ADVERTISEMENT

ಬಸವ ತತ್ವ ಪ್ರಸಾರಕ್ಕೆ ವಚನ ವಿಶ್ವವಿದ್ಯಾಲಯ ಅಗತ್ಯ: ಶಿವರಾಜ ಪಾಟೀಲ

ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಪಾಟೀಲ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 4:50 IST
Last Updated 27 ಆಗಸ್ಟ್ 2025, 4:50 IST
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭವನ್ನು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಉದ್ಘಾಟಿಸಿದರು
ಭಾಲ್ಕಿ ಪಟ್ಟಣದ ಚನ್ನಬಸವಾಶ್ರಮದಲ್ಲಿ ಸೋಮವಾರ ಆಯೋಜಿಸಿದ್ದ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭವನ್ನು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಉದ್ಘಾಟಿಸಿದರು   

ಭಾಲ್ಕಿ: ‘ಬಸವಣ್ಣನವರನ್ನು ಗ್ಲೋಬಲ್ ವ್ಯಕ್ತಿ ಮಾಡಲು, ಅವರ ತತ್ವಗಳನ್ನು ವಿಶ್ವಮಾನ್ಯ ಮಾಡಲು ವಚನ ವಿಶ್ವವಿದ್ಯಾಲಯ ಆಗಲೇಬೇಕು. ಆ ಮೂಲಕ ಬಸವಣ್ಣನನ್ನು ವಿಶ್ವದ ಸಾಂಸ್ಕೃತಿಕ ನಾಯಕನನ್ನಾಗಿ ಮಾಡಲು ಸಾಧ್ಯವಿದೆ’ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಅಮೃತ ಮಹೋತ್ಸವ ಸ್ವಾಗತ ಸಮಿತಿ ವತಿಯಿಂದ ಸೋಮವಾರ ಆಯೋಜಿಸಿದ್ದ ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ನಮ್ಮ ನಾಡಿನ ಮಠಗಳು ಲಕ್ಷಾಂತರ ಬಡ ವಿದ್ಯಾರ್ಥಿಗಳಿಗೆ ಅನ್ನ, ಆಶ್ರಯ, ಶಿಕ್ಷಣ ನೀಡುವುದರ ಮೂಲಕ ಅವರ ಬದುಕನ್ನು ಬೆಳಗಿವೆ. ಭಾಲ್ಕಿ ಹಿರೇಮಠ ನಾಡಿನ ಮಾನ್ಯ ಮಠಗಳಲ್ಲೊಂದು. ಸಂವಿಧಾನ ಓದಿದರೆ ಅದರಲ್ಲಿ ಶರಣರ, ಬಸವಣ್ಣನವರ ವಚನಗಳ ಛಾಯೆ ಕಂಡು ಬರುತ್ತದೆ’ ಎಂದು ತಿಳಿಸಿದರು.

ADVERTISEMENT

‘ಬಸವಲಿಂಗ ಪಟ್ಟದ್ದೇವರದ್ದು ಬಸವಮಯ ಬದುಕು ಆಗಿದೆ. ಅವರು ತಮ್ಮ ಇಡೀ ಬದುಕು ಬಸವತತ್ವ ಪ್ರಚಾರ ಪ್ರಸಾರಕ್ಕೆ ಮುಡಿಪಾಗಿಟಿದ್ದಾರೆ. ಬಸವಣ್ಣನವರು ಬೋಧಿಸಿದ ಕಾಯಕ–ದಾಸೋಹ ತತ್ವವನ್ನು ನಾಡಿನಾದ್ಯಂತ ಬೆಳಗಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದರು.

ಸಾನ್ನಿಧ್ಯವಹಿಸಿದ್ದ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಮೈಸೂರು ಭಾಗದಲ್ಲಿ ಕನ್ನಡ ಭಾಷೆಯ ವಿಷಯ ಬಂದಾಗಲೆಲ್ಲ ಚನ್ನಬಸವ ಪಟ್ಟದ್ದೇವರ ನೆನಪು ಮಾಡಿಕೊಳ್ಳಲಾಗುತ್ತದೆ. ಈ ಭಾಗದಲ್ಲಿ ನಿಜಾಂನ ಆಳ್ವಿಕೆಯಲ್ಲಿ ಪೂಜ್ಯರು ಹೊರಗಡೆ ಉರ್ದು ಬೋರ್ಡ್ ಅಳವಡಿಸಿ ಒಳಗಡೆ ಕನ್ನಡ ಕಲಿಸಿ ಕನ್ನಡಾಭಿಮಾನ ಮೆರೆದಿದ್ದಾರೆ. 20ನೇ ಶತಮಾನದಲ್ಲಿ ಅನುಭವ ಮಂಟಪ ಪುನರ್ ಸ್ಥಾಪಿಸಿ ಬಸವಣ್ಣನವರ ವಿಚಾರಧಾರೆ ಜಗದಗಲ ತಲುಪಿಸುವ ಕಾರ್ಯ ಮಾಡಿದ್ದಾರೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘ಚನ್ನಬಸವ ಪಟ್ಟದ್ದೇವರ ಮಾರ್ಗದಲ್ಲಿ ಹೆಜ್ಜೆಯಿಟ್ಟು ಸಾಗುತ್ತಿರುವ ಬಸವಲಿಂಗ ಪಟ್ಟದ್ದೇವರು, ಪೂಜ್ಯರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಉತ್ತಮ ಸಂಸ್ಕಾರ ಜತೆಗೆ ಆಧುನಿಕ ಸೌಲಭ್ಯ ಕಲ್ಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಹೊರ ರಾಜ್ಯಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಇಲ್ಲಿಗೆ ಆಗಮಿಸುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರ ಚಿಂತನೆಗಳು ವಿಶ್ವಕ್ಕೆ ತಲುಪಬೇಕಿದೆ. ಈ ಹಿನ್ನೆಲೆಯಲ್ಲಿ ಬುದ್ಧ, ಮಹಾವೀರ, ಗುರುನಾನಕ ಜಯಂತಿಗಳಿಗೆ ರಜೆ ನೀಡುವಂತೆ ಬಸವಣ್ಣನವರ ಜಯಂತಿಗೂ ಕೇಂದ್ರ ಸರ್ಕಾರ ರಜೆ ಘೋಷಣೆ ಮಾಡುವ ಕೆಲಸ ಮಾಡಿದ್ದರೆ ಬಸವಣ್ಣನವರ ವಿಚಾರಧಾರೆಗಳು ಮತ್ತಷ್ಟು ವೇಗವಾಗಿ ಜಾಗತಿಕ ಮಟ್ಟಕ್ಕೆ ತಲುಪಲಿವೆ’ ಎಂದು ತಿಳಿಸಿದರು.

ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸದ ಸಾಗರ್ ಖಂಡ್ರೆ, ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿದರು. ಸಿದ್ದಯ್ಯ ಸ್ವಾಮೀಜಿ, ಹುಮನಾಬಾದ್ ಶಾಸಕ ಡಾ.ಸಿದ್ದು ಪಾಟೀಲ, ಯುವ ಮುಖಂಡ ಚನ್ನಬಸವಣ್ಣ ಬಳತೆ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಕಲಬುರಗಿಯ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್, ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ, ಭಾರತೀಯ ಬಸವ ಬಳಗದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಕುಂತಲಾ ಬೆಲ್ದಾಳೆ, ರಾಜಶೇಖರ ಅಷ್ಟೂರೆ ಇದ್ದರು.

ಬಸವಲಿಂಗ ಪಟ್ಟದ್ದೇವರು ಬಸವಣ್ಣನ ವಿಚಾರಧಾರೆಗಳನ್ನು ಜಗದಲಕ್ಕೆ ಮುಟ್ಟಿಸಿ ಭಕ್ತರಲ್ಲಿನ ಮೂಢನಂಬಿಕೆ ಅಜ್ಞಾನವನ್ನು ಹೋಗಲಾಡಿಸುತ್ತಿದ್ದಾರೆ
ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸುತ್ತೂರು ಕ್ಷೇತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.