ADVERTISEMENT

ಸಮೀಕ್ಷೆಯಲ್ಲಿ ಲಿಂಗಾಯತ ಎಂದು ಬರೆಯಿಸಿ: ಬಸವರಾಜ ಬುಳ್ಳಾ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:22 IST
Last Updated 15 ಸೆಪ್ಟೆಂಬರ್ 2025, 6:22 IST
ಬಸವರಾಜ ಬುಳ್ಳಾ
ಬಸವರಾಜ ಬುಳ್ಳಾ   

ಭಾಲ್ಕಿ: ಲಿಂಗಾಯತರು ಯಾವುದೇ ಗೊಂದಲಕ್ಕೆ ಒಳಗಾಗದೆ ಸರ್ಕಾರ ನಡೆಸಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಇತರೆ ಧರ್ಮ ಎನ್ನುವ ಸ್ಥಳದಲ್ಲಿ ಲಿಂಗಾಯತ ಎಂದು ಬರೆಸಿ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಬುಳ್ಳಾ ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದ ಕುಂಬಾರ ಗುಂಡಯ್ಯ ಕಲ್ಯಾಣ ಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ವಿವಿಧ ಬಸವಪರ ಸಂಘಟನೆಗಳು ಭಾನುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.

‘ಇನ್ನು ಕೆಲವೇ ದಿನಗಳಲ್ಲಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಸಿಗುತ್ತದೆ. ಹಾಗಾಗಿ ಬಸವಣ್ಣನವರನ್ನು ಪೂಜಿಸುವ ಎಲ್ಲರೂ ಲಿಂಗಾಯತರೇ ಆಗಿದ್ದು, ಇದೇ ತಿಂಗಳಿನಲ್ಲಿ ನಡೆಯಲಿರುವ ಸಮೀಕ್ಷಾ ಕಾರ್ಯದಲ್ಲಿ ಎಲ್ಲರೂ ಧರ್ಮದ ಕಾಲಂನ ಇತರೆ ಧರ್ಮ ಎನ್ನುವ ಸ್ಥಳದಲ್ಲಿ ಲಿಂಗಾಯತ ಎಂದು ಬರೆಸಿ, ಜಾತಿ, ಉಪಜಾತಿ ಕಾಲಂಗಳಲ್ಲಿ ತಮ್ಮ ತಮ್ಮ ಕುಲಕಸುಬಿನ ಜಾತಿಗಳನ್ನು ಬರೆಸಬೇಕು’ ಎಂದು ತಿಳಿಸಿದರು.

ADVERTISEMENT

‘ಹುಬ್ಬಳ್ಳಿಯಲ್ಲಿ ನಡೆಯಲಿರುವ ಏಕತಾ ಸಮಾವೇಶದಲ್ಲಿ ಪಾಲ್ಗೊಳ್ಳುವ ಮಠಾಧೀಶರು ಹಾಗೂ ವೀರಶೈವ ಲಿಂಗಾಯತ ಮುಖಂಡರೆಲ್ಲರೂ ಬಸವಣ್ಣನೇ ಧರ್ಮಗುರು. ವಚನ ಸಾಹಿತ್ಯವೇ ಧರ್ಮಗ್ರಂಥ ಎಂದು ಒಪ್ಪಿಕೊಂಡು ಲಿಂಗಾಯತ ಧರ್ಮ ಮಾನ್ಯತೆಗೆ ಸಹಕರಿಸಿದರೆ ಅವರ ಏಕತಾ ಸಮಾವೇಶದಲ್ಲಿ ಐಕ್ಯತೆ ಮೂಡುತ್ತದೆ’ ಎಂದು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ಕಿರಣಕುಮಾರ ಖಂಡ್ರೆ ಮಾತನಾಡಿ,‘ಅ.5ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬಸವ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಲಿಂಗಾಯತ ಮಠಾಧೀಶರು ಸೇರಿದಂತೆ ಸುಮಾರು 1 ಲಕ್ಷ ಜನರು ಸೇರುವ ನಿರೀಕ್ಷೆ ಇದೆ’ ಎಂದು ಹೇಳಿದರು.

ರಾಷ್ಟ್ರೀಯ ಬಸವದಳದ ಮುಖಂಡ ಶ್ರೀಕಾಂತ ಬೋರೋಳೆ ಮಾತನಾಡಿ,‘ಬಸವಕಲ್ಯಾಣದಲ್ಲಿ ನಡೆಯಲಿರುವ 3 ದಿನಗಳ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಸೇರಿ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ರಾಷ್ಟ್ರೀಯ ಬಸವದಳದ ಮಲ್ಲಿಕಾರ್ಜುನ ಡೋಣಗಾಪುರ, ವಚನ ಸಾಹಿತ್ಯ ಪರಿಷತ್‍ನ ಗುಂಡಪ್ಪ ಸಂಗಮಕರ್, ಸತೀಶ ಅಪ್ಪೂರಿ, ಬಸವರಾಜ ಮರೆ, ಸಂಜೀವಕುಮಾರ ಪಾಟೀಲ, ಗುಂಡಪ್ಪಾ ಗಂಧಗೆ, ತಾನಾಜಿ ಕಮಠಾಣೆ, ಸಂಗಮೇಶ ಗಾಮಾ, ನಾಗಶೆಟ್ಟಿ ಚೋಳಾ, ಕಂಟೆಪ್ಪ ಗಂಧಿಗುಡೆ, ಮಹಾದೇವ ಭಾತಂಬ್ರಾ ಹಾಗೂ ಕಿಶನರಾವ್ ಪಾಟೀಲ ಇಂಚೂರಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.