ADVERTISEMENT

ಸರ್ವರ ಅಭ್ಯುದಯಕ್ಕೆ ಶ್ರಮಿಸಿದ್ದ ಪಟ್ಟದ್ದೇವರು

ಲಿಂ. ಡಾ. ಚನ್ನಬಸವ ಪಟ್ಟದ್ದೇವರು ಜಯಂತ್ಯುತ್ಸವ; ಬಸವಜ್ಯೋತಿ ಸಂದೇಶ ಯಾತ್ರೆಗೆ ಭಾಲ್ಕಿಯಲ್ಲಿ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 4:56 IST
Last Updated 14 ಡಿಸೆಂಬರ್ 2020, 4:56 IST
ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ಭಾನುವಾರ ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಜಯಂತಿ ನಿಮಿತ್ತ ಕಮಲನಗರದಿಂದ ಆಗಮಿಸಿದ ಬಸವಜ್ಯೋತಿ ಸಂದೇಶ ಯಾತ್ರೆಗೆ ಭಕ್ತರು ಬರ ಮಾಡಿಕೊಂಡರು
ಭಾಲ್ಕಿಯ ಬಸವೇಶ್ವರ ವೃತ್ತದಲ್ಲಿ ಭಾನುವಾರ ಲಿಂ.ಡಾ.ಚನ್ನಬಸವ ಪಟ್ಟದ್ದೇವರ ಜಯಂತಿ ನಿಮಿತ್ತ ಕಮಲನಗರದಿಂದ ಆಗಮಿಸಿದ ಬಸವಜ್ಯೋತಿ ಸಂದೇಶ ಯಾತ್ರೆಗೆ ಭಕ್ತರು ಬರ ಮಾಡಿಕೊಂಡರು   

ಭಾಲ್ಕಿ: ‘ಸಮಾಜದ ಕಟ್ಟ ಕಡೆಯ ವ್ಯಕ್ತಿಯು ಮುಖ್ಯವಾಹಿನಿಗೆ ಬಂದು ಗೌರವದ ಬದುಕು ನಡೆಸಬೇಕು ಎಂದು ಶತಾಯುಷಿ ಲಿಂ. ಡಾ.ಚನ್ನಬಸವ ಪಟ್ಟದ್ದೇವರು ಸಾಮಾಜಿಕ, ಧಾರ್ಮಿಕ, ಕಾಯಕ ಕ್ರಾಂತಿ ನಡೆಸಿದ್ದರು’ ಎಂದು ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಹೇಳಿದರು.

ಲಿಂ.ಡಾ.ಚನ್ನಬಸವ ಪಟ್ಟದ್ದೇವರ 131ನೇ ಜಯಂತ್ಯುತ್ಸವ ನಿಮಿತ್ತ ಪಟ್ಟಣದ ಚನ್ನಬಸವಾಶ್ರಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವಜ್ಯೋತಿ ಸಂದೇಶ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಲಿಂ.ಪಟ್ಟದ್ದೇವರು ಕಾಯಕಕ್ಕೆ ಅತೀ ಹೆಚ್ಚು ಮಹತ್ವ ನೀಡಿದ್ದರು. ಬಸವಕಲ್ಯಾಣದ ನೂತನ ಅನುಭವ ಮಂಟಪ ನಿರ್ಮಾಣಕ್ಕೆ ಸ್ವತಃ ಕಲ್ಲು-ಮಣ್ಣು ಹೊತ್ತಿದ್ದರು. ಬಸವಾದಿ ಶರಣರ ತತ್ವಗಳು ಅವರ ಉಸಿರಾಗಿದ್ದವು. ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಭಾಷೆ ಉಳಿದು, ಬೆಳೆಯುವಲ್ಲಿ ಅವರ ಪಾತ್ರ ಅಮೋಘವಾಗಿದೆ’ ಎಂದರು.

ADVERTISEMENT

‘ಡಿ.22 ರಂದು ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಕೋವಿಡ್‌ ನಿಯಮಾನುಸಾರ ಸರಳ ರೀತಿಯಲ್ಲಿ ಪಟ್ಟದ್ದೇವರ ಜಯಂತಿ ಕಾರ್ಯಕ್ರಮ ನಡೆಸಲಾಗುವುದು. ಕೋವಿಡ್‌ ಮುಕ್ತ ಸಮಾಜ ನಿರ್ಮಾಣ ಮಾಡಲು ಎಲ್ಲ ಭಕ್ತರು ತಪ್ಪದೇ ಮಾಸ್ಕ್‌ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಇದಕ್ಕೂ ಮುನ್ನ ಬಸವೇಶ್ವರ ವೃತ್ತದಲ್ಲಿ ಕಮಲನಗರದಿಂದ ಆಗಮಿಸಿದ್ದ ಬಸವಜ್ಯೋತಿ ಸಂದೇಶ ಯಾತ್ರೆಗೆ ಭಕ್ತರು ಭವ್ಯ ಸ್ವಾಗತ ಕೋರಿದರು.

ಮಹಾಲಿಂಗ ದೇವರು, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಶಶಿಧರ ಕೋಸಂಬೆ, ಪ್ರಾಚಾರ್ಯ ಚಂದ್ರಕಾಂತ ಬಿರಾದಾರ, ಉದ್ಯಮಿ ಸೋಮನಾಥಪ್ಪ ಅಷ್ಟೂರೆ, ಗಣಪತಿ ಬಾವುಗೆ, ಶರಣಪ್ಪ ಬಿರಾದಾರ, ಸಂತೋಷ ಬಿಜಿ ಪಾಟೀಲ, ಸಂತೋಷ ಹಡಪದ, ಗಣಪತಿ ಬೋಚರೆ, ಬಾಬು ಬೆಲ್ದಾಳ, ಬಸವರಾಜ ಕಾರಾಮುಂಗೆ, ಸಿದ್ರಾಮಪ್ಪ ವಂಕೆ, ನೂರಂದಪ್ಪ ತಳವಾಡ, ರಮೇಶ ಪಟ್ನೆ, ಶಿವಪುತ್ರ ದಾಬಶೆಟ್ಟಿ ಇದ್ದರು.‌

‘ನೀತಿ ಸಂಹಿತೆ ಹಾಕಿಕೊಟ್ಟ ಬಸವ ಧರ್ಮ’

ಕಮಲನಗರ: ‘ನಿಜ ಜೀವನದಲ್ಲಿ ನೀತಿ ಸಂಹಿತೆ ಹಾಕಿ ಕೊಟ್ಟ ಧರ್ಮ ಯಾವುದಾದರೂ ಇದ್ದರೆ ಅದು ಬಸವ ಧರ್ಮ ಮಾತ್ರ’ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನುಡಿದರು.

ಲಿಂ. ಡಾ. ಚನ್ನಬಸವ ಪಟ್ಟದ್ದೇವರ ಜನ್ಮಸ್ಥಳ ಕಮಲನಗರದಿಂದ ಹಮ್ಮಿಕೊಂಡಿದ್ದ ಬಸವಜ್ಯೋತಿ ಸಂದೇಶ ಪಾದಯಾತ್ರೆ ಸಂಗಮ ಗ್ರಾಮದಲ್ಲಿ ವಾಸ್ತವ್ಯ ಮಾಡಿ, ಭಾನುವಾರ ಗ್ರಾಮದಿಂದ ಹೊರಡುವ ವೇಳೆ ಅವರು ಆಶೀರ್ವಚನ ನೀಡಿದರು.

ಶನಿವಾರ ರಾತ್ರಿ ಸಂಗಮ ಗ್ರಾಮಕ್ಕೆ ತಲುಪಿದ ಬಸವಜ್ಯೋತಿ ಪಾದಯಾತ್ರೆಗೆ ಭಕ್ತರು ಸಂಗಮೇಶ್ವರ ಮಂದಿರದಲ್ಲಿ ಸಂಭ್ರಮದಿಂದ ಬರಮಾಡಿಕೊಂಡರು. ನೀಲಾಂಬಿಕಾ ಆಶ್ರಮದ ಮಹಾದೇವಮ್ಮಾ ತಾಯಿ, ಮಹಾಲಿಂಗ ದೇವರು ಸಾನ್ನಿಧ್ಯ ವಹಿಸಿದ್ದರು.

ಜಾನಪದ ಸಾಹಿತ್ಯ ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷೆ ವರ್ಷಾರಾಣಿ ಬಿರಾದಾರ, ಸಂಜೀವಕುಮಾರ ಬಿರಾದಾರ, ಡಾ.ಚನ್ನಬಸವ ಪಟ್ಟದ್ದೇವರು ಗುರುಕುಲ ಶಾಲೆ ಉಪಾಧ್ಯಕ್ಷ ಅನೀಲಕುಮಾರ ಹೊಳಸಂಬ್ರೆ, ನೀಲಕಂಠ ಬಿರಾದಾರ, ಓಂಕಾರ ಬಿರಾದಾರ, ಕಲ್ಲಯ್ಯ ಸ್ವಾಮಿ ಸರಬಾರೆ, ಚಂದ್ರಕಾಂತ ಸ್ವಾಮಿ, ಮಲ್ಲಿಕಾರ್ಜುನ ದುಬಲಗುಂಡೆ, ತಂಗೆಮ್ಮಾ ಮಲ್ಲಿಕಾರ್ಜುನ, ಶಾಂತಕುಮಾರ ಬಿರಾದಾರ, ಶಶಿಧರ ಕೊಸಂಬೆ, ರಾಮಶೆಟ್ಟಿ ಪನ್ನಾಳೆ ಇದ್ದರು.

ಹೊಳಸಮುದ್ರ ಭಕ್ತರಿಂದ ಸ್ವಾಗತ

ಕಮಲನಗರ: ಬಸವಜ್ಯೋತಿ ಸಂದೇಶ ಪಾದಯಾತ್ರೆಗೆ ಹೊಳಸಮುದ್ರ ಗ್ರಾಮದ ಭಕ್ತರು ಛತ್ರಪತಿ ಶಿವಾಜಿ ವೃತ್ತದಲ್ಲಿ ಭವ್ಯವಾಗಿ ಸ್ವಾಗತಿಸಿದರು.

ಗುರುಬಸವ ಪಟ್ಟದ್ದೇವರು ಶಿವಾಜಿ ಮೂರ್ತಿಗೆ ಪೂಜೆ ಸಲ್ಲಿಸಿ ಮಾತನಾಡಿ, ‘ಸಮಾಜದಲ್ಲಿ ಶಾಂತಿ, ಸಮೃದ್ಧಿ ನೆಲೆಸಬೇಕಾದರೆ ಪ್ರತಿಯೊಬ್ಬರು ಬಸವಾದಿ ಶರಣರ ತತ್ವಗಳ ಪಾಲನೆ ಮಾಡಬೇಕು. ಶರಣರ ಚಿಂತನೆಗಳಿಂದ ಜಾಗತಿಕ ಮಟ್ಟದಲ್ಲಿನ ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ’ ಎಂದರು.

ಕಾಂಗ್ರೆಸ್ ಕಾರ್ಮಿಕ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಪ್ರಭು ಬೆಣ್ಣೆ, ಗೋಪಾಲರಾವ ಪಾಟೀಲ, ಬಿಜೆಪಿ ಮುಖಂಡ ಜ್ಞಾನೇಶ್ವರ ಪಾಟೀಲ, ವಿಜಯಕುಮಾರ, ಮಹಾದೇವ ಮಡಿವಾಳ, ಸಂಜೀವಕುಮಾರ ಬೆಣ್ಣೆ, ಅನೀಲ ಬಿರ್ಗೆ, ವೀರಭದ್ರ ಧನ್ನಾ, ರಾಹುಲ ಪಾಟೀಲ, ಬಾಬುರಾವ ಬಿರಾದಾರ, ಅನಂತ ಕದಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.