ADVERTISEMENT

ಭಾಲ್ಕಿ | ಹೆಚ್ಚಿದ ತಾಪ: ಮಣ್ಣಿನ ಮಡಿಕೆಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2025, 5:26 IST
Last Updated 30 ಏಪ್ರಿಲ್ 2025, 5:26 IST
ಭಾಲ್ಕಿ ಪಟ್ಟಣದ ಅಂಬೇಡ್ಕರ್ ವೃತ್ತ ಸಮೀಪ ಮಣ್ಣಿನ ಗಡಿಗೆ ಖರೀದಿಯಲ್ಲಿ ತೊಡಗಿರುವ ಗ್ರಾಹಕ
ಭಾಲ್ಕಿ ಪಟ್ಟಣದ ಅಂಬೇಡ್ಕರ್ ವೃತ್ತ ಸಮೀಪ ಮಣ್ಣಿನ ಗಡಿಗೆ ಖರೀದಿಯಲ್ಲಿ ತೊಡಗಿರುವ ಗ್ರಾಹಕ   

ಭಾಲ್ಕಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾತ್ಯಂತ ದಿನದಿಂದ ದಿನಕ್ಕೆ ಸೂರ್ಯನ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಬಡವರು, ಕೂಲಿಕಾರ್ಮಿಕರು, ಹಿರಿಯ ಜೀವಿಗಳು ಬಡವರ ಫ್ರಿಡ್ಜ್ ಎಂದೇ ಪ್ರಸಿದ್ಧಿ ಪಡೆದಿರುವ ಮಣ್ಣಿನ ಮಡಿಕೆಗಳ ಖರೀದಿಗೆ ಮೊರೆ ಹೋಗುತ್ತಿದ್ದಾರೆ.

ಬಿಸಿಲಿನ ಬೇಗೆಯಿಂದ ಬಳಲಿದ ಜನರಿಗೆ ದೇಹ ತಂಪಾಗಿಸಲು ಮಾರುಕಟ್ಟೆಗೆ ಆಗಮಿಸಿರುವ ಬಡವರ ಫ್ರಿಡ್ಜ್​‌ ಎಂದೇ ಖ್ಯಾತಿ ಹೊಂದಿರುವ ಮಣ್ಣಿನ ಮಡಿಕೆಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ನಿಧಾನವಾಗಿ ಹೆಚ್ಚುತ್ತಿದೆ. ಹೆಚ್ಚೆಚ್ಚು ಎಲೆಕ್ಟ್ರಾನಿಕ್ ಫ್ರಿಡ್ಜ್ ನೀರು ಕುಡಿಯುವುದರಿಂದ ಶೀತ ಬರುತ್ತದೆ. ಆದರೆ ಮಡಿಕೆ ನೀರು ದೇಹಕ್ಕೆ ತಂಪು ನೀಡುವುದರ ಜೊತೆಯಲ್ಲಿ ಆರೋಗ್ಯಕ್ಕೂ ಉತ್ತಮ. ಅದರ ಮಹತ್ವವನ್ನು ಅರಿತಿರುವ ಹಿರಿಯ ಜೀವಿಗಳು ಮನೆಗಳಲ್ಲಿ ಉತ್ತಮ ಕಂಪನಿಗಳ ಎಲೆಕ್ಟ್ರಾನಿಕ್ ಫ್ರಿಡ್ಜ್‌ಗಳಿದ್ದರೂ ಕೂಡ ಅವುಗಳ ನೀರನ್ನು ಕುಡಿಯುವುದಿಲ್ಲ. ಮಣ್ಣಿನ ಮಡಿಕೆಗಳನ್ನು ಖರೀದಿಸಿ ಅವುಗಳಲ್ಲಿರುವ ತಂಪು ನೀರನ್ನು ಕುಡಿಯುತ್ತಾರೆ ಎನ್ನುತ್ತಾರೆ ನಿವೃತ್ತ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಬಿ. ಗೋಖಲೆ.

ನಮ್ಮಲ್ಲಿ ಸುರಾಯಿ, ಕೆಂಪು ಮಡಿಕೆ, ಕಪ್ಪು ಮಡಿಕೆ, ಬಿಂದಿಗೆ, ಕುಳ್ಳಿ ಸೇರಿದಂತೆ ಇತರ ಮಣ್ಣಿನ ಮಡಿಕೆಗಳು ಇವೆ. ಬಡವರು, ಕೂಲಿ ಕಾರ್ಮಿಕರು ನೀರಿನ ಸಂಗ್ರಹ ಸಾಮರ್ಥ್ಯ ಮತ್ತು ಅವರ ಖರೀದಿಸುವ ಸಾಮರ್ಥ್ಯ ಆದರಿಸಿ ಮಡಿಕೆ ಸುರಾಯಿಗಳ ಖರೀದಿಗೆ ಮುಂದಾಗುತ್ತಾರೆ. ನಾವು ಈ ಮಣ್ಣಿನ ವಿವಿಧ ಮಡಿಕೆಗಳನ್ನು ಮಹಾರಾಷ್ಟ್ರದ ಅಂಬಾ ಜೋಗಾಯಿ ದಿಂದ ತರುತ್ತೇವೆ. ನಮ್ಮಲ್ಲಿ 50 ರೂಪಾಯಿಯಿಂದ ಹಿಡಿದು 300 ರೂಪಾಯಿ ವರೆಗಿನ ಮಡಿಕೆಗಳು ಇವೆ. ಪ್ರತಿನಿತ್ಯ ಸುಮಾರು 1,500 ರಿಂದ 2000 ರೂಪಾಯಿ ವರೆಗೆ ವ್ಯವಹಾರ ಮಾಡುತ್ತೇವೆ ಎನ್ನುತ್ತಾರೆ ಗಡಿಗೆ ಮಾರಾಟಗಾರ್ತಿ ಜುಮುನಾಬಾಯಿ.

ADVERTISEMENT

ಎಲೆಕ್ಟ್ರಾನಿಕ್ ಫ್ರಿಡ್ಜ್​‌ ತಾತ್ಕಾಲಿಕವಾಗಿ ದೇಹ ತಂಪು ಮಾಡಿದರೆ ಬಡವರ ಫ್ರಿಡ್ಜ್​‌ ಬೇಸಿಗೆ ಕಾಲ ಮುಗಿಯುವವರೆಗೂ ದೇಹ ತಂಪು ಇಡುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ. ಹಾಗಾಗಿ ಹೆಚ್ಚೆಚ್ಚು ಜನರು ಮಡಿಕೆಗಳನ್ನು ಖರೀದಿಸುವ ಮೂಲಕ ನಮ್ಮ ಬದುಕಿನ ನಿರ್ವಹಣೆಗೆ ಆಧಾರವಾಗಬೇಕು ಎನ್ನುತ್ತಾರೆ ಮಡಿಕೆ ಮಾರಾಟಗಾರರು.

ಭಾಲ್ಕಿ ಪಟ್ಟಣದ ಅಂಬೇಡ್ಕರ್ ವೃತ್ತ ಸಮೀಪ ಮಣ್ಣಿನ ಗಡಿಗೆ ಖರೀದಿಯಲ್ಲಿ ತೊಡಗಿರುವ ಗ್ರಾಹಕ
ಅಧುನಿಕ ಯುಗಕ್ಕೆ ಮಾರು ಹೋಗಿರುವ ಇಂದಿನ ಜನಾಂಗ ಮಣ್ಣಿನ ಮಡಿಕೆಗಳ ಮಹತ್ವ ಅರಿಯುತ್ತಿಲ್ಲ ಎಂಬುದು ಬೇಸರ. ಇದು ನಮ್ಮ ವ್ಯಾಪಾರದ ಬೆಳವಣಿಗೆ ಮೇಲೆ ಹೊಡೆತ ಬೀಳುತ್ತಿದೆ
ಜಮುನಾಬಾಯಿ ಮಡಿಕೆ ಮಾರಾಟಗಾರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.