ಔರಾದ್: ‘ಗ್ರಾಹಕರು ತಾವು ಖರೀದಿಸಿದ ವಸ್ತು ಹಾಗೂ ಪಡೆದ ಸೇವೆಯಲ್ಲಿ ವಂಚನೆಯಾದರೆ ಸಂಬಂಧಿತ ಕಂಪನಿ ವಿರುದ್ಧ ದೂರು ದಾಖಲಿಸಿ ಪರಿಹಾರ ಪಡೆಯಲು ಅವಕಾಶವಿದೆ’ ಎಂದು ನ್ಯಾಯಾಧೀಶ ಅಭಿನಯ ಹೇಳಿದರು.
ಇಲ್ಲಿಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ವಕೀಲರ ಸಂಘ ಹಾಗೂ ಪಟ್ಟಣ ಪಂಚಾಯತ್ ಜಂಟಿ ಆಶ್ರಯದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮಾಹಿತಿ ಕೊರತೆಯಿಂದ ಗ್ರಾಹಕರಿಗೆ ಮೋಸ ಆಗುತ್ತದೆ. ಇದನ್ನು ತಡೆಯಬೇಕಾದರೆ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದುಕೊಳ್ಳಬೇಕು. ವಂಚನೆ ಮಾಡಿದ ಕಂಪನಿಗಳ ವಿರುದ್ಧ ಧೈರ್ಯದಿಂದ ದೂರು ದಾಖಲಿಸಬೇಕು’ ಎಂದು ಹೇಳಿದರು.
ವಕೀಲ ಬಾಲಾಜಿ ಕಂಬಾರ ಮಾತನಾಡಿ, ‘ರೈತರಿಗೆ ನಕಲಿ ಬೀಜ ವಿತರಣೆ ಸೇರಿದಂತೆ ತಾವು ಖರೀದಿಸಿದ ವಸ್ತುವಿನಲ್ಲಿ ಸಮಸ್ಯೆ ಇದ್ದರೆ ಅಂತಹ ಕಂಪನಿ ವಿರುದ್ಧ ದೂರು ದಾಖಲಿಸಿ ಪರಿಹಾರ ಪಡೆದುಕೊಳ್ಳಲು ಅವಕಾಶವಿದೆ. ಸಂವಿಧಾನದಲ್ಲಿ ಗ್ರಾಹಕರಿಗಾಗಿ ತಮ್ಮದೇ ಆದ ಹಕ್ಕು ಇದೆ. ಹಕ್ಕು ಉಲ್ಲಂಘಿಸಿದವರಿಗೆ ಶಿಕ್ಷೆಯೂ ನೀಡಲಾಗುತ್ತದೆ’ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸರುಬಾಯಿ ಘುಳೆ, ಉಪಾಧ್ಯಕ್ಷೆ ರಾಧಾಬಾಯಿ ನರೋಟೆ, ಮುಖ್ಯಾಧಿಕಾರಿ ಸ್ವಾಮಿದಾಸ, ಸದಸ್ಯರು, ಪಟ್ಟಣದ ನಿವಾಸಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.