ಬೀದರ್: ‘ಆಡಂಬರ, ಬಂಗಾರದ ಕಿರೀಟ ಧರಿಸುವುದು, ಎತ್ತರದಲ್ಲಿ ಕೂರುವುದು, ಅಡ್ಡಪಲ್ಲಕ್ಕಿಯಲ್ಲಿ ಮೆರೆಯುವುದು ನಮ್ಮ ಪರಂಪರೆ ಅಲ್ಲ. ನಮ್ಮದು ಸರಳ, ಜ್ಞಾನವೇ ರತ್ನ ಎನ್ನುವ, ಎನಗಿಂತ ಕಿರಿಯರಿಲ್ಲವೆನ್ನುವ, ತತ್ವವನ್ನು ಮೆರೆಸುವ ಪರಂಪರೆ. ಆದಕಾರಣ ಬಸವಕಲ್ಯಾಣದಲ್ಲಿ ನಡೆಸಲು ಉದ್ದೇಶಿಸಿರುವ ದಸರಾ ದರ್ಬಾರ್ ಕೈಬಿಡಬೇಕು’ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ಆಗ್ರಹಿಸಿದ್ದಾರೆ.
ನಮ್ಮದು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಪರಂಪರೆಯೇ ಹೊರತು ದರ್ಬಾರ್ ಪರಂಪರೆ ಅಲ್ಲ. ದಸರಾ ದರ್ಬಾರ್ ಸಂಘಟಿಸುವ ಯಾವ ಅವಶ್ಯಕತೆಯೂ ಇಲ್ಲ ಎಂದು ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಸವಕಲ್ಯಾಣವು ಶರಣರು ತತ್ವಕ್ಕಾಗಿ ಪ್ರಾಣ ಕೊಟ್ಟ ನೆಲ. ಈ ಭೂಮಿಯಲ್ಲಿ ಶರಣರ ಸರ್ವ ಸಮಾನತೆ ತತ್ವಕ್ಕೆ ವಿರುದ್ಧವಾದ ಕಾರ್ಯಕ್ರಮ ಆಯೋಜಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಬಸವಕಲ್ಯಾಣಕ್ಕೆ ಎಲ್ಲರಿಗೂ ಸ್ವಾಗತವಿದೆ. ಆದರೆ, ಈ ನೆಲದ ಸಂಸ್ಕೃತಿ ಹಾಗೂ ಪರಂಪರೆಗೆ ಚ್ಯುತಿ ಉಂಟಾಗುವಂತಹ ಕಾರ್ಯಕ್ರಮ ಸಂಘಟಿಸುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಸಂಘಟಕರು ಕೂಡಲೇ ದಸರಾ ದರ್ಬಾರ್ ಕೈಬಿಡಬೇಕು. ಇಲ್ಲವಾದಲ್ಲಿ ಬಸವ ಭಕ್ತರ ತೀವ್ರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.