ADVERTISEMENT

ಜಾಗೃತಿ ಜಾಥಾ: ಗಾಳಿಗೆ ಟೆಂಟ್ ಕುಸಿದು ಮಕ್ಕಳು, ಮಹಿಳೆಯರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 21:34 IST
Last Updated 20 ಫೆಬ್ರುವರಿ 2024, 21:34 IST

ಬಸವಕಲ್ಯಾಣ (ಬೀದರ್ ಜಿಲ್ಲೆ): ತಾಲ್ಲೂಕಿನ ಬೆಟಬಾಲ್ಕುಂದಾ ಗ್ರಾಮದಲ್ಲಿ ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯಿಂದ‌ ಮಂಗಳವಾರ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾದ ಟೆಂಟ್ ಬಿರುಗಾಳಿಯಿಂದ ಕುಸಿದ ಕಾರಣ ಮಕ್ಕಳಿಗೆ‌ ಮತ್ತು ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ.

ನಗರದಿಂದ ಹೊರಟ ಜಾಥಾ ಬೆಟಬಾಲ್ಕುಂದಾಕ್ಕೆ ಹೋಗಿತ್ತು. ಆದರೆ ಅಲ್ಲಿನ ಸ್ವಾಗತ ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಬಿರುಗಾಳಿ ಬೀಸಿದ್ದರಿಂದ ಕೊನೆ ಗಳಿಗೆಯಲ್ಲಿ ಅವಘಡ ಸಂಭವಿಸಿದೆ.

ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 8 ವಿದ್ಯಾರ್ಥಿಗಳಿಗೆ ಮತ್ತು ಗ್ರಾಮದ ಸರ್ಕಾರಿ ಶಾಲೆಯ ಒಬ್ಬ ವಿದ್ಯಾರ್ಥಿಗೆ ಹಾಗೂ ಇಬ್ಬರು ಮಹಿಳೆಯರ ಮೇಲೆ ಟೆಂಟ್ ನ ಕಟ್ಟಿಗೆ ಬಿದ್ದಿದ್ದರಿಂದ ತಲೆ ಹಾಗೂ ಕೈ ಕಾಲಿಗೆ ಗಾಯಗಳಾದವು. ಹೀಗಾಗಿ ಎಲ್ಲರಿಗೂ ತಾಲ್ಲೂಕು ಆಸ್ಪತ್ರೆಯಲ್ಲಿ ‌ಚಿಕಿತ್ಸೆ ನೀಡಲಾಗಿದೆ.

ADVERTISEMENT

ಐದು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹೆಚ್ಚಿನ ಹಾನಿ ಆಗಿಲ್ಲ‌ ಎಂದು ಜಾಥಾ ಉಸ್ತುವಾರಿಗಳಾದ ಸಮಾಜ ಕಲ್ಯಾಣ ಇಲಾಖೆ ಸಹಾಯಕ‌ ನಿರ್ದೇಶಕ ದಿಲೀಪ ಉತ್ತಮ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.