ಭಾಲ್ಕಿ: ‘ಬಸವ ಜಯಂತಿಯನ್ನು ಅದ್ದೂರಿಯಾಗಿ ಅಚರಿಸಲು ಎಲ್ಲರ ಸಹಕಾರ ಅಗತ್ಯ’ ಎಂದು ಹಿರೇಮಠ ಸಂಸ್ಥಾನದ ಪೀಠಾದಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಬಸವಜಯಂತಿ ಉತ್ಸವದ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘12ನೇ ಶತಮಾನದಲ್ಲಿ ಬಸವಣ್ಣನವರು ಸರ್ವರನ್ನೂ ಸೇರಿಸಿಕೊಂಡು ಅನುಭವ ಮಂಟಪ ಎಂಬ ಸಂಸತ್ತು ನಿರ್ಮಿಸಿ ಎಲ್ಲರಿಗೂ ಸಮಾನತೆ ಕಲ್ಪಿಸಿದ್ದರು. ಬಸವಾದಿ ಶರಣರ ಉದಾತ್ತ ವಿಚಾರಗಳು, ವಚನಗಳು ಹಾಗೂ ಮೌಲಿಕ ಕಾರ್ಯಗಳಿಂದ ಜಗತ್ತು ಇಂದು ನಮ್ಮ ರಾಷ್ಟ್ರದತ್ತ ನೋಡುವಂತಾಗಿದೆ’ ಎಂದು ಹೇಳಿದರು.
ಉತ್ಸವ ಸಮಿತಿ ಅಧ್ಯಕ್ಷ ಶಿವು ಲೋಖಂಡೆ ಮಾತನಾಡಿ, ‘ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಏ.28, 29 ಮತ್ತು 30 ರಂದು ಮೂರು ದಿನಗಳವರೆಗೆ ಬಸವ ಜಯಂತಿ ಮಹೋತ್ಸವ ಆಚರಿಸಲಾಗುತ್ತಿದೆ. ಏ. 28, 29 ರಂದು ಸಂಜೆ 6 ಗಂಟೆಗೆ ವಿಶೇಷ ಅನುಭಾವ ಗೋಷ್ಠಿಗಳು ನಡೆಯುತ್ತವೆ. ನಂತರ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಂದ, ಮಕ್ಕಳಿಂದ ಸಂಗೀತ, ವಚನ ನೃತ್ಯ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಬಸವ ಜಯಂತಿಯಂದು ಉತ್ಸವ ಸಮಿತಿಯ ವತಿಯಿಂದ ದಿನಪೂರ್ತಿ ಪ್ರಸಾದ ವ್ಯವಸ್ಥೆ ಆಯೋಜಿಸಲಾಗಿದೆ. ಎಲ್ಲಾ ಭಕ್ತರು ಪ್ರಸಾದ ಸ್ವೀಕರಿಸಬೇಕು’ ಎಂದು ಹೇಳಿದರು.
ಉದ್ಯಮಿ ಚನ್ನಬಸವಣ್ಣ ಬಳತೆ, ಡಾ.ಅಮಿತ್ ಅಷ್ಟೂರೆ, ಕಿರಣಕುಮಾರ ಖಂಡ್ರೆ, ಜೈರಾಜ ಪಾತ್ರೆ, ಚಂದ್ರಕಾಂತ ಪಾಟೀಲ, ಸುನಿತಾ ಶಿವಶರಣಪ್ಪ, ಶಶಿಧರ ಕೋಸಂಬೆ, ಜಗದೀಶ ಖಂಡ್ರೆ, ಪ್ರಕಾಶ ಮಾಶೆಟ್ಟೆ, ಬಸವರಾಜ ವಂಕೆ, ವಿಲಾಸ ಬಕ್ಕಾ, ಮಹಾಂತೇಶ ದಶಮುಖೆ, ಟಿಂಕು ರಾಜಭವನ, ಮಲ್ಲಮ್ಮಾ ನಾಗನಕೇರೆ ಉಪಸ್ಥಿತರಿದ್ದರು. ದೀಪಕ ಥಮಕೆ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.