ADVERTISEMENT

ರಾಜಧಾನಿಯಲ್ಲಿ ಸೆಮಿಕಂಡಕ್ಟರ್‌ ಸಂಶೋಧನಾ ಕೇಂದ್ರ: ಸಚಿವ ರಾಜೀವ್‌ ಚಂದ್ರಶೇಖರ್‌

ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2022, 21:01 IST
Last Updated 17 ನವೆಂಬರ್ 2022, 21:01 IST
   

ಬೆಂಗಳೂರು: ‘ದೇಶದ ಐಟಿ ರಾಜಧಾನಿಯಾಗಿರುವ ಬೆಂಗಳೂರಿನಲ್ಲಿ ಎರಡನೇ ಸೆಮಿಕಂಡಕ್ಟರ್‌ ಸಂಶೋಧನಾ ಕೇಂದ್ರ ಆರಂಭಿಸಲಾಗುವುದು’ ಎಂದುಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಗುರುವಾರ ಮಾತನಾಡಿದ ಅವರು,‘ಭಾರತವು 2024ರ ಹೊತ್ತಿಗೆ ಸೆಮಿಕಂಡಕ್ಟರ್‌ ಉತ್ಪಾದನಾ ಕ್ಷೇತ್ರಕ್ಕೆ ಧುಮುಕಲಿದ್ದು, ಎಲೆಕ್ಟ್ರಾನಿಕ್‌ ಕ್ಷೇತ್ರದಲ್ಲಿ 2025ರ ಹೊತ್ತಿಗೆ ₹300 ಶತಕೋಟಿ ಡಾಲರ್ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆಯುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

‘ಮುಂದಿನ ಎರಡು ವರ್ಷಗಳಲ್ಲಿ ಸೆಮಿಕಂಡಕ್ಟರ್‌ ವಿನ್ಯಾಸ ಕ್ಷೇತ್ರದಲ್ಲಿ 100 ನವೋದ್ಯಮಗಳನ್ನು ಬೆಳೆಸಲು ₹20 ಸಾವಿರ ಕೋಟಿ ವಿನಿಯೋಗಿಸಲಾಗುವುದು. ಇದಕ್ಕೆ ರಾಜ್ಯ ಸರ್ಕಾರಗಳು ಕೂಡ ಸಮಾನ ಕೊಡುಗೆ ನೀಡಲಿವೆ’ ಎಂದರು. ‘ಜಗತ್ತಿನಲ್ಲಿ ಡಿಜಿಟಲ್‌ ಉತ್ಪನ್ನ ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಭಾರತವು ಈ ಸುವರ್ಣಾವಕಾಶವನ್ನು ಬಳಸಿಕೊಳ್ಳಲಿದೆ. ಈಗ ಚೀನಾದ ಮೇಲೆ ಅವಲಂಬನೆಯಾಗುವ ಅನಿವಾರ್ಯ ಇಲ್ಲ’ ಎಂದು ಪ್ರತಿಪಾದಿಸಿದರು.

ADVERTISEMENT

‘ದೇಶದಲ್ಲಿ ಎಂಟು ವರ್ಷಗಳ ಹಿಂದೆ ₹12 ಶತಕೋಟಿ ಡಾಲರ್‌ ಮೊತ್ತದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈಗ ವರ್ಷಕ್ಕೆ ₹70 ಸಾವಿರ ಕೋಟಿ ಮೊತ್ತದ ಎಲೆಕ್ಟ್ರಾನಿಕ್‌ ವಸ್ತುಗಳ ರಫ್ತು ವಹಿವಾಟು ನಡೆಸಲಾಗುತ್ತಿದೆ. ದೇಶದಲ್ಲಿ ಬಳಕೆಯಾಗುತ್ತಿರುವ ಮೊಬೈಲ್‌ಗಳಲ್ಲಿ ಶೇ 97ರಷ್ಟು ವಸ್ತುಗಳು ಈಗ ಭಾರತದಲ್ಲೇ ತಯಾರಾಗುತ್ತಿವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.