ಔರಾದ್: ಕುಡಿಯುವ ನೀರಿಗಾಗಿ ಕಳೆದ ಎಂಟು ದಿನಗಳಿಂದ ಕಾಯುತ್ತ ಕುಳಿತ ಪಟ್ಟಣದ ಜನರಿಗೆ ಬುಧವಾರ ಕಲುಷಿತ ನೀರು ಪೂರೈಕೆಯಾಗಿದೆ.
ಹಾಲಹಳ್ಳಿ ಬ್ಯಾರೇಜ್‍ನಿಂದ ಪಟ್ಟಣದ ವಿವಿಧ ವಾರ್ಡ್‍ಗಳಿಗೆ ಪೂರೈಸಿದ ನೀರು ಕುಲುಷಿತವಾಗಿದ್ದು, ಕುಡಿಯಲು ಅಷ್ಟೇ ಅಲ್ಲ, ಬಳಸಲು ಯೋಗ್ಯ ಅಲ್ಲ ಎಂದು ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಇಷ್ಟು ದಿನ ನೀರು ಬಂದ್ರೆ ಸಾಕು ಅಂತಿದ್ವಿ, ಈಗ ಬಂದ ನೀರು ಕುಡಿದ್ರೆ ಬದುಕ್ತೀವಿ ಅನ್ನೋ ನಂಬಿಕೆನೇ ಇಲ್ಲ’ ಎಂದು ಈ ಕಲುಷಿತ ನೀರು ಪೂರೈಕೆ ಕುರಿತು ಗಾಂಧಿ ಚೌಕ್‍ನ ವಾರ್ಡ್ ನಂಬರ್ 7ರ ಮಹಿಳೆಯರು ಗೋಳು ತೋಡಿಕೊಂಡಿದ್ದಾರೆ.
‘ನಾವು ಬೇಸಿಗೆ ಆರಂಭದಿಂದಲೂ ಕುಡಿಯುವ ನೀರಿನ ಕೊರತೆ ಎದುರಿಸುತ್ತಿದ್ದೇವೆ. ಎಂಟು ದಿನಗಳಿಂದ ಹನಿ ನೀರು ಬಂದಿಲ್ಲ. ಈಗ ಬಂದಿರುವ ನೀರು ಗಬ್ಬು ವಾಸನೆ ಬರುತ್ತಿವೆ. ಜಾನುವಾರುಗಳು ಕುಡಿಯುತ್ತಿಲ್ಲ’ ಎಂದು ಪ್ರವಾಸಿ ಬಂದಿರದ ಬಳಿಯ ಶಿವನಗರ ಬಡಾವಣೆ ಜನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ನೀರಿನ ಸಮಸ್ಯೆ ಕುರಿತು ನಿರಂತರವಾಗಿ ಸಂಬಂಧಿತರ ಗಮನಕ್ಕೆ ತರುತ್ತಿದ್ದೇವೆ. ನಾಳೆ ಬರುತ್ತೆ, ನಾಡಿದ್ದು ಬರುತ್ತೆ ಎಂದು ಕಳೆದ ಎಂಟು ದಿನಗಳಿಂದ ಹೇಳುತ್ತಿದ್ದಾರೆ. ಆದರೆ ಇಂದು ಪೂರೈಕೆಯಾಗಿದ್ದು ಕುಡಿಯುವ ನೀರಲ್ಲ. ಬದಲಿಗೆ ಹೊಸಲು ನೀರು’ ಎಂದು ಸಾಮಾಜಿಕ ಕಾರ್ಯಕರ್ತ ಅನೀಲ ಜಿರೋಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಕಾರಂಜಾ ಜಲಾಶಯದಿಂದ ಹರಿಬಿಡಲಾದ ನೀರು ನಿನ್ನೆಯ ತನಕ ಹಾಲಹಳ್ಳಿ ಬ್ಯಾರೇಜ್‍ಗೆ ಬಂದಿರಲಿಲ್ಲ. ಹೀಗಾಗಿ ಬ್ಯಾರೇಜ್ ಬಳಿ ಸಂಗ್ರಹವಾದ ನೀರು ಪಟ್ಟಣದ ಕೆಲ ಭಾಗಕ್ಕೆ ಪೂರೈಸಲಾಗಿದೆ. ನಾಳೆಯಿಂದ ಶುದ್ಧ ನೀರು ಪೂರೈಸಲು ವ್ಯವಸ್ಥೆ ಮಾಡಲಾಗುವುದು’ ಪಟ್ಟಣ ಪಂಚಾಯಿತಿ ನೀರು ಬಿಡುವ ಸಿಬ್ಬಂದಿ ಹೇಳುತ್ತಾರೆ.
‘ಪಟ್ಟಣಕ್ಕೆ ಬುಧವಾರ ಪೂರೈಕೆಯಾದ ನೀರು ಕಲುಷಿತ ಎಂಬುದು ನನಗೂ ಮಾಹಿತಿ ಬಂದಿದೆ. ಈ ಬಗ್ಗೆ ಸಂಬಂಧಿತರ ಜತೆ ಮಾತನಾಡಿದ್ದೇನೆ. ಕಾರಂಜಾ ನೀರು ಹಾಲಹಳ್ಳಿ ಬ್ಯಾರೇಜ್‍ಗೆ ಬಂದಿದ್ದು, ನಾಳೆಯಿಂದ ಶುದ್ಧ ನೀರು ಪೂರೈಸುತ್ತೇವೆ’ ಎಂದು ಪಟ್ಟಣ ಪಂಚಾಯತ್ ಆಡಳಿತಾಧಿಕಾರಿ ಆದ ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.