ADVERTISEMENT

ಕಲ್ಯಾಣ ಪರ್ವದ ಮೆರವಣಿಗೆಗೆ ಚಪ್ಪಲಿ ಪ್ರದರ್ಶನ

ಬಸವಣ್ಣನವರ ವಚನಾಂಕಿತ ತಿರುಚಿದ ಪುಸ್ತಕ ಮಾರಾಟಕ್ಕೆ ತೀವ್ರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 21:46 IST
Last Updated 14 ಅಕ್ಟೋಬರ್ 2019, 21:46 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಕಲ್ಯಾಣಪರ್ವದ ಮೆರವಣಿಗೆ ವಿರುದ್ಧ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಕಲ್ಯಾಣಪರ್ವದ ಮೆರವಣಿಗೆ ವಿರುದ್ಧ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಬಸವಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಬಸವಕಲ್ಯಾಣ: ‘ಬಸವಣ್ಣ ಹಾಗೂ ಇತರೆ ಶರಣರ ವಚನಾಂಕಿತ ತಿರುಚಿದ ಪುಸ್ತಕಗಳನ್ನು ಬಸವಧರ್ಮ ಪೀಠದಿಂದ ಮಾರಲಾಗುತ್ತಿದೆ’ ಎಂದು ಆರೋಪಿಸಿ ಬಸವೇಶ್ವರ ದೇವಸ್ಥಾನ ಸಮಿತಿ ಸದಸ್ಯರು ಭಾನುವಾರ 18ನೇ ಕಲ್ಯಾಣಪರ್ವದ ಮೆರವಣಿಗೆಯ ವೇಳೆ ಪ್ರತಿಭಟನೆ ನಡೆಸಿದರು.

ಕೋಟೆಯಿಂದ ಆರಂಭಗೊಂಡ ಕಲ್ಯಾಣಪರ್ವ ಮೆರವಣಿಗೆಯು ಬಸವೇಶ್ವರ ವೃತ್ತಕ್ಕೆ ಬಂದಾಗ ಮೊದಲೇ ಇಲ್ಲಿ ಜಮಾಯಿಸಿದ್ದ ಸಂಘಟನೆಗಳ ಕಾರ್ಯಕರ್ತರು ಕಲ್ಯಾಣ ಪರ್ವಕ್ಕೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ಇದರಿಂದ ಕೆಲ ಕಾಲ ಉದ್ರಿಕ್ತವಾತಾವರಣ ಉಂಟಾಗಿತ್ತು.

`ಮಾತೆ ಮಹಾದೇವಿಯವರು ಬಸವಣ್ಣ ಹಾಗೂ ಇತರೆ ಶರಣರ ವಚನಗಳನ್ನು ತಿರುಚಿದ್ದಾರೆ. ಕೂಡಲ ಸಂಗಮದೇವ ಎನ್ನುವಲ್ಲಿ ಲಿಂಗದೇವ ಬರೆದು ವಚನದೀಪ್ತಿ ಮತ್ತಿತರೆ ಪುಸ್ತಕಗಳನ್ನು ಪ್ರಕಟಿಸಿರುವುದು ಮಹಾಪರಾಧ. ಅವರ ಪುಸ್ತಕವನ್ನು ನ್ಯಾಯಾಲಯ ನಿಷೇಧಿಸಿದ್ದರೂ ಅಂಥ ಗ್ರಂಥಗಳನ್ನು ಕಲ್ಯಾಣಪರ್ವದ ವೇದಿಕೆ ಸಮೀಪದಲ್ಲಿ ಮಾರಾಟ ಮಾಡ ಲಾಗುತ್ತಿದೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

‘ಕಾರ್ಯಕ್ರಮದಲ್ಲಿಯೂ ಲಿಂಗದೇವ ಎಂಬ ವಚನಾಂಕಿತವೇ ಬಳಸಲಾಗುತ್ತಿದೆ. ಒಂದೆಡೆ ವಚನಾಂಕಿತ ಬದಲಾಯಿಸಿ ಶರಣರಿಗೆ ಅಪಚಾರ ಮಾಡುವುದು. ಇನ್ನೊಂದೆಡೆ ಅವರ ತತ್ವ ಪ್ರಚಾರದ ನೆಪದಲ್ಲಿ ಸಮಾರಂಭ ಏರ್ಪಡಿಸುವುದು ಸರಿಯೇ?' ಎಂದು ಅವರು ಪ್ರಶ್ನಿಸಿದರು.

ಒಂದೆಡೆ ಬಸವೇಶ್ವರ ವೃತ್ತದಲ್ಲಿನ ಪುತ್ಥಳಿ ಎದುರಲ್ಲಿನ ಪ್ರತಿಭಟನಾಕಾರರು ಕಲ್ಯಾಣಪರ್ವದ ವಿರೋಧಿ ಘೋಷಣೆ ಗಳನ್ನು ಕೂಗುತ್ತಿದ್ದರೆ, ಎದುರಿನ ರಸ್ತೆಯಿಂದ ಮೆರವಣಿಗೆ ಸಾಗುತ್ತಿತ್ತು. ಮೆರವಣಿಗೆಕಾರರು ಕೂಡ ಜೈ ಬಸವೇಶ, ಕಲ್ಯಾಣ ಪರ್ವಕ್ಕೆ ಜಯವಾಗಲಿ ಎಂದು ಜಯಘೋಷ ಕೂಗಿದರು. ಈ ಕಾರಣ ಗದ್ದಲ ಉಂಟಾಯಿತು. ಈ ಮಧ್ಯೆ ಪ್ರತಿಭಟನಾಕಾರರಲ್ಲಿ ಕೆಲವರು ಚಪ್ಪಲಿ ಪ್ರದರ್ಶಿಸಿದ್ದರಿಂದ ವಾತಾವರಣ ಇನ್ನಷ್ಟು ಉದ್ರಿಕ್ತವಾಯಿತು.

ಮೆರವಣಿಗೆ ಅಲ್ಲಿಂದ ಸಾಗಿದ ನಂತರ ಪರಿಸ್ಥಿತಿ ಶಾಂತಗೊಂಡಿತು. ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಡಾ.ಎಸ್.ಬಿ.ದುರ್ಗೆ, ರೇವಣಪ್ಪ ರಾಯವಾಡೆ, ಬಸವರಾಜ ಬಾಲಿಕಿಲೆ, ಶಶಿಕಾಂತ ದುರ್ಗೆ, ರವೀಂದ್ರ ಕೊಳಕೂರ, ಶಿವಕುಮಾರ ಬಿರಾದಾರ, ವಿಭೂತಿ ಬಸವಾನಂದ, ಸುಭಾಷ ಹೊಳಕುಂದೆ, ಅಶೋಕ ನಾಗರಾಳೆ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.