ADVERTISEMENT

ಭಾಲ್ಕಿ: ಆಸ್ಪತ್ರೆ ಆವರಣದಲ್ಲಿ ಮಳೆ ನೀರು; ಜಾನುವಾರು ಚಿಕಿತ್ಸೆಗೆ ತೊಂದರೆ ಸಂಗ್ರಹ

ಜಾನುವಾರು ಚಿಕಿತ್ಸೆಗೆ ತೊಂದರೆ; ಸಮಸ್ಯೆ ಸರಿಪಡಿಸಲು ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2025, 7:23 IST
Last Updated 6 ಅಕ್ಟೋಬರ್ 2025, 7:23 IST
ದನಗಳಿಗೆ ಚಿಕಿತ್ಸೆ ನೀಡಲು ಸಹಾಯಕವಾಗಿರುವ ಖಟ್ಕರ್ ಹಾಳಾಗಿದ್ದು, ಕಟ್ಟಿಗೆಗಳನ್ನು ಅಳವಡಿಸಿರುವುದು
ದನಗಳಿಗೆ ಚಿಕಿತ್ಸೆ ನೀಡಲು ಸಹಾಯಕವಾಗಿರುವ ಖಟ್ಕರ್ ಹಾಳಾಗಿದ್ದು, ಕಟ್ಟಿಗೆಗಳನ್ನು ಅಳವಡಿಸಿರುವುದು   

ಭಾಲ್ಕಿ: ತಾಲ್ಲೂಕಿನ ಹಲಬರ್ಗಾ ಗ್ರಾಮದ ಪಶು ಆಸ್ಪತ್ರೆ ಮೂಲಸೌಕರ್ಯಗಳಿಲ್ಲದೇ ಸೊರಗಿದೆ. ಜಾನುವಾರು ರೋಗಗಳಿಗೆ ತುತ್ತಾದರೆ, ಅವುಗಳಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಯಲ್ಲಿಯೇ ಹಲವು ಸಮಸ್ಯೆಗಳಿದ್ದು, ರೈತರ ಗೋಳನ್ನು ಹೆಚ್ಚಿಸಿದೆ.

ಗ್ರಾಮ ಸಮೀಪದ ಬೀದರ್–ಭಾಲ್ಕಿ ಮುಖ್ಯ ರಸ್ತೆಯಲ್ಲಿರುವ ಪಶು ಆಸ್ಪತ್ರೆಯು ತಗ್ಗಿನಲ್ಲಿರುವುದರಿಂದ ಹೆಚ್ಚಿನ ಮಳೆ ಸುರಿದರೆ ಸಾಕು, ಆಸ್ಪತ್ರೆಯ ಆವರಣದಲ್ಲಿ ಮಳೆ ನೀರು ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ ಆಸ್ಪತ್ರೆಗೆ ನೀರಿನಲ್ಲಿಯೇ ಹೋಗಬೇಕು, ಬರಬೇಕು. ಜಾನುವಾರಿಗೂ ನೀರಿನಲ್ಲಿಯೇ ಚಿಕಿತ್ಸೆ ನೀಡಬೇಕು. ಜಾನುವಾರು ಆರೋಗ್ಯದ ತುರ್ತು ಪರಿಸ್ಥಿತಿಯಿದ್ದರೆ ಆಸ್ಪತ್ರೆಯ ಆವರಣದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಇದು ವೈದ್ಯಾಧಿಕಾರಿಗಳು ಹಾಗೂ ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ಬೀದರ್‌–ಭಾಲ್ಕಿ ರಸ್ತೆಯ ಎತ್ತರವನ್ನು ಹೆಚ್ಚಿಸಿದ್ದರಿಂದ, ಮಳೆ ನೀರು ಹರಿದು ಹೋಗಲು ಸಾಧ್ಯವಾಗದೇ ಆಸ್ಪತ್ರೆ ಆವರಣದಲ್ಲಿಯೇ ಸಂಗ್ರಹಗೊಳ್ಳುತ್ತಿದೆ. ಹೀಗಾಗಿ ನೀರು ಹರಿದು ಹೋಗಲು ಮತ್ತು ಆಸ್ಪತ್ರೆಯ ಮೂಲಸೌಲಭ್ಯಗಳನ್ನು ಅಭಿವೃದ್ಧಿಗೊಳಿಸಬೇಕು ಎಂಬುದು ಗ್ರಾಮದ ರೈತರ ಒತ್ತಾಯವಾಗಿದೆ.  

ತೇಗಂಪೂರ, ಅಲಿಯಾಬಾದ್, ನಾಗೂರು, ಹಲಬರ್ಗಾ ಗ್ರಾಮಗಳಲ್ಲಿ ಹೈನುಗಾರಿಕೆ ಮಾಡುವ ಕೃಷಿಕರು, ರೈತರು ಇದೇ ಆಸ್ಪತ್ರೆಯ ವ್ಯಾಪ್ತಿಗೆ ಬರುತ್ತಾರೆ. ಹೀಗಾಗಿ ಜಾನುವಾರುಗಳನ್ನು ಸದಾಕಾಲ ಆರೋಗ್ಯದಿಂದ ಇರಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಆಗಸ್ಟ್‌ನಿಂದ ಈವರೆಗೆ ಮೇಲಿಂದ ಮೇಲೆ ಸುರಿದ ಭಾರಿ ಮಳೆಗೆ ಆಸ್ಪತ್ರೆ ಆವರಣ ಸಂಪೂರ್ಣ ಜಲಾವೃತಗೊಂಡಿತ್ತು. ಇದರಿಂದ ಆಸ್ಪತ್ರೆಗೆ ಹೋಗಲು ದಾರಿಯೂ ಇಲ್ಲದಂತಹ ಸ್ಥಿತಿಯಿತ್ತು. ಆಸ್ಪತ್ರೆಯ ಆವರಣದಲ್ಲಿ ಹುಲ್ಲುಕಡ್ಡಿ ಬೆಳೆದಿದೆ. ಮುಖ್ಯದ್ವಾರ ಹಾಳಾಗಿದೆ. ದನಗಳಿಗೆ ಚಿಕಿತ್ಸೆ ನೀಡಲು ಸಹಾಯಕವಾಗಿರುವ ಖಟ್ಕರ್ ಹಾಳಾಗಿದ್ದು, ಕಟ್ಟಿಗೆಗಳನ್ನು ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಾನುವಾರು ಸಾಕಿದ ರೈತರು, ಗ್ರಾಮಸ್ಥರು ಅಳಲು ತೋಡಿಕೊಂಡರು.

ADVERTISEMENT

ಬೀದರ್-ಉದಗೀರ್ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ರಸ್ತೆಯ ಎತ್ತರ ಹೆಚ್ಚಿಸಲಾಗಿದೆ. ಅಂದಿನಿಂದ ಆಸ್ಪತ್ರೆ ರಸ್ತೆ ಎತ್ತರಕ್ಕಿಂತ ಕೆಳಭಾಗದಲ್ಲಿದೆ. ಹೀಗಾಗಿ ಮಳೆಗಾಲದಲ್ಲಿ ಹೆಚ್ಚಿನ ಮಳೆ ಸುರಿದರೆ ನೀರು ಕೆಳ ಸ್ಥರದಲ್ಲಿರುವ ಆಸ್ಪತ್ರೆ ಆವರಣಕ್ಕೆ ನುಗ್ಗುತ್ತದೆ. ಆಸ್ಪತ್ರೆ ಆವರಣದಲ್ಲಿ ನೀರು ತುಂಬಿರುವುದರಿಂದ ಆಸ್ಪತ್ರೆಯ ಒಳಗಡೆ ತೆರಳಲು ನಾವು ಕಾಂಪೌಂಡ್ ಪಕ್ಕದಲ್ಲಿರುವ ಕಲ್ಲುಗಳ ಸಹಾಯದಿಂದ ಆಸ್ಪತ್ರೆ ಒಳಗಡೆ ತೆರಳಬೇಕಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಅಸಹಾಯಕತೆ ತೋಡಿಕೊಳ್ಳುತ್ತಾರೆ.

ಆಸ್ಪತ್ರೆಯ ಕಟ್ಟಡವೂ ಹಳೆಯದಾಗಿದ್ದು, ಸಕಲ ಸೌಕರ್ಯಗಳುಳ್ಳ ಆಧುನಿಕ ಪಶು ಆಸ್ಪತ್ರೆಯ ಕಟ್ಟಡವನ್ನು ನಿರ್ಮಿಸಿ, ರೈತರ ಜಾನುವಾರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ರೈತರ ಒತ್ತಾಸೆಯಾಗಿದೆ.

ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಗ್ರಾಮದ ಪಶು ಆಸ್ಪತ್ರೆ ಆವರಣದ ತುಂಬೆಲ್ಲಾ ಮಳೆ ನೀರು ಸಂಗ್ರಹಗೊಂಡಿರುವುದು
ಮಳೆ ನೀರಿನ ಸಂಗ್ರಹದಿಂದ ಪಶುಗಳ ಚಿಕಿತ್ಸೆಗೆ ತೊಂದರೆ ಆಗುತ್ತಿದೆ. ಸಮಸ್ಯೆಗಳ ಮಧ್ಯೆಯೂ ರೈತರ ಮನೆಗಳಿಗೆ ತೆರಳಿ ಪ್ರಾಣಿಗಳಿಗೆ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ
ಡಾ.ದೇವಾನಂದ ಮಾನೆ ಪಶುವೈದ್ಯಾಧಿಕಾರಿ
ಪಶು ಆಸ್ಪತ್ರೆ ಆವರಣದಲ್ಲಿ ನೀರು ಸಂಗ್ರಹಗೊಳ್ಳದಂತೆ ಗ್ರಾಮ ಪಂಚಾಯಿತಿ ವತಿಯಿಂದ ತುರ್ತು ಕ್ರಮ ವಹಿಸಿ ಸಮಸ್ಯೆ ಸರಿಡಿಸಲಾಗುವುದು
ಚಂದ್ರಕಾಂತ ಪುಲೆ ಪಿಡಿಒ
ರೈತರ ಜಾನುವಾರಿಗೆ ಉತ್ತಮ ಸೇವೆ ನೀಡಲು ಅಗತ್ಯವಾಗಿರುವ ಅತ್ಯಾಧುನಿಕ ಸೌಕರ್ಯಗಳು ಹಾಗೂ ನೂತನ ಆಸ್ಪತ್ರೆಯ ಕಟ್ಟಡಕ್ಕಾಗಿ ಪ್ರಸ್ತಾವ ಸಲ್ಲಿಸಲಾಗಿದೆ
ಡಾ.ಕಾಮರಾಯ ಜಗ್ಗಿನೋರ ಸಹಾಯಕ ನಿರ್ದೇಶಕ ಪಶು ಆಸ್ಪತ್ರೆ ಭಾಲ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.