ಬೀದರ್: ‘ಶಾಸಕ ಪ್ರಭು ಚವಾಣ್ ಹಾಗೂ ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಲಾಗಿದೆ’ ಎಂದು ಚವಾಣ್ ಸಂಬಂಧಿ ಕೊಟ್ಟಿರುವ ದೂರಿನ ಮೇರೆಗೆ ಎಂಟು ಜನರ ವಿರುದ್ಧ ತಾಲ್ಲೂಕಿನ ಹೊಕ್ರಾಣಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.
ಪ್ರಭು ಚವಾಣ್ ಅವರ ಮಗ ಪ್ರತೀಕ್ ಚವಾಣ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಾರಾಷ್ಟ್ರದ ಯುವತಿಯೊಬ್ಬರು ಮಹಿಳಾ ಪೊಲೀಸ್ ಠಾಣೆಗೆ ಭಾನುವಾರ ದೂರು ಕೊಟ್ಟಿದ್ದರು. ಈಗ ಆ ಯುವತಿಯ ಪೋಷಕರು, ಸಹೋದರ ಸೇರಿದಂತೆ ಎಂಟು ಜನರ ವಿರುದ್ಧ ಶಾಸಕರ ಸಂಬಂಧಿ ಮುರಳಿಧರ ಪವಾರ್ ಎಂಬುವರು ದೂರು ಕೊಟ್ಟಿದ್ದಾರೆ.
ಈ ಎಂಟು ಜನರ ಜತೆಗೆ ಇತರೆ 30ಕ್ಕೂ ಹೆಚ್ಚು ಜನ ತಂಡ ಇದೇ ಜುಲೈ 5ರಂದು ರಾತ್ರಿ 8.30ರ ಸುಮಾರಿಗೆ ಅಕ್ರಮವಾಗಿ ಮನೆಗೆ ನುಗ್ಗಿ ಕಲ್ಲು, ಕಟ್ಟಿಗೆ ಹಾಗೂ ಇತರೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಶಾಸಕರು ತಪ್ಪಿಸಿಕೊಂಡಿದ್ದು, ನನಗೆ ಬೆನ್ನು ಹಾಗೂ ಟೊಂಕದ ಮೇಲೆ ಗಾಯಗಳಾಗಿವೆ. ಘಟನೆಯಲ್ಲಿ ಶಾಸಕರ ಪುತ್ರ ಪ್ರತೀಕ್ ಚವಾಣ್ ಹಾಗೂ ಅಮಿತ್ ರಾಠೋಡ್ ಅವರಿಗೂ ಗಾಯವಾಗಿದೆ. ಮನೆಯಲ್ಲಿದ್ದ ಮಹಿಳೆಯರನ್ನು ಬಿಡದೆ ಅವಾಚ್ಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಈ ಎಲ್ಲ ಘಟನೆಗೆ ಮುಖಂಡ ದೀಪಕ್ ಪಾಟೀಲ್ ಚಾಂದೋರಿ ಅವರ ಕುಮ್ಮಕು ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.