ADVERTISEMENT

ನಕಲಿ ತಂಬಾಕು ಉತ್ಪನ್ನ ತಯಾರಿಕೆ: ಆರೋಪಿ ಬಂಧನ, ಇಬ್ಬರು ರಾಜಕಾರಣಿಗಳಿಗೆ ಶೋಧ

​ಪ್ರಜಾವಾಣಿ ವಾರ್ತೆ
Published 3 ಜುಲೈ 2021, 15:01 IST
Last Updated 3 ಜುಲೈ 2021, 15:01 IST

ಬೀದರ್‌: ನಕಲಿ ಗುಟ್ಕಾ ಹಾಗೂ ನಿಷೇಧಿತ ತಂಬಾಕು ಉತ್ಪನ್ನಗಳು ಬೀದರ್‌ ಜಿಲ್ಲೆಯಲ್ಲಿ ಉತ್ಪಾದನೆ ಆಗುತ್ತಿರುವುದು ಮತ್ತೆ ಬಹಿರಂಗವಾಗಿದೆ.

ತೆಲಂಗಾಣದ ಹೈದರಾಬಾದ್ ಹಾಗೂ ಮಹಾರಾಷ್ಟ್ರದ ಲಾತೂರ್‌ ಜಿಲ್ಲೆಯಲ್ಲಿ ಪೊಲೀಸರು ದಾಳಿ ನಡೆಸಿದಾಗ ನಿಷೇಧಿತ ತಂಬಾಕು ಉತ್ಪನ್ನಗಳು ಬೀದರ್‌ನಲ್ಲೇ ಉತ್ಪಾದನೆಯಾಗುತ್ತಿವೆ ಎಂದು ಆರೋಪಿಗಳು ಮಾಹಿತಿ ನೀಡಿದ್ದಾರೆ.

ಬೀದರ್‌ ನಗರವು ಗುಟ್ಕಾ ಹಾಗೂ ನಿಷೇಧಿತ ತಂಬಾಕು ಉತ್ಪಾದನೆ ಕೇಂದ್ರವಾಗಿದೆ ಎಂದು ಉಲ್ಲೇಖಿಸಿ ಲಾತೂರ್‌ ಹಾಗೂ ಹೈದರಾಬಾದ್‌ನ ಪ್ರಾದೇಶಿಕ ಪತ್ರಿಕೆಗಳು ಹಲವು ಬಾರಿ ವರದಿಗಳನ್ನು ಪ್ರಕಟಿಸಿವೆ. ಅದಕ್ಕೆ ಪುಷ್ಟಿ ನೀಡುವಂತೆ ಹೈದರಾಬಾದ್‌ನ ಶಾಹಿ ಇನಾಯತ್‌ ಗಂಜ್ ಠಾಣೆಯ ಪೊಲೀಸರು ಶನಿವಾರ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ADVERTISEMENT

ಜೂನ್‌ 26ರಂದು ಹೈದರಾಬಾದ್‌ನ ಜುಮ್ಮೆರಾತ್ ಬಜಾರ್ ನಾಕಾ ಬಳಿ ಬಂಧಿಸಲಾದ ಆರೋಪಿ ಬಳಿ ಅಂಬರ್, ನಿಸಾರ್ 900 ಮತ್ತು ವಿಮಲ್ ಗುಟ್ಕಾ ಹೆಸರಿನ ಪೌಚ್‌ಗಳು ದೊರಕಿವೆ. ಆರೋಪಿಯಿಂದ ದ್ವಿಚಕ್ರ ವಾಹನ, ಎರಡು ಚೀಲ ನಕಲಿ ಗುಟ್ಕಾ ಹಾಗೂ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಶಾಹಿ ಇನಾಯತ್ ಗಂಜ್ ಪೊಲೀಸ್ ಠಾಣೆಯ ಅಧಿಕಾರಿ ಅಜಯಕುಮಾರ ತಿಳಿಸಿದ್ದಾರೆ.

ಪೊಲೀಸರು ವಿಚಾರಣೆ ತೀವ್ರಗೊಳಿಸಿದ ಸಂದರ್ಭದಲ್ಲಿ ಆರೋಪಿಯು ಬೀದರ್‌ನ ಇಬ್ಬರು ರಾಜಕೀಯ ಮುಖಂಡರ ಹೆಸರು ಹೇಳಿದ್ದಾನೆ. ಗಾಂಧಿ ಗಂಜ್‌ ಪ್ರದೇಶದಲ್ಲಿ ಉತ್ಪಾದನಾ ಘಟಕ ಇದೆ. ಇಬ್ಬರ ಸಹಾಯದಿಂದ ವ್ಯವಹಾರ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ. ಆರೋ‍ಪಿ ಶೇಕ್ ಖಲೀದ್‌ ಹೇಳಿಕೆ ಆಧರಿಸಿ ಬೀದರ್‌ನ ಇಬ್ಬರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹೈದರಾಬಾದ್ ಪೊಲೀಸರು ತಿಳಿಸಿದ್ದಾರೆ.

ಬೀದರ್ ನಗರದಲ್ಲಿ ಗುಟ್ಕಾ ತಯಾರಿಕೆಯ ನಾಲ್ಕು ಘಟಕಗಳು ಇವೆ. ಕೈಗಾರಿಕೆ ಪ್ರದೇಶದಲ್ಲಿರುವ ಒಂದು ಘಟಕದಲ್ಲಿ ಬೆಳಿಗ್ಗೆ ಮದುವೆ, ಮುಂಜಿವೆಗಳು ನಡೆಯುತ್ತವೆ. ರಾತ್ರಿ ವೇಳೆಯಲ್ಲಿ ಗುಟ್ಕಾ ತಯಾರು ಮಾಡಲಾಗುತ್ತಿದೆ. ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿ ಲಭ್ಯವಾಗುವ ಸಾಧ್ಯತೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.