ಕಮಲನಗರ: 30 ಹಾಸಿಗೆ ಸಾಮರ್ಥ್ಯವಿರುವ ಕಮಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ 6 ಕಾಯಂ ವೈದ್ಯರಿರಬೇಕು. ಆದರೆ ಇರುವುದು ಒಬ್ಬರೇ. ಹೀಗಾಗಿ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಾಗಿದೆ. ತುರ್ತಾಗಿದ್ದರೆ ಜಿಲ್ಲಾ ಕೇಂದ್ರಕ್ಕೆ ತೆರಳವುಂತಾಗಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರವು, 1999ರಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿತ್ತು. ಈಗ ತಾಲ್ಲೂಕು ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಬೇಕು. ಆದರೆ ಈವರೆಗೂ ಸಾಧ್ಯವಾಗಿಲ್ಲ.
ಆಸ್ಪತ್ರೆಯಲ್ಲಿ ಒಟ್ಟು 6 ಕಾಯಂ ವೈದ್ಯರ ಹುದ್ದೆಗಳಿವೆ. ಅದರಲ್ಲಿ ಇಬ್ಬರು ನಿಯೋಜನೆ ಮೇರೆಗೆ ಬೇರೆಡೆ ತೆರಳಿದ್ದರೆ, ಮೂವರು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ವೈದ್ಯರು, ಬೇರೆ ಸಮುದಾಯ ಕೇಂದ್ರಗಳಿಗೂ ಭೇಟಿ ನೀಡಬೇಕಿರುವುದುರಿಂದ ಸದ್ಯ ಆಸ್ಪತ್ರೆಯಲ್ಲಿರವುದು ಒಬ್ಬರೇ ಕಾಯಂ ವೈದ್ಯರು.
ಜತೆಗೆ ಸಮುದಾಯ ಕೇಂದ್ರದಲ್ಲಿ 12 ಶುಷ್ರೂಶಕಿಯರಿದ್ದು, ಸದ್ಯ 6 ಜನರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ನಾಲ್ವರು ನಿಯೋಜನೆ ಮೇರೆಗೆ ತೆರಳಿದ್ದರೆ, ಇಬ್ಬರು ಅನಧಿಕೃತವಾಗಿ ಗೈರಾಗಿದ್ದಾರೆ.
ಸಮುದಾಯ ಕೇಂದ್ರಕ್ಕೆ ನಿತ್ಯ 400 ರಿಂದ 500 ರೋಗಿಗಳು ಚಿಕಿತ್ಸೆಗಾಗಿ ಭೇಟಿ ನೀಡುತ್ತಾರೆ. ಹೀಗಾಗಿ ಒಬ್ಬ ವೈದ್ಯರು ದಿನಕ್ಕೆ 200 ರಿಂದ 250 ರೋಗಿಗಳಿಗೆ ನೋಡುವ ಪರಿಸ್ಥಿತಿಯಿದೆ. ರೋಗಿಗಳಿಗೆ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ.
ಸ್ತ್ರೀ ತಜ್ಞರಿಲ್ಲ: ಆಸ್ಪತ್ರೆಯಲ್ಲಿ ಸ್ತ್ರೀ ತಜ್ಞ ವೈದ್ಯರಿಲ್ಲ. ಹೀಗಾಗಿ ಔರಾದ್ ತಾಲ್ಲೂಕು ವೈದ್ಯಾಧಿಕಾರಿಯೇ ಇಲ್ಲಿಗೆ ವಾರದಲ್ಲಿ ಒಂದು ಬಾರಿ ಭೇಟಿ ನೀಡುತ್ತಾರೆ. ಆದರೆ ರೋಗಿಗಳಿಗೆ ಮಾಹಿತಿಯಿಲ್ಲದೇ ಮಹಿಳೆಯರು ಚಿಕಿತ್ಸೆಗಾಗಿ ಬರುವುದಿಲ್ಲ. ಅಲ್ಲದೆ ಚಿಕಿತ್ಸೆಗಾಗಿ ಮಹಿಳೆಯರು ಉದಗೀರ ಆಸ್ಪತ್ರೆಗೆ ತೆರಳುತ್ತಾರೆ. ಮಕ್ಕಳ ತಜ್ಞರು ಇಲ್ಲದ್ದರಿಂದ ಚಿಕ್ಕಮಕ್ಕಳ ಚಿಕಿತ್ಸೆಯೂ ಕೂಡ ಇಲ್ಲಿನವರಿಗೆ ಸಿಗುತ್ತಿಲ್ಲ.
ಲಂಚದ ಆರೋಪ: ಕೇಂದ್ರದಲ್ಲಿ ಹೆರಿಗೆಗಳು ನಡೆಯುತ್ತವೆ. ಆದರೆ ಸೂಕ್ತ ಸೌಲಭ್ಯಗಳಿಲ್ಲ. ಜತೆಗೆ ಒಂದು ಹೆರಿಗೆ ಮಾಡಿಸಲು ₹2000ದಿಂದ ₹3000 ಲಂಚ ನೀಡಬೇಕಾಗುತ್ತದೆ ಎಂದು ಹೆರಿಗೆ ಮಾಡಿಸಿಕೊಂಡ ಮಹಿಳೆಯ ತಾಯಿಯೊಬ್ಬರು ತಮ್ಮ ಅಳಲು ತೋಡಿಕೊಂಡರು.
ಆಸ್ಪತ್ರೆಯಲ್ಲಿ ಮಹಿಳೆಯರು ಹಾಗೂ ಪುರಷರಿಗೆ ಪ್ರತ್ಯೇಕ ತಪಾಸಣೆ ಕೊಠಡಿಗಳಿಲ್ಲ. ಒಂದೇ ಕೊಠಡಿಲ್ಲಿ ತಪಾಸಣೆ ನಡೆಯುವುದರಿಂದ ಮಹಿಳೆಯರು ಮುಜುಗರ ಅನುಭವಿಸುವಂತಾಗಿದೆ. ಇಂತಹ ಮುಜುಗರದಿಂದ ಕೆಲ ಮಹಿಳೆಯರು ಚಿಕಿತ್ಸೆ ಪಡೆಯದೇ ವಾಪಸು ತೆರಳುತ್ತಾರೆ. ಹೀಗಾಗಿ ಮಹಿಳೆಯರು ಹಾಗೂ ಪುರಷರಿಗೆ ಪ್ರತ್ಯೇಕ ಕೊಠಡಿಗಳಲ್ಲಿ ತಪಾಸಣೆ ಮಾಡಬೇಕು ಎಂದು ರೋಗಿಗಳು ಆಗ್ರಹ ಪಡಿಸಿದ್ದಾರೆ.
ಕಮಲನಗರ ತಾಲ್ಲೂಕಿನಲ್ಲಿ 6 ಪ್ರಾಥಾಮಿಕ ಆರೋಗ್ಯ ಕೇಂದ್ರಗಳಿವೆ. ಹೋಳಸಮುದ್ರ, ಠಾಣಾಕುಶನೂರ, ಮುಧೋಳ, ತೋರಣಾ, ಡೋಣಗಾಂವ ಹಾಗೂ ದಾಬಕಾಗಳಲ್ಲಿ ಆಸ್ಪತ್ರೆಗಳಿವೆ. ಅವುಗಳಲ್ಲಿ ತೋರಣಾ ಅಸ್ಪತ್ರೆಗೆ ಕಾಯಂ ವೈದ್ಯರಿಲ್ಲ. ಆಂಬುಲೆನ್ಸ್ ಇಲ್ಲ. ಉಳಿದ 5 ಕಡೆ ಕಾಯಂ ವೈದ್ಯರಿದ್ದಾರೆ. ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಿಗ್ಗೆ 9ರಿಂದ ಸಂಜೆ 4.30ವರೆಗೆ ಮಾತ್ರ ವೈದ್ಯರಿರುತ್ತಾರೆ. ಶುಶ್ರೂಷಕಿಯರು ಮತ್ತು ಡಿ ಗ್ರೂಪ್ ನೌಕರರಷ್ಟೇ ಇರುತ್ತಾರೆ. ಹಿಗಾಗಿ ರಾತ್ರಿ ವೈದ್ಯಕೀಯ ಸೇವೆ ಸಿಗುವುದಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಮಹಿಳಾ ರೋಗಿಗಳು ಆರೋಗ್ಯ ಸಮಸ್ಯೆ ನಮ್ಮ ಬಳಿ ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ನಮಲ್ಲಿ ಮಹಿಳಾ ವೈದ್ಯರ ಅವಶ್ಯಕತೆಯಿದೆ. ಹೀಗಾಗಿ ಮಹಿಳೆಯರು ಬೀದರ್ ಉದಗೀರ ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಾರೆ.
- ಡಾ.ಫಯಾಜ್ ವೈದ್ಯ ಠಾಣಾಕುಶನೂರ
ಆರೋಗ್ಯ ಸೇವೆ ಇರುವುದಕ್ಕಿಂತ ಹೆಚ್ಚಿಗೆ ನಮ್ಮ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯಾಧಿಕಾರಿಗಳನ್ನು ನೀಡಬೇಕು. ಜಿಲ್ಲಾ ಉಸ್ತುವರಿ ಸಚಿವ ಈಶ್ವರ ಖಂಡ್ರೆ ಶಾಸಕ ಪ್ರಭು ಚವಾಣ್ ಹಾಗೂ ಮೇಲಧಿಕಾರಿಗಳಿಗೆ ಮನವಿ ಮಾಡಿದ್ದೇವೆ
- ಡಾ.ಶ್ರೀಮಂತ ಹಡಪದ ಕಮಲನಗರ
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕನಿಷ್ಠ 6 ಕಾಯಂ ವೈದ್ಯರಿರಬೇಕು. ಆದರೆ ಒಬ್ಬ ಕಾಯಂ ವೈದ್ಯರಿದ್ದಾರೆ. ಉಳಿದವರು ಗುತ್ತಿಗೆ ಮತ್ತು ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಯಂ ವೈದ್ಯರು ಇರದ್ದಿದ್ದರೂ ಉತ್ತಮ ಸೇವೆ ನೀಡುತ್ತಿದ್ದಾರೆ
-ಗೋವಿಂದರಾವ ತಾಂದಳೆ ಕಮಲನಗರದ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.