ADVERTISEMENT

ಶ್ರದ್ಧಾ ಕೇಂದ್ರ ಬಸವಣ್ಣನವರ ದೇವಸ್ಥಾನ

ಪಟ್ಟಣದ ಮಧ್ಯಭಾಗದ ಬಸವಣ್ಣನ ಸ್ಮಾರಕ * ದೇವಸ್ಥಾನ ಸಮಿತಿ ಸ್ಥಾಪಿಸಿ 63 ವರ್ಷ * ಬಸವಜಯಂತಿಗೆ 3 ದಿನ ಜಾತ್ರೆ ಆಯೋಜನೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 11:15 IST
Last Updated 26 ಜುಲೈ 2018, 11:15 IST
ಬಸವಕಲ್ಯಾಣದಲ್ಲಿನ ಬಸವೇಶ್ವರ ದೇವಸ್ಥಾನದ ಶಿಖರ
ಬಸವಕಲ್ಯಾಣದಲ್ಲಿನ ಬಸವೇಶ್ವರ ದೇವಸ್ಥಾನದ ಶಿಖರ   

ಬಸವಕಲ್ಯಾಣ: ಇಲ್ಲಿನ ಬಸವೇಶ್ವರ ದೇವಸ್ಥಾನವು ಗುರು ಬಸವಣ್ಣನವರ ಸ್ಮಾರಕಗಳಲ್ಲಿ ಪ್ರಮುಖವಾದುದು. ನಾಡಿನ ಬಸವಾನುಯಾಯಿಗಳ ಶ್ರದ್ಧಾ ಕೇಂದ್ರ ಇದಾಗಿದ್ದು ಪ್ರತಿ ದಿನ ನೂರಾರು ಭಕ್ತರು ಭೇಟಿ ನೀಡುತ್ತಾರೆ.

ಬಸವಣ್ಣನವರು ಕಾಯಕ, ದಾಸೋಹಕ್ಕೆ ಮಹತ್ವ ನೀಡಿದ್ದರು. ರಾಜಧಾನಿಯಾಗಿದ್ದ ಕಲ್ಯಾಣದಲ್ಲಿ ಬಿಜ್ಜಳ ಅರಸನ ಮಹಾಮಂತ್ರಿಯಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು. ಸಾವಿರಾರು ವಚನಗಳನ್ನು ರಚಿಸಿದರು. `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ..' ಎಂದು ಹೇಳಿ ನೈತಿಕಮೌಲ್ಯ ಸಾರಿದರು. ಅರಿವಿನ ಬೆಳಕು ಪಸರಿಸುವಂತಾಗಲು ಶ್ರಮಪಟ್ಟರು. ಜಾತಿ ರಹಿತ, ವರ್ಗ, ವರ್ಣಭೇದ ರಹಿತವಾದ ಸಮಾನತೆ ಸಮಾಜಕ್ಕೆ ಪ್ರಯತ್ನಿಸಿದರು. ಇಂಥ ಪರಿವರ್ತನೆಗೆ ಕೆಲವರು ವಿರೋಧಿಸಿದ್ದರಿಂದ ಕಲ್ಯಾಣಕ್ರಾಂತಿ ನಡೆದು ಈ ಸ್ಥಳ ಹಾಳು ಹಂಪೆಯಾಯಿತು. ಹೀಗಾಗಿ ಅವರ ಕಾಲದಲ್ಲಿನ ಯಾವುದೇ ಸ್ಮಾರಕಗಳು ಸುಸ್ಥಿತಿಯಲ್ಲಿ ಉಳಿಯಲಿಲ್ಲ. ಆದ್ದರಿಂದ 1955 ರಲ್ಲಿ `ಬಸವೇಶ್ವರ ದೇವಸ್ಥಾನ ಪಂಚ ಸಮಿತಿ' ಸ್ಥಾಪಿಸಿ ಮೊದಲು ಬಸವಣ್ಣನ ಮಠ ಎಂದು ಕರೆಯಲಾಗುತ್ತಿದ್ದ ಈ ದೇವಸ್ಥಾನದ ಜೀರ್ಣೊದ್ಧಾರ ಕೈಗೊಳ್ಳಲಾಯಿತು.

ಈಚೆಗೆ ದೇವಸ್ಥಾನದಲ್ಲಿ ಹಲವಾರು ಬದಲಾವಣೆಗಳಾಗಿವೆ. ಹೊಸದಾಗಿ ಎತ್ತರದ ಶಿಖರವಿರುವ ಗರ್ಭಗೃಹ ಕಟ್ಟಿ ಅದರಲ್ಲಿ ಇಷ್ಟಲಿಂಗ ಪೂಜಾನಿರತ ಬಸವಣ್ಣನವರ ಮೂರ್ತಿ ಸ್ಥಾಪಿಸಲಾಗಿದೆ. ಹೆಬ್ಗಾಗಿಲಿನ ಮೇಲೆ ಶಿಖರ ನಿರ್ಮಿಸಿ ಕಟ್ಟಡದ ಆಕರ್ಷಣೆ ಹೆಚ್ಚಿಸಲಾಯಿತು. ಒಳ ಆವರಣದಲ್ಲಿನ ಗೋಡೆಯಲ್ಲಿ ನೂರಕ್ಕೂ ಹೆಚ್ಚಿನ ಶರಣರ ತೈಲಚಿತ್ರಗಳನ್ನು ರಚಿಸಿ ಆಯಾ ಶರಣರ ವಚನಗಳನ್ನು ಬರೆಯಲಾಗಿದೆ. ಗುರುದ್ವಾರಗಳಲ್ಲಿ ಇರುವ ರೀತಿ ಇಲ್ಲಿಯೂ ದಿನದ 24 ಗಂಟೆ ಬಸವಣ್ಣನವರ ವಚನ ಪಠಣ ಮಾಡಲಾಗುತ್ತದೆ. ಹೀಗಾಗಿ ಶರಣರ ಸಂದೇಶ ಸಾರುವ ಕೇಂದ್ರವಾಗಿದೆ.

ADVERTISEMENT

ಈ ಸ್ಥಳವನ್ನು ನಾಡಿನ ಬಸವಭಕ್ತರ ಶ್ರದ್ಧಾ ಕೇಂದ್ರವನ್ನಾಗಿ ಪರಿವರ್ತಿಸಿದ ಕೀರ್ತಿ ಸೊಲ್ಲಾಪುರದ ಬಾಬಾ ಸಾಹೇಬ್ ವಾರದ್ ಅವರಿಗೆ ಸಲ್ಲುತ್ತದೆ. ಅವರು ದೇವಸ್ಥಾನ ಸಮಿತಿ ಸ್ಥಾಪಿಸುವ ಜತೆಗೆ ಬಸವ ಜಯಂತಿಗೆ ಮೂರು ದಿನ ಜಾತ್ರೆ ಆಯೋಜಿಸುವ ಪರಿಪಾಠವೂ ಆರಂಭಿಸಿದರು. ಸೊಲ್ಲಾಪುರದ ಸಿದ್ಧರಾಮೇಶ್ವರರ ಜಾತ್ರೆಯಂತೆ ಇಲ್ಲಿಯೂ ನಂದಿಕೋಲು, ಪಲ್ಲಕ್ಕಿ, ತೊಟ್ಟಿಲಿನ ಮೆರವಣಿಗೆ ನಡೆಸುವುದಕ್ಕೆ ನಾಂದಿ ಹಾಡಿದರು. ಮೊದ ಮೊದಲು ಸೊಲ್ಲಾಪುರದ ಜಾತ್ರೆಯ ವ್ಯವಸ್ಥಾಪಕರನ್ನು ಆಹ್ವಾನಿಸಿ ಇಲ್ಲಿನವರಿಗೆ ಎತ್ತರವಾದ ನಂದಿಕೋಲು ಹಿಡಿಯುವ ತರಬೇತಿ ನೀಡಿದರು. ಜಾನುವಾರು ಪ್ರದರ್ಶನ, ಮದ್ದು ಸುಡುವ ಕಾರ್ಯಕ್ರಮ, ರಥೋತ್ಸವ ಕೂಡ ನಡೆಯುವುದರಿಂದ ಜಾತ್ರೆಯ ಮೆರುಗು ಹೆಚ್ಚಿತು.

ಇಲ್ಲಿ ಶಿವರಾತ್ರಿಗೆ ಸಾಮೂಹಿಕ ಇಷ್ಟಲಿಂಗ ಪೂಜೆ ಆಯೋಜಿಸಲಾಗುತ್ತದೆ. ಅಖಿಲ ಭಾರತ ಶರಣ ಹರಳಯ್ಯ ಪೀಠಾಧ್ಯಕ್ಷೆ ಡಾ.ಗಂಗಾಂಬಿಕಾ ಪಾಟೀಲ ಸಾನ್ನಿಧ್ಯದಲ್ಲಿ ಮಾಸಿಕ ಶಿವಾನುಭವ ಚಿಂತನಗೊಷ್ಠಿ ನಡೆಯುತ್ತದೆ. ಸಾಹಿತಿ, ಚಿಂತಕರು ಪಾಲ್ಗೊಳ್ಳುತ್ತಾರೆ. ಶ್ರಾವಣದಲ್ಲಿ ಪ್ರತಿದಿನ ಪ್ರವಚನ ಹೇಳಲಾಗುತ್ತದೆ. ಇಲ್ಲಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ₹ 1.21 ಕೋಟಿ ವೆಚ್ಚದಲ್ಲಿ ಯಾತ್ರಿ ನಿವಾಸ ಮತ್ತು ₹ 1.23 ಕೋಟಿ ವೆಚ್ಚದಲ್ಲಿ ದಾಸೋಹ ಭವನ ಕಟ್ಟಲಾಗಿದೆ. ದೇವಸ್ಥಾನದ ಕೆಲ ಭಾಗ ಶಿಥಿಲಗೊಂಡಿದ್ದರಿಂದ ಹೊಸ ಗುಡಿ ನಿರ್ಮಿಸುವ ಯೋಜನೆಯನ್ನೂ ಪಂಚ ಸಮಿತಿ ಸಿದ್ಧಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.