ADVERTISEMENT

ದೇಶಾಭಿಮಾನ ಯಾರೊಬ್ಬರ ಸ್ವತ್ತಲ್ಲ: ಖಂಡ್ರೆ

ಭಾಲ್ಕಿ: ಕಾಂಗ್ರೆಸ್‌ನಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 3:16 IST
Last Updated 14 ಆಗಸ್ಟ್ 2022, 3:16 IST
ಭಾಲ್ಕಿಯಲ್ಲಿ ನಡೆದ ಸ್ವಾತಂತ್ರ್ಯದ ನಡಿಗೆಯಲ್ಲಿ ಶಾಸಕ ಈಶ್ವರ ಖಂಡ್ರೆ, ಎಂಎಲ್‌ಸಿ ಭೀಮರಾವ್ ಪಾಟೀಲ ಭಾಗವಹಿಸಿರುವುದು
ಭಾಲ್ಕಿಯಲ್ಲಿ ನಡೆದ ಸ್ವಾತಂತ್ರ್ಯದ ನಡಿಗೆಯಲ್ಲಿ ಶಾಸಕ ಈಶ್ವರ ಖಂಡ್ರೆ, ಎಂಎಲ್‌ಸಿ ಭೀಮರಾವ್ ಪಾಟೀಲ ಭಾಗವಹಿಸಿರುವುದು   

ಭಾಲ್ಕಿ: ‘ದೇಶಾಭಿಮಾನ, ರಾಷ್ಟ್ರಪ್ರೇಮದ ಕುರಿತು ಕೆಲವರು ನಾಟಕ ಆಡುತ್ತಿದ್ದಾರೆ. ಆದರೆ, ಇದು ಯಾರೊಬ್ಬರ ಸ್ವತ್ತಲ್ಲ. ಯಾರೊಬ್ಬರಿಗೂ ಬರೆದುಕೊಟ್ಟಿಲ್ಲ’ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

ಪಟ್ಟಣದ ಮಹಾತ್ಮ ಗಾಂಧಿ ವೃತ್ತದಲ್ಲಿ ತಾಲ್ಲೂಕು ಕಾಂಗ್ರೆಸ್ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ಯದ ಹಿಂದೆ ತ್ಯಾಗ, ಬಲಿದಾನ ಅಡಗಿದೆ. ರಕ್ತ ಕ್ರಾಂತಿ ಹರಿದಿದೆ. ಸಾವಿರಾರೂ ಜನ ಸೆರೆಮನೆ ವಾಸ ಅನುಭವಿಸುತ್ತಿದ್ದಾರೆ. ಎಲ್ಲ ವರ್ಗ, ಭಾಷೆ, ಪ್ರಾಂತ್ಯದ ಜನ ಸ್ವಾತಂತ್ರ್ಯಕ್ಕಾಗಿ ಹೋರಾಟ, ತ್ಯಾಗ, ಬಲಿದಾನ ಮಾಡಿದ್ದಾರೆ ಎನ್ನುವುದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಕಾಂಗ್ರೆಸ್ ನಾಯಕರ ಕೊಡುಗೆ ದೊಡ್ಡದಿದೆ. ಮಹಾತ್ಮ ಗಾಂಧಿ, ಜವಹರಲಾಲ್ ನೆಹರೂ, ಸರ್ದಾರ್ ವಲ್ಲಭಭಾಯಿ ಪಟೇಲ್ ಮುಂತಾದವರು ಜೈಲುವಾಸ ಅನುಭವಿಸಿದ್ದಾರೆ ಎಂದು ಹೇಳಿದರು.

ADVERTISEMENT

ನೆಹರೂ, ಇಂದಿರಾಗಾಂಧಿ, ರಾಜೀವ ಗಾಂಧಿ ಸೇರಿದಂತೆ ಮನಮೋಹನ್ ಸಿಂಗ್ ಅವಧಿಯವರೆಗೂ ದೇಶದ ಜನರ ಅಭಿವೃದ್ಧಿಗಾಗಿ ನೂರಾರು ಯೋಜನೆಗಳನ್ನು ರೂಪಿಸಿ ದೇಶ ಕಟ್ಟುವ ಕೆಲಸವನ್ನು ಮಾಡಿದ್ದಾರೆ ಎಂದರು.

ಆದರೆ ವಿರೋಧಿಗಳು ದೇಶಕ್ಕೆ ಕಾಂಗ್ರೆಸ್ ನ ಕೊಡುಗೆ ಏನೆಂದು ಪ್ರಶ್ನಿಸಿಸುತ್ತಾರೆ. ಹಾಗಾಗಿ ಯುವ ಸಮುದಾಯ ಇತಿಹಾಸ, ಪರಂಪರೆ, ಚರಿತ್ರೆಯನ್ನು ತಿಳಿದು ಕೊಳ್ಳಬೇಕು ಎಂದರು. ದೇಶದ ಆರ್ಥಿಕ ವ್ಯವಸ್ಥೆ ಕುಸಿದಿದೆ. ಜೀವನ ಅವಶ್ಯಕ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಬಡ ಜನರ ಬದುಕು ದುರ್ಬಲವಾಗಿದೆ. ರೈತರು ಸಂಕಷ್ಟದಲ್ಲಿದ್ದಾರೆ. ಎಲ್ಲವನ್ನೂ ಸುಧಾರಿಸುವ ಕೆಲಸ ಆಗಬೇಕಿದೆ ಎಂದು ತಿಳಿಸಿದರು. ಕಲಬುರಗಿಯ ಶರಣು ಮೋದಿ, ಪುರಸಭೆ ಅಧ್ಯಕ್ಷ ಅನಿಲ್ ಸುಂಟೆ, ಉಪಾಧ್ಯಕ್ಷ ಅಶೋಕ ಗಾಯಕವಾಡ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ, ತಾಲ್ಲೂಕು ಅಧ್ಯಕ್ಷ ಹಣಮಂತರಾವ್ ಚವ್ಹಾಣ, ಅಶೋಕ ಸೋನಜಿ, ಮಡಿವಾಳಪ್ಪ ಮಂಗಲಗಿ, ಅಮೃತರಾವ್ ಚಿಮಕೋಡ್, ಶಿವರಾಜ ಹಾಸನಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.