ಔರಾದ್: ತಾಲ್ಲೂಕಿನ ಕೌಡಗಾಂವ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಕೈತೋಟ ಬೇಸಿಗೆಯಲ್ಲೂ ಹಸಿರಿನಿಂದ ಕಂಗೊಳಿಸುತ್ತಿದೆ.
ನುಗ್ಗೆ, ನಿಂಬೆ, ಬೇವು, ಹೊಂಗೆ, ಪೇರಳೆ, ನೇರಳೆ ಸೇರಿದಂತೆ ವಿವಿಧ ಹಣ್ಣು, ಹೂವಿನ ಗಿಡಗಳು ಶಾಲೆಯ ಪರಿಸರ ಅಂದ ಚಂದಗೊಳಿಸಿವೆ. ಒಂದು ವರ್ಷದ ಹಿಂದೆ ನೆಡಲಾದ ಸಸಿಗಳನ್ನು ವಿದ್ಯಾರ್ಥಿಗಳೇ ಪೋಷಣೆ ಮಾಡುತ್ತಿರುವುದು ವಿಶೇಷವಾಗಿದೆ. ಈಗ ಬೇಸಿಗೆ ರಜೆ ಇದ್ದರೂ ಕೆಲ ವಿದ್ಯಾರ್ಥಿಗಳು ನಿತ್ಯ ಬೆಳಿಗ್ಗೆ ಶಾಲೆಗೆ ಬಂದು ಗಿಡಗಳಿಗೆ ನೀರು ಹಾಕಿ ಪೋಷಣೆ ಮಾಡುತ್ತಿದ್ದಾರೆ.
1 ರಿಂದ 7ನೇ ತರಗತಿ ವರೆಗಿನ ಈ ಶಾಲೆಯಲ್ಲಿ 198 ಮಕ್ಕಳು ಓದುತ್ತಿದ್ದು, ಅವರಿಗೆ ಪಾಠದ ಜತೆ ಪರಿಸರ ಹಾಗೂ ಪುಸ್ತಕ ಪ್ರೇಮ ಬೆಳೆಸಲಾಗುತ್ತಿದೆ. ಈ ಶಾಲೆ ಅತ್ಯುತ್ತಮ ಕಟ್ಟಡ ಹಾಗೂ ಕಂಪೌಂಡ್ ಹೊಂದಿದೆ. ಗ್ರಾಮಕ್ಕೆ ಪೂರೈಕೆಯಾಗುವ ನಲ್ಲಿ ನೀರಿನ ಸಂಪರ್ಕವನ್ನು ಶಾಲೆಗೂ ಪಡೆಯಲಾಗಿದೆ. ಇದೇ ನೀರು ಶಾಲೆ ಆವರಣದಲ್ಲಿನ ಗಿಡಗಳಿಗೆ ಹರಿಸಲಾಗುತ್ತಿದೆ.
‘ನಾವು ನಿತ್ಯ ಬೆಳಿಗ್ಗೆ ಎದ್ದು ಶಾಲೆ ಕಡೆ ಬರುತ್ತೇವೆ. ನಲ್ಲಿ ನೀರು ಬಂದ ಕೂಡಲೇ ಎಲ್ಲ ಗಿಡಗಳಿಗೆ ಹಾಕುತ್ತೇವೆ. ಕೆಲ ಹೊತ್ತು ಗಿಡದ ಬುಡದಲ್ಲಿನ ಹುಲ್ಲು ಕಸ ತೆಗೆಯುತ್ತೇವೆ. ಸ್ವಲ್ಪ ಹೊತ್ತು ಆಟ ಆಡಿ ಶಾಲೆ ಗೇಟಿಗೆ ಬೀಗ ಹಾಕಿ ಮನೆಗೆ ಹೋಗುತ್ತೇವೆ’ ಎನ್ನುತ್ತಾರೆ ವಿದ್ಯಾರ್ಥಿಗಳಾದ ಪ್ರವೀಣಕುಮಾರ, ಸತೀಶ್, ಹಾಗೂ ವಿಷ್ಣು ಹೇಳುತ್ತಾರೆ.
‘ಶಿಕ್ಷಕ ಮುತ್ತಣ್ಣ ಅವರು ಈ ಬೇಸಿಗೆ ರಜೆಯಲ್ಲೂ ಎರಡು ದಿನಕ್ಕೊಮ್ಮೆ ಶಾಲೆಗೆ ಬಂದು ನಮಗೆ ಮಾರ್ಗದರ್ಶನ ಮಾಡುತ್ತಾರೆ. ಅವರು ಹೇಳಿದಂತೆ ನಾವು ಸಸಿಗಳ ಪೋಷಣೆ ಮಾಡುತ್ತೇವೆ’ ಎನ್ನುತ್ತಾರೆ ವಿದ್ಯಾರ್ಥಿಗಳು.
ಇದು ಸರ್ಕಾರಿ ಶಾಲೆಯಾದರೂ ಇಲ್ಲಿ ಕಾನ್ವೆಂಟ್ ಮಾದರಿಯಲ್ಲಿ ಶಿಕ್ಷಣ ನೀಡಲಾಗುತ್ತದೆ. ಎಲ್ಲ ತರಗತಿಯಲ್ಲಿ ಸ್ಮಾರ್ಟ್ ಬೋರ್ಡ್ ಬಳಕೆ ಮಾಡಲಾಗುತ್ತದೆ. ಶಾಲೆಯಲ್ಲಿ ಪ್ರೊಜೆಕ್ಟರ್ ವ್ಯವಸ್ಥೆ ಇದ್ದು, ಮಕ್ಕಳಿಗೆ ಅದರ ಮೂಲಕ ಹೊಸ ಹೊಸ ವಿಷಯ ತಿಳಿಸಿ ಕೊಡಲಾಗುತ್ತಿದೆ. ಶಿಕ್ಷಕರ ಕಾಳಜಿ ಹಾಗೂ ಪಾಲಕರ ಸಹಕಾರದಿಂದ ಗ್ರಂಥಾಲಯ ಮಾಡಲಾಗಿದೆ. ‘ಮೊಬೈಲ್ ಬಿಡಿ ಪುಸ್ತಕ ಹಿಡಿ’ ಅಭಿಯಾನ ಯಶಸ್ವಿಯಾಗಿದ್ದು, ಮಕ್ಕಳಲ್ಲಿ ಓದುವ ಪ್ರವೃತ್ತಿ ಹೆಚ್ಚುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು.
ಶಾಲಾ ಆವರಣದಲ್ಲಿ 40 ವೈವಿಧ್ಯಮಯ ಗಿಡಗಳಿದ್ದು, ಮಕ್ಕಳೇ ಅವುಗಳಿಗೆ ನಿತ್ಯ ನೀರುಣಿಸಿ ಪೋಷಣೆ ಮಾಡುತ್ತಿದ್ದಾರೆ
-ಮುತ್ತಣ್ಣ, ಶಿಕ್ಷಕರು ಕೌಡಗಾಂವ್ ಶಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.