ಮಾರುತಿ ಬೌದ್ಧೆ
ಬೀದರ್: ‘ವೀರಶೈವ ಲಿಂಗಾಯತ ಜಂಗಮ ಜಾತಿಗೆ ಸೇರಿದವರು ಪರಿಶಿಷ್ಟ ಜಾತಿಯಲ್ಲಿ ಬರುವ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆಯಲು ಅರ್ಹರಲ್ಲ ಎಂದು ಹೈಕೋರ್ಟ್ ದ್ವಿಸದಸ್ಯ ಪೀಠದ ತೀರ್ಪು ಐತಿಹಾಸಿಕವಾಗಿದ್ದು, ಅದನ್ನು ಸ್ವಾಗತಿಸುತ್ತೇವೆ’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಮಾರುತಿ ಬೌದ್ಧೆ ತಿಳಿಸಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ ಜಂಗಮರು ಬೇರೆ, ಬುಡ್ಗ ಜಂಗಮರು ಬೇರೆ. ಬುಡ್ಗ ಜಂಗಮರು ಮೂಲತಃ ಮಾಂಸಾಹಾರಿಗಳು, ಅಲೆಮಾರಿ ಜೀವನ ನಡೆಸುತ್ತಾರೆ. ಆದರೆ, ವೀರಶೈವ ಜಂಗಮರು ಹಾಗಲ್ಲ. ಶೋಷಿತ ಸಮಾಜದ ಹಕ್ಕುಗಳನ್ನು ಕಬಳಿಸುವ ಹುನ್ನಾರಕ್ಕೆ ನ್ಯಾಯಾಲಯವು ತಡೆಯೊಡ್ಡಿದೆ. ಸರ್ಕಾರದ ಇಲಾಖೆಗಳಿಗೆ ಜಾತಿ ಪ್ರಮಾಣ ಪತ್ರ ನೀಡಲು ಮಾರ್ಗಸೂಚಿಯಾಗಿದೆ. ನಿಜವಾದ ಶೋಷಿತ ಬೇಡ ಜಂಗಮರಿಗೆ ಆಗುವ ಅನ್ಯಾಯದಿಂದ ವಂಚಿತರಾಗದಂತೆ ತಡೆದಂತಾಗಿದೆ ಎಂದು ಹೇಳಿದರು.
ಲಿಂಗಾಯತ ಜಂಗಮರಾಗಿರುವ ಮುಖಂಡ ರವೀಂದ್ರ ಸ್ವಾಮಿ ಎಂಬುವರು ಸತ್ಯ ಮುಚ್ಚಿಟ್ಟು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿಯ ಬೇಡ ಜಂಗಮ ಪ್ರಮಾಣ ಪತ್ರ ಪಡೆದಿದ್ದರು. ಈ ಕುರಿತು ನಾನು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದಾಗ ಅವರು ಅದನ್ನು ರದ್ದುಗೊಳಿಸಿದ್ದರು. ಆದರೆ, 2019ರಲ್ಲಿ ದಾಖಲೆಗಳನ್ನು ತಿರುಚಿ ಪ್ರಮಾಣ ಪತ್ರ ಪಡೆದಿದ್ದರು. ಜಿಲ್ಲಾಧಿಕಾರಿಗೆ ಪುನಃ ದೂರು ಸಲ್ಲಿಸಿದ್ದೆ. ಸರ್ಕಾರ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಈಗ ₹1 ಲಕ್ಷ ದಂಡ ಹಾಕಿ ಛೀಮಾರಿ ಹಾಕಿದೆ ಎಂದರು.
ಮುಖಂಡ ವಿಠ್ಠಲದಾಸ ಪ್ಯಾಗೆ ಮಾತನಾಡಿ, ನಾವು ಯಾವ ಜಾತಿಯವರ ವಿರುದ್ಧ ಇಲ್ಲ. ಅವರ ಸಾಂವಿಧಾನಿಕ ಹಕ್ಕುಗಳ ಹೋರಾಟಕ್ಕೂ ವಿರುದ್ಧವಿಲ್ಲ. ವೀರಶೈವ ಜಂಗಮರು ಅವರ ಹಕ್ಕಿಗಾಗಿ ಹೋರಾಟ ನಡೆಸಬಹುದು. ಆದರೆ, ಬಡವರು, ನಿರ್ಗತಿಕರು, ಶೋಷಿತರಿಗೆ ಪ್ರಾತಿನಿಧ್ಯ ಇಲ್ಲ. ಅವರನ್ನು ಮೇಲೆತ್ತಲು ಸರ್ಕಾರ ರೂಪಿಸಿರುವ ಕಾನೂನಿಗೆ ದಾರಿ ತಪ್ಪಿಸಿ ಅರ್ಹರ ಹಕ್ಕು ಕಬಳಿಸುವ ಹುನ್ನಾರ ಖಂಡನಾರ್ಹ ಎಂದು ಟೀಕಿಸಿದರು.
ನ್ಯಾಯಾಲಯದ ಈ ಐತಿಹಾಸಿಕ ತೀರ್ಪು ಶೋಷಿತರ ಹಕ್ಕು ಎತ್ತಿ ಹಿಡಿಯಲಿದೆ. ಎಲ್ಲ ಇಲಾಖೆಗಳಲ್ಲೂ ಈ ತೀರ್ಪು ಪಾಲಿಸಬೇಕು. ಎಲ್ಲ ಪರಿಶಿಷ್ಟರ ಹಿತ ಕಾಪಾಡಲು ಕ್ರಮ ಕೈಗೊಳ್ಳಬೇಕು. ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಜರುಗಿಸಬೇಕು. ದಾಖಲೆಗಳನ್ನು ತಿರುಚಿ ತಪ್ಪು ಎಸಗಿರುವ ರವೀಂದ್ರ ಸ್ವಾಮಿ ಅವರಿಗೆ ₹1 ಲಕ್ಷದ ಬದಲು ₹50 ಲಕ್ಷ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ಜಿಲ್ಲಾ ಸಂಚಾಲಕ ಅರುಣ ಪಟೇಲ್, ಸಂಘಟನಾ ಸಂಚಾಲಕ ರಾಜಕುಮಾರ ವಾಘಮಾರೆ, ಮುಖಂಡರಾದ ಕಾಶಿನಾಥ ಚಲುವಾ, ದಶರಥ ಗುರು, ವಿಜಯಕುಮಾರ ಗಾಯಕವಾಡ, ವಿನೋದ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.