ADVERTISEMENT

ಬಸವಕಲ್ಯಾಣ: ಮತದಾರರಿಗೆ ಹಣ ಹಂಚಲು ಬಂದವರಿಗೆ ಚಪ್ಪಲಿಯಿಂದ ಹೊಡೆದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 16:28 IST
Last Updated 16 ಏಪ್ರಿಲ್ 2021, 16:28 IST
   

ಬಸವಕಲ್ಯಾಣ (ಬೀದರ್ ಜಿಲ್ಲೆ): ಬಸವಕಲ್ಯಾಣ ತಾಲ್ಲೂಕಿನ ತ್ರಿಪುರಾಂತ ಗ್ರಾಮದಲ್ಲಿ ಶುಕ್ರವಾರ ವ್ಯಕ್ತಿಯೊಬ್ಬ ಮತದಾರರಿಗೆ ಹಣ ಹಂಚಲು ಬಂದಾಗ ಗ್ರಾಮಸ್ಥರು ಅವನನ್ನು ಹಿಡಿದು ಚಪ್ಪಲಿಯಿಂದ ಹೊಡೆದಿದ್ದಾರೆ.

ರಾಜಕೀಯ ಪಕ್ಷಗಳೇ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿವೆ. ನಮ್ಮಲ್ಲಿ ಹಣ ಇಲ್ಲವೆ? ನಿಮ್ಮ ಹಣ ನಮಗೆ ಏಕೆ ಕೊಡುತ್ತಿದ್ದೀರಿ ಎನ್ನುತ ವ್ಯಕ್ತಿಯ ಕೈಯಲ್ಲಿದ್ದ ನೋಟುಗಳನ್ನು ಕಿತ್ತುಕೊಂಡು ಗಾಳಿಯಲ್ಲಿ ತೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ವೀಕ್ಷಕರಿಗೆ ಮೊಬೈಲ್‌ ಕರೆ ಮಾಡಿ ಮಾಹಿತಿ ನೀಡಿದ ನಂತರ ಫ್ಲಯಿಂಗ್‌ ಸ್ಕ್ವಾಡ್‌ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡರು.

ಗ್ರಾಮಸ್ಥರು ಹಣ ಹಂಚಿಕೆ ಹಾಗೂ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ವಿಡಿಯೊ ವೈರಲ್‌ ಆಗಿದೆ.

ವಾಟ್ಸ್‌ಆ್ಯಪ್‌ಗಳಲ್ಲಿ ಹಣ ಹಂಚಿಕೆ ವಿಡಿಯೊ ವೈರಲ್‌ ಆಗುತ್ತಿದ್ದಂತೆಯೇ ಪ್ರಮುಖ ರಾಜಕೀಯ ಪಕ್ಷಗಳು ಪರಸ್ಪರರ ಮೇಲೆ ಆರೋಪ ಮಾಡಿವೆ.

‘ಫ್ಲಾಯಿಂಗ್‌ ಸ್ಕ್ವಾಡ್‌ ಗ್ರಾಮಕ್ಕೆ ತೆರಳಿ ಮಾಹಿತಿ ಪಡೆದಿದೆ. ಯಾವ ಪಕ್ಷದವರು ಹಣ ಹಂಚುತ್ತಿದ್ದರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ದೊರಕಿಲ್ಲ. ವಿಚಾರಣೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.