ADVERTISEMENT

ಔರಾದ್: ಸಾಗರದಾಚೆ ಪ್ರದರ್ಶನಕ್ಕೆ ಭಜನೆ ತಂಡ ಸಜ್ಜು

ತಾಲ್ಲೂಕಿನ ಬೆಳಕುಣಿ (ಚೌ) ಗ್ರಾಮದ ಕಲಾವಿದರು; ಶ್ರಾವಣ ಮಾಸದಲ್ಲಿ ನಿತ್ಯ ಭಜನೆ

ಮನ್ನಥಪ್ಪ ಸ್ವಾಮಿ
Published 8 ಆಗಸ್ಟ್ 2021, 3:17 IST
Last Updated 8 ಆಗಸ್ಟ್ 2021, 3:17 IST
ಔರಾದ್ ತಾಲ್ಲೂಕಿನ ಬೆಳಕುಣಿ ಚಕ್ರಿ ಭಜನೆ ತಂಡದವರು ಆಳ್ವಾಸ್ ನುಡಿಸಿರಿ ಉತ್ವವದಲ್ಲಿ ತಮ್ಮ ಕಲೆ ಪ್ರದರ್ಶಿಸಿದ್ದರು (ಸಂಗ್ರಹ ಚಿತ್ರ)
ಔರಾದ್ ತಾಲ್ಲೂಕಿನ ಬೆಳಕುಣಿ ಚಕ್ರಿ ಭಜನೆ ತಂಡದವರು ಆಳ್ವಾಸ್ ನುಡಿಸಿರಿ ಉತ್ವವದಲ್ಲಿ ತಮ್ಮ ಕಲೆ ಪ್ರದರ್ಶಿಸಿದ್ದರು (ಸಂಗ್ರಹ ಚಿತ್ರ)   

ಔರಾದ್: ಗ್ರಾಮೀಣ ಭಾಗದ ಪ್ರಾಚೀನ ಕಲೆ, ಸಂಸ್ಕೃತಿ ದೇಶ ವಿದೇಶದಲ್ಲೂ ಜನಪ್ರಿಯತೆ ಪಡೆದುಕೊಳ್ಳುತ್ತಿರುವುದಕ್ಕೆ ಗಡಿ ಭಾಗದ ಚಕ್ರಿ ಭಜನೆ ಕಲಾ ತಂಡ ಸಾಕ್ಷಿಯಾಗಿದೆ.

ಸದ್ಯ ದೇಶದ ವಿವಿಧೆಡೆ ಪ್ರದರ್ಶನಗೊಂಡ ತಾಲ್ಲೂಕಿನ ಬೆಳಕುಣಿ (ಚೌ) ಗ್ರಾಮದ ಚಕ್ರಿ ಭಜನೆ ತಂಡ ಈಗ ಸಾಗರದಾಚೆಗೂ ಪ್ರದರ್ಶನಕ್ಕೆ ಸಿದ್ಧವಾಗುತ್ತಿದೆ. ‘ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಜಾನಪದ ಉತ್ಸವದಲ್ಲಿ ಪಾಲ್ಗೊಳ್ಳಲು ಬೆಳಕುಣಿ ಚಕ್ರಿ ಭಜನೆ ಕಲಾ ತಂಡ ಆಯ್ಕೆಯಾಗಿದೆ. ಈ ನಿಟ್ಟಿನಲ್ಲಿ ಈ ತಂಡದ 22 ಕಲಾವಿದರು ಈಗಾಗಲೇ ಪಾಸ್‍ಪೋರ್ಟ್ ಪಡೆದುಕೊಂಡಿದ್ದಾರೆ’ ಎಂದು ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಸಂಜುಕುಮಾರ ಜುಮ್ಮಾ ತಿಳಿಸಿದ್ದಾರೆ.

‘ಅಧ್ಯಾತ್ಮಿಕ, ನೈತಿಕ ಮೌಲ್ಯ ಹಾಗೂ ಯೋಗಾಭ್ಯಾಸ ಒಳಗೊಂಡ ಈ ಚಕ್ರಿ ಭಜನೆ ನಮ್ಮ ಊರಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದಿದೆ. ಪ್ರತಿ ವಾರಕೊಮ್ಮೆ ಹಾಗೂ ಶ್ರಾವಣ ಮಾಸ ಒಂದು ತಿಂಗಳು ನಿತ್ಯ ಈ ಭಜನೆ ನಡೆಯುತ್ತದೆ. ಕುಳಿತು ಹಾಗೂ ನಿಂತುಕೊಂಡು ಹಾಡು ಹಾಡುತ್ತ ಮಾಡುವ ಈ ಭಜನೆಯನ್ನು ಇಂದಿನ ಆಧುನಿಕ ಕಾಲದಲ್ಲೂ ಜನ ಇಷ್ಟಪಡುತ್ತಿರುವುದು ನಮಗೆ ಹೆಮ್ಮೆ ಎನಿಸುತ್ತದೆ’ ಎಂದು ಬೆಳಕುಣಿ ಚಕ್ರಿ ಭಜನೆ ಕಲಾ ತಂಡದ ಅಧ್ಯಕ್ಷ ವೈಜಿನಾಥ ವಲ್ಲೆಪುರೆ ಹೇಳುತ್ತಾರೆ.

ADVERTISEMENT

‘ರಾಮನಗರ, ಗೋವಾ ಹಾಗೂ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಜಾನಪದ ನೃತ್ಯೋತ್ಸವದಲ್ಲಿ ನಮ್ಮ ಚಕ್ರಿ ಭಜನೆ ಪ್ರದರ್ಶನವಾಗಿದೆ. 2012ರಲ್ಲಿ ಬೀದರ್‌ನಲ್ಲಿ ನಡೆದ ರಾಷ್ಟ್ರೀಯ ಜಾನಪದ ಉತ್ಸವ, ಆಳ್ವಾಸ್ ನುಡಿಸಿರಿ ಉತ್ಸವ, ಬಸವಕಲ್ಯಾಣದಲ್ಲಿ ನಡೆದ ಬಸವ ಉತ್ಸವದಲ್ಲೂ ನಮ್ಮ ಕಲಾವಿದರ ಅದ್ಭುತ ಕಲೆಗೆ ಕಲಾ ಪ್ರೇಮಿಗಳು ಬೆನ್ನು ತಟ್ಟಿ ಹುರಿದುಂಬಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಾನಪದ ಪರಿಷತ್‍ನವರು ನಮ್ಮ ಈ ಕಲೆ ಗುರುತಿಸಿ ಬೆಳಕಿಗೆ ತಂದಿದ್ದಾರೆ. ಅವರ ಪ್ರೇರಣೆಯಿಂದಾಗಿ ನಮ್ಮಲ್ಲೂ ಈಗ ಹೆಚ್ಚಿನ ಉತ್ಸಾಹ ಬಂದಿದೆ. ಎರಡು ವರ್ಷದ ಹಿಂದೆಯೇ ನಮಗೆ ಅಂತರಾಷ್ಟ್ರೀಯ ಮಟ್ಟದ ಉತ್ಸವದಲ್ಲಿ ಪಾಲ್ಗೊಳ್ಳಲು ಕರೆ ಬಂದಿತ್ತು. ಆದರೆ ಕೋವಿಡ್ ಸೋಂಕಿನಿಂದ ವಿಳಂಬವಾಗಿದೆ. ಯಾವಾಗ ಕರೆದರೂ ಎಲ್ಲಿ ಕರೆದರೂ ನಮ್ಮ ಕಲೆ ಪ್ರದರ್ಶಿಸಲು ನಾವು ಸಿದ್ಧರಾಗಿದ್ದೇವೆ’ ಎಂದು ಚಕ್ರಿ ಭಜನೆ ಕಲಾವಿದ ಚಂದ್ರಕಾಂತ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.