ADVERTISEMENT

ಔರಾದ್ | ಪಂಪಸೆಟ್‌ಗಳಿಗೆ ಸಿಗದ ವಿದ್ಯುತ್, ಒಣಗುತ್ತಿದೆ ಕಬ್ಬು

​ಪ್ರಜಾವಾಣಿ ವಾರ್ತೆ
Published 10 ಮೇ 2025, 5:46 IST
Last Updated 10 ಮೇ 2025, 5:46 IST
ಔರಾದ್ ತಾಲ್ಲೂಕಿನ ನಾಗೂರ ಗ್ರಾಮದ ರೈತ ಸಂತೋಷ ಮಸ್ಕಲೆ ಅವರ ಹೊಲದಲ್ಲಿನ ಕಬ್ಬು ನೀರು ಬಿಡಲು ಆಗದೆ ಒಣಗುತ್ತಿದೆ
ಔರಾದ್ ತಾಲ್ಲೂಕಿನ ನಾಗೂರ ಗ್ರಾಮದ ರೈತ ಸಂತೋಷ ಮಸ್ಕಲೆ ಅವರ ಹೊಲದಲ್ಲಿನ ಕಬ್ಬು ನೀರು ಬಿಡಲು ಆಗದೆ ಒಣಗುತ್ತಿದೆ   

ಔರಾದ್: ತಾಲ್ಲೂಕಿನ ಕೆಲ ಹೋಬಳಿಯಲ್ಲಿ ಕೃಷಿ ಪಂಪಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಸಿಗದೆ ರೈತರಿಗೆ ಸಮಸ್ಯೆಯಾಗಿದೆ.

ಸಂತಪುರ ಹೋಬಳಿಯ ಹೆಡಗಾಪೂರ, ನಾಗೂರ, ಬೆಳಕುಣಿ ಸೇರಿದಂತೆ ಈ ಭಾಗದ ವಿವಿಧ ಗ್ರಾಮಗಳ ರೈತರು ಅಲ್ಪಸ್ವಲ್ಪ ನೀರಾವರಿ ಪ್ರದೇಶ ಮಾಡಿಕೊಂಡಿದ್ದಾರೆ. ಕಬ್ಬು, ತರಕಾರಿ ಹಾಗೂ ಕೆಲ ಬೇಸಿಗೆ ಬೆಳೆ ಬೆಳೆಯುತ್ತಾರೆ. ಆದರೆ, ಕಳೆದ ಕೆಲ ದಿನಗಳಿಂದ ಕೃಷಿ ಪಂಪಸೆಟ್‌ಳಿಗೆ ಸರ್ಮಪಕ ವಿದ್ಯುತ್ ಸಿಗದೇ ಬೆಳೆಗಳು ಒಣಗುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

‘ನಾಗೂರ ಸೇರಿದಂತೆ ನಮ್ಮ ಊರಿನ ಅಕ್ಕ ಪಕ್ಕದಲ್ಲಿ 400 ಎಕರೆಗೂ ಜಾಸ್ತಿ ಕಬ್ಬು ಇದೆ. ರೈತರು ಸಾಕಷ್ಟು ಹಣ ಖರ್ಚು ಮಾಡಿ ಕೊಳವೆ ಬಾವಿ, ತೆರೆದ ಬಾವಿ ಮಾಡಿಕೊಂಡು ಕಬ್ಬು ಬೆಳೆಸುತ್ತಿದ್ದಾರೆ. ಆದರೆ, ಸರ್ಕಾರದ ನಿಯಮದಂತೆ ಕೃಷಿ ಪಂಪಸೆಟ್‌ಗಳಿಗೆ ನಿತ್ಯ 7 ಗಂಟೆ ತ್ರಿಫೇಸ್ ವಿದ್ಯುತ್ ಕೊಡಬೇಕು. ಆದರೆ, ಎರಡು ಗಂಟೆಯೂ ನಿಯಮಿತವಾಗಿ ವಿದ್ಯುತ್ ಸಿಗತ್ತಿಲ್ಲ. ಪದೇ ಪದೇ ಕಡಿತ ಆಗುತ್ತಿರುವುದು ನಮಗೆ ದೊಡ್ಡ ಸಮಸ್ಯೆ. ಇಂತಹ ಕೆಟ್ಟ ಬಿಸಿಲಲ್ಲಿ ವಿದ್ಯುತ್ ಬರುವಿಕೆಗಾಗಿ ಕಾಯಬೇಕಾಗಿದೆ. ಪದೇ ಪದೇ ಕಡಿತ ಆಗಿ ಮೋಟಾರ್‌ಗಳು ಸುಟ್ಟು ಹೋಗುತ್ತಿವೆ’ ಎಂದು ನಾಗೂರ ರೈತ ಸಂತೋಷ ಮಸ್ಕಲೆ ಗೋಳು ತೋಡಿಕೊಂಡಿದ್ದಾರೆ.

ADVERTISEMENT

ಸಮಸ್ಯೆ ಪರಿಹರಿಸುವಂತೆ ಸಂಬಂಧಿಸಿದ ಜೆಸ್ಕಾಂ ಜೆಇ, ಲೈನ್‌ಮನ್ ಅವರುಗಳನ್ನು ಕೇಳಿದರೆ ರಿಪೇರಿ ಕೆಲಸ ಇರುವುದರಿಂದ ಕಡಿತ ಆಗತ್ತಿದೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ. ಮೇಲಾಧಿಕಾರಿಗಳು ಈ ವಿಷಯ ಗಂಭೀರವಾಗಿ ಪರಿಗಣಿಸಿ ರೈತರಿಗೆ ನಿಯಮಿತ ವಿದ್ಯತ್ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

’ರಿಪೇರಿ ಹೆಸರಿನಲ್ಲಿ ಪದೇ ಪದೇ ವಿದ್ಯುತ್ ಕಡಿತ ಮಾಡುವುದು ಸರಿಯಲ್ಲ. ಬೆಳಿಗ್ಗೆ 9ರ ಮೊದಲು ಹಾಗೂ ಸಂಜೆ 4 ಗಂಟೆ ನಂತರ ರಿಪೇರಿ ಮಾಡಿಕೊಳ್ಳಿ. ಪಂಪಸೆಟ್‌ಳಿಗೆ ಪೂರೈಕೆಯಾಗುವ ಸಮಯದಲ್ಲಿ ವಿದ್ಯುತ್ ಕಡಿತ ಮಾಡಿದರೆ ರೈತರಿಗೆ ಸಮಸ್ಯೆಯಾಗಲಿದೆ’ ಎಂದು ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಮಳೆ ಗಾಳಿ ಜಾಸ್ತಿಯಾಗಿ ಕಂಬಗಳು ಬಿದ್ದಿವೆ. ಹೀಗಾಗಿ ಕೆಲ ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಸರಿಪಡಿಸುವ ಕೆಲಸ ನಡೆದಿದೆ
ರವಿ ಕಾರಬಾರಿ ಎಇಇ ಜೆಸ್ಕಾಂ ಔರಾದ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.