ಬೀದರ್: 2023ನೇ ಸಾಲಿನ ರಾಜ್ಯ ಹಾಗೂ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಆನ್‍ಲೈನ್‍ನಲ್ಲಿ ನಾಮ ನಿರ್ದೇಶನ ಸಲ್ಲಿಸುವ ಅವಧಿಯನ್ನು ಏಪ್ರಿಲ್ 10 ರ ವರೆಗೆ ವಿಸ್ತರಿಸಲಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ತಿಳಿಸಿದ್ದಾರೆ.
ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಕೆಗೆ ಮಾರ್ಚ್ 31 ಕೊನೆಯ ದಿನವಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ನಾಮ ನಿರ್ದೇಶನ ಸಲ್ಲಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಜಾನಕಿ ವೈ. ಆರ್. ಅವರು ಅವಧಿಯನ್ನು ಏಪ್ರಿಲ್ 10 ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯ ಹಾಗೂ ಜಿಲ್ಲಾ ಎರಡೂ ಪ್ರಶಸ್ತಿಗೆ ನಾಮ ನಿರ್ದೇಶನ ಸಲ್ಲಿಸ ಬಯಸುವವರು ಪ್ರತ್ಯೇಕವಾಗಿ ಜಾಲತಾಣ https://dparar.karnataka.gov.in ಮೂಲಕ ಸಲ್ಲಿಸಬಹುದು. ಆದೇಶ ಪ್ರತಿಗಳನ್ನು ಜಾಲತಾಣ https://dparar.karnataka.gov.in ರಲ್ಲಿ ಅವಲೋಕಿಸಬಹುದು ಎಂದು ತಿಳಿಸಿದ್ದಾರೆ.
ರಾಜ್ಯ ಹಾಗೂ ಜಿಲ್ಲಾಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗೆ ಕನ್ನಡ ಅಥವಾ ಇಂಗ್ಲಿಷ್‍ನಲ್ಲಿ ನಾಮ ನಿರ್ದೇಶನ ಸಲ್ಲಿಸಬಹುದು. ಕನ್ನಡದಲ್ಲಿ ಸಲ್ಲಿಸಲು ನುಡಿ 6.0 ಆವೃತ್ತಿಯನ್ನು ಮಾತ್ರ ಬಳಸಬಹುದು. ನಾಮ ನಿರ್ದೇಶನ ಸಲ್ಲಿಕೆಗೆ ತಾಂತ್ರಿಕ ಅಡಚಣೆ ಉಂಟಾದಲ್ಲಿ ಸಹಾಯಕ್ಕಾಗಿ ದೂರವಾಣಿ ಸಂಖ್ಯೆ 080-22230060ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರವು ರಾಜ್ಯಮಟ್ಟದ ಪ್ರಶಸ್ತಿಗೆ ಆಯಾ ಜಿಲ್ಲೆಗೆ ಒಬ್ಬರು ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿಗೆ ಪ್ರತಿ ಜಿಲ್ಲೆಗೆ 10 ನೌಕರರನ್ನು ಆಯ್ಕೆ ಮಾಡಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.