ADVERTISEMENT

ಬೀದರ್‌ | ‘ಬಸವಾದಿ ಶರಣರದ್ದು ಜೀವಪರ ಕಳಕಳಿ’

ಪ್ರೊ. ಲತಾ ಚಂದ್ರಶೇಖರ ತಾಂಡೂರೆ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 4:52 IST
Last Updated 30 ಜುಲೈ 2025, 4:52 IST
ಬೀದರ್‌ ನಗರದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ. ಲತಾ ಚಂದ್ರಶೇಖರ ತಾಂಡೂರೆ, ರೇಣುಕಾ ಎಂ. ಸ್ವಾಮಿ ಉದ್ಘಾಟಿಸಿದರು
ಬೀದರ್‌ ನಗರದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಪ್ರೊ. ಲತಾ ಚಂದ್ರಶೇಖರ ತಾಂಡೂರೆ, ರೇಣುಕಾ ಎಂ. ಸ್ವಾಮಿ ಉದ್ಘಾಟಿಸಿದರು   

ಬೀದರ್‌: ‘12ನೇ ಶತಮಾನದ ಬಸವಾದಿ ಶರಣರು ಜೀವಪರವುಳ್ಳ ಕಳಕಳಿ ಹೊಂದಿದವರಾಗಿದ್ದರು. ಹೀಗಾಗಿಯೇ ಸಮಾನತೆ, ವೈಚಾರಿಕತೆ ಹಾಗೂ ಸಕಲ ಪ್ರಾಣಿಗಳ ಲೇಸು ಬಯಸಿದ್ದರು’ ಎಂದು ಪ್ರೊ. ಲತಾ ಚಂದ್ರಶೇಖರ ತಾಂಡೂರೆ ತಿಳಿಸಿದರು.

ವಚನಾಮೃತ ಕನ್ನಡ ಸಂಘದಿಂದ ನಗರದಲ್ಲಿ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಹಾಗೂ ಧೂಪದ ಗೊಗ್ಗವ್ವೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ಸಮಾಜದಲ್ಲಿ ಬಾಹ್ಯ ಸೌಂದರ್ಯಕ್ಕೆ ನಾವೆಲ್ಲ ಎಷ್ಟೊಂದು ಖರ್ಚು ಮಾಡಿ ಡಾಂಭಿಕ ಬದುಕು ಬದುಕುತ್ತಿದ್ದೇವೆ. ಶರಣರ ವಿಚಾರದಂತೆ ಜ್ಞಾನ ಸಂಪಾದನೆ ಬಹಳ ಮುಖ್ಯ. ಕನಿಷ್ಠ ಎಂಬ ಕಾಯಕಕ್ಕೆ ಗೌರವಕೊಟ್ಟು ಬದುಕಿ ತಮ್ಮ ಬದುಕು ಸಾರ್ಥಕ ಮಾಡಿಕೊಂಡು ಇಂದಿಗೂ ಆದರ್ಶ ವ್ಯಕ್ತಿಗಳಾಗಿದ್ದಾರೆ ಎಂದು ಹೇಳಿದರು.

ADVERTISEMENT

ಮಡಿವಾಳ ಮಾಚಿದೇವರ ಕುರಿತು ಲೋಕೇಶ ಉಡಬಾಳೆ ಉಪನ್ಯಾಸ ನೀಡಿ, ಮಾಚಿದೇವರು ಬಟ್ಟೆಯಲ್ಲಿನ ಮಲಿನ ತೊಡೆದು ಆ ಕಾರ್ಯಕ್ಕೆ ದೊಡ್ಡ ಗೌರವ ತಂದುಕೊಟ್ಟರು. ವಚನಗಳು ರಚಿಸಿ ಜನಮನದ ಮೈಲಿಗೆ ತೊಳೆಯುವ ಕಾರ್ಯ ಬಹಳ ಶ್ರದ್ಧೆಯಿಂದ ಮಾಡಿದರು ಎಂದರು.

ಸೊನ್ನಲಾಪುರದ ಸಿದ್ದರಾಮೇಶ್ವರರು ಹೇಳುವಂತೆ ಮಾಚಿದೇವರು ಮೂರು ಕೋಟಿ ಮುನ್ನೂರು ವಚನಗಳು ರಚಿಸಿದ್ದಾರಂತೆ. ಆದರೆ, ಈಗ ನಮಗೆ ಸಿಕ್ಕಿದ್ದು ಕೇವಲ 345 ವಚನಗಳಷ್ಟೇ. ಮಾಚಿದೇವರು ಯಾವುದೂ ಮೇಲಲ್ಲ ಯಾವುದೂ ಕೀಳಲ್ಲ ಎಂಬ ಮಾತಿಗೆ ಪೂರಕವಾಗಿ ಒಂದು ಮಾತು ಹೇಳುತ್ತಾರೆ. ಅರಸುತನ ಮೇಲಲ್ಲ, ಅಗಸತನ ಕೀಳಲ್ಲ ಎಂಬುದು ಮಾರ್ಮಿಕವಾಗಿದೆ ಎಂದು ವಿವರಿಸಿದರು.

ಧೂಪದ ಗೊಗ್ಗವ್ವೆ ಕುರಿತು ಉಪನ್ಯಾಸ ನೀಡಿದ ರೇಣುಕಾ ಎಂ. ಸ್ವಾಮಿ, ಗೊಗ್ಗವ್ವೆ ವಚನಗಳಲ್ಲಿ ಶರಣಸತಿ, ಲಿಂಗಪತಿ ಎಂಬ ಭಾವನೆೆ ಎದ್ದು ಕಾಣುತ್ತದೆ. ಸ್ತ್ರೀ ಸಮಾನತೆ, ವೈಚಾರಿಕ ಪ್ರಜ್ಞೆ, ಗೊಗ್ಗವ್ವೆಯವರ ವಚನಗಳಲ್ಲಿ ನೋಡಬಹುದು. ಆಡಂಬರದ ಭಕ್ತಿಯ ವಿರೋಧಿ ಭಾವ ಹಾಗೂ ನಿರ್ಮಲ ಭಕ್ತಿಗೆ ಹೆಚ್ಚು ಒತ್ತು ನೀಡಿದ್ದಾರೆ. ಗುಪ್ತ ವಚನಕಾರ್ತಿಯಾಗಿ ನಾಸ್ತಿನಾಥ ಅಂಕಿತದಿಂದ ಆರು ವಚನಗಳನ್ನು ರಚಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, ವಚನಕಾರರು ನಮಗಾಗಿ ಕೊಟ್ಟಂತಹ ಅಮೂಲ್ಯವಾದ ಭಂಡಾರ ಹಾಗೂ ಅಲ್ಲಿಯ ವಿಚಾರಗಳು ಜನಮನಕ್ಕೆ ತಲುಪಿಸುವಂತಹ ಕೆಲಸ ಈ ಸಂಘ ಮಾಡುತ್ತಿದೆ ಎಂದು ಹೇಳಿದರು.

ಚಿತ್ರ ಕಲಾವಿದರಾದ ಚಂದ್ರಶೇಖರ ಸೋಮಶೆಟ್ಟಿ, ಡಾಕ್ಟರೇಟ್ ಪದವಿ ಪಡೆದ ಗಂಗಶೆಟ್ಟಿ ಖಾನಾಪೂರ, ಯುವ ಚಿತ್ರ ಕಲಾವಿದ ಹಣಮಂತ ಮಲ್ಕಾಪುರ ಅವರನ್ನು ಸನ್ಮಾನಿಸಲಾಯಿತು. ರೇಣುಕಾ ಎನ್.ಬಿ., ರೇಣುಕಾ ಮಳ್ಳಿಯವರು ವಚನ ಗಾಯನ ಹಾಡಿದರು. ಶ್ರೀದೇವಿ ಸೋಮಶೆಟ್ಟಿ ನಿರೂಪಿಸಿದರು. ಜಯದೇವಿ ಯದಲಾಪೂರೆ ಸ್ವಾಗತಿಸಿದರೆ, ಪದ್ಮರಾಜ ಅಜೀತಮಣಿ ವಂದಿಸಿದರು. ಪ್ರವೀಣ್‌ ನಾಡಗೀತೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.