆ ಅದ್ದೂರಿಯಾಗಿ ಆಚರಿಸಲು ಸ್ಥಳೀಯರ ಸಹಕಾರ ಅಗತ್ಯ. ಏನೇ ಬೇಡಿಕೆ, ಸಮಸ್ಯೆ ಇದ್ದರೆ ತಮ್ಮ ಜೊತೆ ಮುಕ್ತವಾಗಿ ಹಂಚಿಕೊಳ್ಳುವಂತೆ ತಹಶೀಲ್ದಾರ್ ಮಹೇಶ ಪಾಟೀಲ ಕೇಳಿಕೊಂಡರು.

ಜಾತ್ರೆ ಅಂದ ಮೇಲೆ ಅದರ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕಾಗುತ್ತದೆ. ಪಲ್ಲಕಿ ಮೆರವಣಿಗೆ, ರಥೋತ್ಸವ ಸೇರಿದಂತೆ ಎಲ್ಲವೂ ಶಾಂತಿಯತ ಆಗಲು ಸ್ವಯಂ ಸೇವಕರು ಸಹಕಾರ ನೀಡಬೇಕು ಎಂದು ಸಿಪಿಐ ರಘುವೀರಸಿಂಗ್ ಠಾಕೂರ್ ಹೇಳಿದರು.

ತಾಪಂ. ಇಒ ಕಿರಣ ಪಾಟೀಲ, ಪಪಂ. ಮುಖ್ಯಾಧಿಕಾರಿ ಸ್ವಾಮಿದಾಸ, ಮುಖಂಡ ಶಿವರಾಜ ಅಲ್ಮಾಜೆ, ಅನೀಲ ದೇವಕತೆ, ಸುಭಾಷ ನಿರ್ಮಳೆ, ಸಿದ್ರಾಮ ಬಾವುಗೆ, ಸಂದೀಪ ಪಾಟೀಲ, ಸುನೀಲ ಮಿತ್ರಾ, ಆನಂದ ಕಾಂಬಳೆ ಮತ್ತಿತರರು ಸಭೆಯಲ್ಲಿ ಇದ್ದರು.

‘ದಾಸೋಹ ಅವ್ಯವಸ್ಥೆ ಸರಿಪಡಿಸಿ’

ಅಮರೇಶ್ವರ ದೇವಸ್ಥಾನದಲ್ಲಿ ದಶಕಗಳಿಂದ ನಡೆದುಕೊಂಡು ಬರುತ್ತಿರುವ ಅನ್ನ ದಾಸೋಹ ವ್ಯವಸ್ಥೆ ಸರಿಯಾಗಿ ಮಾಡುತ್ತಿಲ್ಲ. ಭಕ್ತರ ಸಂಖ್ಯೆಗೆ ಅನುಸಾರವಾಗಿ ಆಹಾರ ತಯಾರಿಸುತ್ತಿಲ್ಲ. ಸರಿಯಾಗಿ ಮಾಡುವುದಿದ್ದರೆ ಮಾಡಿ ಇಲ್ಲವೇ ದಾಸೋಹ ಸ್ಥಗಿತ ಮಾಡಿ ಎಂದು ಸ್ಥಳೀಯ ಮುಖಂಡ ಸುಭಾಷ ನಿರ್ಮಳೆ ಅಸಮಾಧಾನ ಹೊರ ಹಾಕಿದರು. ‘ದಾಸೋಹ ವ್ಯವಸ್ಥೆಗೆ ನಮ್ಮಲ್ಲಿ ಯಾವುದೇ ಕೊರತೆ ಇಲ್ಲ. ಎಷ್ಟೇ ಭಕ್ತರು ಬಂದರೂ ಅವರೆಲ್ಲರಿಗೂ ಊಟ ಹಾಕಲು ತೊಂದರೆ ಇಲ್ಲ. ಆದರೆ ಅಲ್ಲಿ ಆಹಾರ ಧಾನ್ಯದ ಕೊರತೆ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ತಹಶೀಲ್ದಾರ್ ಮಹೇಶ ಪಾಟೀಲ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.