
ಔರಾದ್: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ(ಎಪಿಎಂಸಿ) ನಿವೇಶನ(ಮಳಿಗೆ)ಗಳ ಹಂಚಿಕೆಯಲ್ಲಿ ನಿಯಮ ಉಲ್ಲಂಘಿಸಲಾಗಿದೆ ಎಂದು ಸ್ಥಳೀಯ ಮುಖಂಡರು ಹಾಗೂ ರೈತ ಸಂಘದ ಸದಸ್ಯರು ದೂರಿದರು.
ಇಲ್ಲಿಯ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮುಖಂಡ ಶಿವರಾಜ ದೇಶಮುಖ ಮಾತನಾಡಿ, ‘ಕೃಷಿ ಮಾರುಕಟ್ಟೆ ನಿಯಮ ಉಲ್ಲಂಘಿಸಿ ತಮಗೆ ಬೇಕಾದವರು ಹಾಗೂ ಹಣ ಕೊಟ್ಟವರಿಗೆ ನಿವೇಶನ(ಮಳಿಗೆ) ಹಂಚಿಕೆ ಮಾಡಲಾಗಿದೆ. ಒಂದು ನಿವೇಶನಕ್ಕೆ ₹ 5.40 ಲಕ್ಷ ನಿಗದಿ ಮಾಡಲಾಗಿದ್ದು, ತಮಗೆ ಬೇಕಾದವರಿಗೆ ₹ 10ರಿಂದ 15 ಲಕ್ಷ ಹಣ ಪಡೆದು ನಿವೇಶನ ಹಂಚಿಕೆ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಒಂದೊಂದು ಕುಟುಂಬದಲ್ಲಿ ಇಬ್ಬರು, ಮೂವರಿಗೆ ಹಾಗೂ ಮಹಾರಾಷ್ಟ್ರದಲ್ಲಿರುವ ತಮ್ಮ ಸಂಬಂಧಿಕರಿಗೆ ನಿವೇಶನ ಹಂಚಿಕೆ ಮಾಡಿದ್ದಾರೆ’ ಎಂದು ದೂರಿದರು.
‘ಔರಾದ್ ಈ ಭಾಗದ ದೊಡ್ಡ ಜಾನುವಾರ ಮಾರುಕಟ್ಟೆ. ಇಲ್ಲಿ ವಾರಕ್ಕೊಮ್ಮೆ ನಡೆಯುವ ಸಂತೆಯಲ್ಲಿ ಸಾವಿರಾರು ಜಾನುವಾರು ಬರುತ್ತವೆ. ಈ ಜಾನುವಾರು ಸಂತೆಗಾಗಿ ಇರುವ ಜಾಗ ನಿವೇಶನವಾಗಿ ಮಾರಾಟ ಮಾಡಿ, ಹಣ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲಿ ಎಪಿಎಂಸಿ ಕಾರ್ಯದರ್ಶಿ ನೇರವಾಗಿ ಶಾಮೀಲಾಗಿದ್ದಾರೆ’ ಎಂದು ಆರೋಪಿಸಿದರು.
‘ಔರಾದ್ ಎಪಿಎಂಸಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಯದಿರುವ ಮಳಿಗೆಗಳನ್ನು ಬೇರೆ ಬೇರೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ. ಹೀಗಿರುವಾಗ ಮತ್ತೆ ಹೊಸ ನಿವೇಶನ ಹಂಚಿಕೆ ಅಗತ್ಯವಿರಲಿಲ್ಲ. ಆದರೂ ಹಣಕ್ಕಾಗಿ ಇದೆಲ್ಲ ನಡೆಯುತ್ತಿದೆ’ ಎಂದು ದೂರಿದರು.
‘ಎಪಿಎಂಸಿ, ರೈತರು ಹಾಗೂ ವ್ಯಾಪಾರಿಗಳಿಗಾಗಿ ಇರುವ ಜಾಗ. ಅದನ್ನು ನಿಯಮಬಾಹಿರವಾಗಿ ನಿವೇಶನ ಮಾಡಿ, ಮಾರಾಟ ಮಾಡಿದ್ದು ಸರಿಯಲ್ಲ. ಕೂಡಲೇ ಅದನ್ನು ರದ್ದು ಮಾಡಬೇಕು’ ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪ್ರಕಾಶ ಬಾವುಗೆ, ರಾಮಣ್ಣ ವಡೆಯರ, ಸುಧಾಕರ ಕೊಳ್ಳೂರ ಆಗ್ರಹಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ನೆಹರು ಪಾಟೀಲ, ರೈತ ಮುಖಂಡ ಶ್ರೀಮಂತ ಪಾಟೀಲ, ಝರಣಪ್ಪ ದೇಶಮುಖ, ಚೆನ್ನಬಸಪ್ಪ ಬಿರಾದಾರ, ಮಾರುತಿರೆಡ್ಡಿ, ಕೃಷ್ಣಾರೆಡ್ಡಿ, ಅಂಜಾರೆಡ್ಡಿ, ಸೂರ್ಯಕಾಂತ ಮಾಲೆ ಸಭೆಯಲ್ಲಿದ್ದು ಎಪಿಎಂಸಿ ನಿವೇಶನ ಹಂಚಿಕೆ ರದ್ದುಪಡಿಸಲು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.