ಬೀದರ್: ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್ಮ್ ಸ್ಟ್ರಾಂಗ್ ಹತ್ಯೆ ಘಟನೆಯ ತನಿಖೆ ಸಿಬಿಐಗೆ ಒಪ್ಪಿಸಬೇಕು ಎಂದು ಪಕ್ಷದ ಜಿಲ್ಲಾ ಘಟಕ ಆಗ್ರಹಿಸಿದೆ.
ರಾಷ್ಟ್ರಪತಿ ಅವರ ಹೆಸರಿಗೆ ಬರೆದ ಮನವಿ ಪತ್ರವನ್ನು ಪಕ್ಷದ ಪ್ರಮುಖರು ನಗರದಲ್ಲಿ ಜಿಲ್ಲಾಧಿಕಾರಿಗೆ ಸಲ್ಲಿಸಿ ಒತ್ತಾಯಿಸಿದರು.
ಆರ್ಮ್‌ಸ್ಟ್ರಾಂಗ್ ಅವರ ಹತ್ಯೆ ಭೀಕರವಾಗಿ ಮಾಡಲಾಗಿದ್ದು, ಇದು ತೀವ್ರ ಖಂಡನಾರ್ಹವಾದುದು. ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ದೊಡ್ಡ ಸಾಕ್ಷಿ. ಜಾತಿ ದೌರ್ಜನ್ಯ, ಅಸಮಾನತೆ, ಅಸ್ಪೃಶ್ಯತೆ, ಅನ್ಯಾಯಕ್ಕೆ ನಲುಗಿ ಹೋಗಿರುವ ತಳ ಸಮುದಾಯಗಳಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬುವ ಕೆಲಸ ಆರ್ಮ್‌ಸ್ಟ್ರಾಂಗ್ ಮಾಡುತ್ತಿದ್ದರು. ಅವರ ಕೊಲೆಗೆಯಲ್ಲಿ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ದಲಿತ ಸಮುದಾಯದ ಮುಖಂಡನೊಬ್ಬನಿಗೆ ಭದ್ರತೆ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಆರ್ಮ್‌ಸ್ಟ್ರಾಂಗ್ ಅವರು ಹಾಲಿ ಮುಖ್ಯಮಂತ್ರಿ ಸ್ಟಾಲಿನ್ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸಹಜವಾಗಿಯೇ ಮುಖ್ಯಮಂತ್ರಿ ಆರ್ಮ್‌ಸ್ಟ್ರಾಂಗ್ ಮೇಲೆ ಬೇಸರಗೊಂಡಿದ್ದರು. ಪ್ರಕರಣದ ತನಿಖೆಯನ್ನು ಸಿಬಿಐನಿಂದ ನಡೆಸಿ, ಸಂಚು ರೂಪಿಸಿದವರನ್ನು ಮತ್ತು ಹಂತಕರನ್ನು ಬಂಧಿಸಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.
ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ದತ್ತು ಸೂರ್ಯವಂಶಿ, ಜಿಲ್ಲಾಧ್ಯಕ್ಷ ಅಶೋಕ ಮಂಠಾಳಕರ್, ಸತ್ಯದೀಪ ಹಾವನೂರ್, ಶಕ್ತಿಕಾಂತ ಭಾವಿದೊಡ್ಡಿ, ದತ್ತಪ್ಪ ಭಂಡಾರಿ, ಯೋಹಾನ್ ಡಿಸೋಜಾ, ರಜನಿಕಾಂತ್, ಮಾರ್ಟಿನ್ ಮನ್ನಳ್ಳಿ, ನಾಗೇಶ ಭಂಗಾರೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.