ಬಸವಕಲ್ಯಾಣ: ನಗರದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ತಾಲ್ಲೂಕಿನ ಇತರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕೆಲ ಸಿಬ್ಬಂದಿ ಸಾಮಾನ್ಯ ಹೆರಿಗೆ ಆಗುವುದಿದ್ದರೂ ಶಸ್ತ್ರಚಿಕಿತ್ಸೆ ಮಾಡಲೇಬೇಕು ಎಂದು ಭಯ ಹುಟ್ಟಿಸಿ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿ ಕಮೀಷನ್ ಪಡೆಯುತ್ತಿದ್ದಾರೆ ಎಂಬ ದೂರುಗಳು ಹೆಚ್ಚಾಗಿವೆ.
ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಯ ಘಟಕವಿದೆ. ಆದರೂ ಖಾಸಗಿಯವರ ಕೈಗೊಂಬೆ ಆಗಿರುವ ಕೆಲವರು ಇಂಥದ್ದೇ ಖಾಸಗಿ ಆಸ್ಪತ್ರೆಗೆ ಹೋಗಬೇಕು ಎಂದು ಹೇಳುವುದಷ್ಟೇ ಅಲ್ಲ; ಅಲ್ಲಿಗೆ ಕರೆದುಕೊಂಡೂ ಹೋಗುತ್ತಾರೆ ಎನ್ನಲಾಗುತ್ತದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಅಷ್ಟೇ ಮಾತುಗಳು ಕೇಳಿ ಬರುತ್ತಿಲ್ಲ, ಜನಪ್ರತಿನಿಧಿಗಳು ಸಹ ಆಗಾಗ ಅತೃಪ್ತಿ ವ್ಯಕ್ತಪಡಿಸಿದ್ದಾರೆ.
ಎರಡು ವರ್ಷಗಳಿಂದ ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ವಿಷಯ ಮುಖ್ಯವಾಗಿ ಚರ್ಚೆಯಾಗಿದೆ. ಶಾಸಕ ಶರಣು ಸಲಗರ ಅವರು ಪ್ರಸ್ತುತ ವಿಧಾನಸಭೆ ಅಧಿವೇಶನದಲ್ಲೂ ಈ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಹೆರಿಗೆ ಶಸ್ತ್ರಚಿಕಿತ್ಸೆ ಆಗುತ್ತಿರುವುದಕ್ಕೆ ಕಾರಣವೇನು? ಇದಕ್ಕೆ ಕಡಿವಾಣ ಹಾಕುವುದಕ್ಕಾಗಿ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ತಿಳಿಸಬೇಕು ಎಂದು ಅವರು ಕೇಳಿಕೊಂಡಿದ್ದಾರೆ.
ಹಳೆಯ ತಹಶೀಲ್ದಾರ್ ಕಚೇರಿ ಪಕ್ಕದ ರಸ್ತೆಯಿಂದ ಹೋಗುವ ದಾರಿಯಲ್ಲಿ ಆಸ್ಪತ್ರೆಯ ಪ್ರವೇಶ ದ್ವಾರದ ಎದುರಲ್ಲೇ ಕಸದ ರಾಶಿಯಿದೆ. ಆಸ್ಪತ್ರೆಯ ಆವರಣ ಮತ್ತು ಇಲ್ಲಿರುವ ಹಾಸಿಗೆಗಳ ಕೊಠಡಿಗಳು, ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯಲ್ಲಿಯೂ ಅಲ್ಲಲ್ಲಿ ಕಸ ಬಿದ್ದಿರುತ್ತದೆ. ಕೆಲ ತಿಂಗಳುಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು ಎಲ್ಲಕ್ಕಿಂತ ಮೊದಲು ಸ್ವಚ್ಛತೆಯ ಕಡೆಗೆ ಗಮನಹರಿಸಿ ಎಂದು ಸಲಹೆ ನೀಡಿದ್ದಾರೆ. ಆದರೂ ಪರಿಸ್ಥಿತಿ ಸುಧಾರಿಸಿಲ್ಲ.
ಸಮೀಪವೇ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ಅಪಘಾತದ ಗಾಯಾಳುಗಳು ಇಲ್ಲಿಗೆ ಬರುತ್ತಾರೆ. ಅವರಿಗೆ ರಕ್ತ ಅತ್ಯವಶ್ಯಕ ಆಗಿರುತ್ತದೆ. ಆದರೆ ಇಲ್ಲಿ ರಸ್ತೆ ಬಂಡಾರ (ಬ್ಲಡ್ ಬ್ಯಾಂಕ್) ಇಲ್ಲ. ಬೀದರ್‌ನಿಂದ ರಕ್ತ ತರಿಸಿಕೊಳ್ಳಬೇಕು. ಇಲ್ಲವೇ ಗಾಯಾಳುಗಳನ್ನು ಸೊಲ್ಲಾಪುರ, ಹೈದರಾಬಾದ್ ಆಸ್ಪತ್ರೆಗಳಿಗೆ ಕಳಿಸಬೇಕಾಗುತ್ತಿದೆ. ಸಿಟಿ ಸ್ಕ್ಯಾನ್ ಇಲ್ಲದ ಕಾರಣವೂ ತುರ್ತು ಚಿಕಿತ್ಸೆ ಸಾಧ್ಯ ಅಗುತ್ತಿಲ್ಲ.
ಈಚೆಗೆ ಕಿಡ್ನಿ ಸಮಸ್ಯೆಯ ರೋಗಿಗಳು ಹೆಚ್ಚಾಗಿ ಬರುತ್ತಿದ್ದಾರೆ. ಇಲ್ಲಿ ಡಯಾಲಿಸಿಸ್‌ನ ಮೂರು ಯಂತ್ರಗಳಿದ್ದರೂ ಆಗಾಗ ಕೆಟ್ಟು ನಿಲ್ಲುತ್ತಿವೆ. ಆದ್ದರಿಂದ ಇನ್ನೂ ಎರಡು ಯಂತ್ರಗಳ ವ್ಯವಸ್ಥೆ ಆಗಬೇಕಾಗಿದೆ. ಶವಪರೀಕ್ಷೆಯ ಕೊಠಡಿ ಮುಖ್ಯ ರಸ್ತೆ ಪಕ್ಕದಲ್ಲಿ ಇರುವುದರಿಂದ ಜನರು ರಸ್ತೆಯಲ್ಲಿಯೇ ಗಂಟೆಗಟ್ಟಲೆ ಕಾಯುತ್ತ ನಿಲ್ಲುತ್ತಾರೆ. ಆದ್ದರಿಂದ ಸಾರ್ವಜನಿಕ ಆಸ್ಪತ್ರೆಯ ಎದುರಿನಿಂದ ಅಲ್ಲಿಗೆ ಹೋಗುವುದಕ್ಕೆ ದಾರಿ ಮಾಡಿಕೊಡಬೇಕಾಗಿದೆ.
ಬ್ಲಡ್ ಬ್ಯಾಂಕ್ ವ್ಯವಸ್ಥೆ ಡಯಾಲಿಸಿಸ್‌ಗೆ ಇನ್ನೂ ಹೆಚ್ಚಿನ ಯಂತ್ರಗಳ ಅಗತ್ಯವಿರುವ ಕುರಿತು ಶಾಸಕರು ಹಾಗೂ ಸಂಬಂಧಿತರಿಗೆ ಮನವಿ ಮಾಡಲಾಗಿದೆ
- ಅಶೋಕ ಮೈಲಾರಿ ತಾಲ್ಲೂಕು ಆರೋಗ್ಯಾಧಿಕಾರಿ
ತಾಲ್ಲೂಕು ಕೇಂದ್ರದಿಂದ ಕೊಹಿನೂರ 40 ಕಿ.ಮೀ ದೂರವಿಲ್ಲಿದೆ. ಹೆರಿಗೆ ಮತ್ತಿತರೆ ಚಿಕಿತ್ಸೆಗೆ 30 ಹಳ್ಳಿಗಳ ಜನ ಅವಲಂಬಿಸಿದ್ದಾರೆ. ಆದರೂ ಇಲ್ಲಿ ಕಾಯಂ ವೈದ್ಯರು ಇಲ್ಲ
-ರತಿಕಾಂತ ಕೊಹಿನೂರ ಗ್ರಾ.ಪಂ ಮಾಜಿ ಸದಸ್ಯ
ಕೊಹಿನೂರ ಆಸ್ಪತ್ರೆಗೆ ವೈದ್ಯರಿಲ್ಲ ತಾಲ್ಲೂಕಿನ ಹೋಬಳಿ ಕೇಂದ್ರವಾದ ಕೊಹಿನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಹುದ್ದೆ ಖಾಲಿ ಇರುವುದರಿಂದ ತೊಂದರೆ ಆಗಿದೆ. ಕೊಹಿನೂರ ಬಟಗೇರಾ ಲಾಡವಂತಿ ಭೋಸ್ಗಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಸ್ಥರು ಇಲ್ಲಿಗೆ ಬರುತ್ತಾರೆ. ಆದರೂ ಆಸ್ಪತ್ರೆಯ ಉತ್ತಮ ವ್ಯವಸ್ಥೆಗೆ ಪ್ರಯತ್ನ ನಡೆದಿರುವುದು ಕಡಿಮೆ. ತಾಲ್ಲೂಕಿನಲ್ಲಿ ಒಟ್ಟು 12 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಮಂಠಾಳಕ್ಕೆ ಸಮುದಾಯ ಆರೋಗ್ಯ ಕೇಂದ್ರ ಮಂಜೂರಾಗಿದ್ದು ಕಟ್ಟಡದ ಕೆಲಸವೂ ಪೂರ್ಣಗೊಂಡಿದೆ. ತಾಲ್ಲೂಕಿನ ಇತರೆ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸ್ಥಾನಗಳು ಭರ್ತಿ ಆಗಿದ್ದರೂ ಕೆಲವರು ನಿಯಮಿತವಾಗಿ ಹಾಜರಿರುವುದಿಲ್ಲ. ಖಾಸಗಿ ಕ್ಲಿನಿಕ್ ನಡೆಸುತ್ತಾರೆ ಎಂದು ಕೆಲವರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.