ADVERTISEMENT

ಸಮುದಾಯಕ್ಕೆ ಭವನ, ಹಳ್ಳಿಗಳಿಗೆ ಹೈಮಾಸ್ಟ್‌

ಭಾಲ್ಕಿ ಶಾಸಕ ಈಶ್ವರ ಖಂಡ್ರೆ ಪ್ರದೇಶ ಅಭಿವೃದ್ಧಿ ನಿಧಿ ಬಳಕೆ ವಿವರ

ಬಸವರಾಜ ಎಸ್.ಪ್ರಭಾ
Published 9 ಅಕ್ಟೋಬರ್ 2021, 7:24 IST
Last Updated 9 ಅಕ್ಟೋಬರ್ 2021, 7:24 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಭಾಲ್ಕಿ: ಸ್ಥಳೀಯ ಕಾಂಗ್ರೆಸ್ ಶಾಸಕ ಈಶ್ವರ ಖಂಡ್ರೆ ಅವರ ಶಾಸಕರ ಪ್ರದೇಶ ಅಭಿವೃದ್ಧಿಯ ಬಹುತೇಕ ಅನುದಾನವನ್ನು ಹಳ್ಳಿಗಳಲ್ಲಿ ಹೈಮಾಸ್ಟ್ ವಿದ್ಯುತ್‌ ದೀಪ, ಸಮುದಾಯ, ಸಾಂಸ್ಕೃತಿಕ ಭವನ ಹಾಗೂ ಆವರಣ ಗೋಡೆ ನಿರ್ಮಾಣಕ್ಕೆ ಬಳಸಲಾಗಿದೆ.

ಈಶ್ವರ ಖಂಡ್ರೆ ಅವರು 2019-20ನೇ ಸಾಲಿನಲ್ಲಿ ₹ 189 ಲಕ್ಷ ವೆಚ್ಚ ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಸಲ್ಲಿಸಿದ್ದರು. ಅದರಲ್ಲಿ ಕೇವಲ ₹ 144 ಲಕ್ಷ ವೆಚ್ಚದ ಕಾಮಗಾರಿಗೆ ಮಂಜೂರಾತಿ ದೊರಕಿದೆ. ₹ 1.08 ಕೋಟಿ ಮಾತ್ರ ಬಿಡುಗಡೆ ಆಗಿದೆ. ಕೋವಿಡ್‌ ಕಾರಣ ಅನುದಾನ ಬಿಡುಗಡೆ ವಿಳಂಬ ಆಗಿರುವುದರಿಂದ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ.

ತಾಲ್ಲೂಕಿನ ಹಲಬರ್ಗಾ, ಭಾತಂಬ್ರಾ ತಾಂಡಾ, ಕಾಸರತೂಗಾಂವ ವಾಡಿ, ಶೇಮಶೆರಪುರ ವಾಡಿ, ಸಿದ್ದಾಪುರ ವಾಡಿ, ತೇಲಗಾಂವ, ನಿಡೇಬನ್‌ ಧನ್ನೂರ, ಜ್ಯಾಂತಿ, ತರನಳ್ಳಿ, ನೇಳಗಿ, ಕಣಜಿ, ಹುಣಜಿ (ಕೆ), ಮಳಚಾಪೂರ, ಸಿದ್ದೇಶ್ವರ ವಾಡಿ, ಮರೂರ, ತಳವಾಡ (ಕೆ), ಕೊರೂರ, ಹಲಸಿ (ಎಲ್‌), ಡೋಣಗಾಪೂರ, ಬಾಳೂರ, ಬೀರಿ (ಬಿ), ಗಣೇಶಪುರ ವಾಡಿ ಗ್ರಾಮಗಳಲ್ಲಿ ಅಂದಾಜು ₹ 2 ಲಕ್ಷ ವೆಚ್ಚದಲ್ಲಿ ಹೈಮಾಸ್ಟ್‌ ವಿದ್ಯುತ್‌ ದೀಪ ಅಳವಡಿಕೆಗೆ ಆದ್ಯತೆ ನೀಡಲಾಗಿದೆ.

ADVERTISEMENT

‘ಇನ್ನೂ ಪಟ್ಟಣ ಸೇರಿದಂತೆ ಚಂದಾಪುರ, ಡೋಣಗಾಪುರ, ಆಳಂದಿ, ಬ್ಯಾಲಹಳ್ಳಿ (ಕೆ), ಮೇಥಿಮೇಳಕುಂದಾ, ಮೇಥಿಮೇಳಕುಂದಾ ವಾಡಿ, ಏಣಕೂರ, ನೀಲಮನಳ್ಳಿ, ದಾಡಗಿ, ಅಂಬೇಸಾಂಗವಿ, ವಳಸಂಗ, ಡೊಂಗರಗಿ, ಕೊಟಗೀರಾ, ಮಳಚಾಪಪುರ ಗ್ರಾಮಗಳಲ್ಲಿ ಸಾರ್ವಜ ನಿಕರ ಬೇಡಿಕೆಗೆ ಅನುಗುಣವಾಗಿ ವಿವಿಧ ವರ್ಗಗಳ ಸಮುದಾಯ ಭವನ, ಭವನದ ಸುತ್ತ ಆವರಣದ ಗೋಡೆ ನಿರ್ಮಾಣಕ್ಕೆ ₹5 ಲಕ್ಷ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭಿಸಲಾಗಿದೆ. ಅನುದಾನ ಬಿಡುಗಡೆಗೆ ವಿಳಂಬ ವಾಗಿದೆ. ಹೀಗಾಗಿ ಸಕಾಲದಲ್ಲಿ ಪೂರ್ಣಗೊಂಡಿಲ್ಲ’ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.

2020-21ನೇ ಸಾಲಿನಲ್ಲಿ ಶಾಸಕ ಈಶ್ವರ ಖಂಡ್ರೆ ಅವರು ₹ 50 ಲಕ್ಷ ವೆಚ್ಚದ ಎರಡು ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಪಟ್ಟಣ ಒಳಗೊಂಡಂತೆ ತಾಲ್ಲೂಕಿನ ಹಲಬರ್ಗಾ ಗ್ರಾಮದಲ್ಲಿ ಪ್ರಗತಿಯಲ್ಲಿರುವ ಸಾಂಸ್ಕೃತಿಕ, ಸಮುದಾಯ ಭವನದ ಕಾಮಗಾರಿ ಚಾಲ್ತಿಯಲ್ಲಿವೆ. ಈಗಾಗಲೇ ₹ 37.50 ಲಕ್ಷ ಅನುದಾನ ಬಿಡುಗಡೆ ಆಗಿದೆ.

‘ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹ 25 ಲಕ್ಷ ಅನುದಾನ ಒದಗಿಸಿರುವುದರಿಂದ ಸಾಂಸ್ಕೃತಿಕ ಭವನದ ಕಾಮಗಾರಿ ನಡೆಯುತ್ತಿದೆ. ಈ ಭವನ ಸಾರ್ವಜನಿಕರಿಗೆ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ’ ಎಂದು ಗ್ರಾಮದ ಪ್ರಮುಖರಾದ ರಮೇಶ ಪ್ರಭಾ, ಧನರಾಜ ಪಾಟೀಲ ಹೇಳುತ್ತಾರೆ.

‘ನಮ್ಮ ಗ್ರಾಮದ ಜನರಲ್‌ ವಾರ್ಡ್‌ನಲ್ಲಿ ಹೈಮಾಸ್ಟ್‌ ವಿದ್ಯುತ್‌ ದೀಪ ಅಳವಡಿಸಲು ಶಾಸಕರು ಪದೇಶಾಭಿವೃದ್ಧಿ ನಿಧಿಯಲ್ಲಿ ಅನುದಾನ ನೀಡಿರುವುದರಿಂದ ತುಂಬಾ ಸಂತೋಷ ವಾಗಿದೆ. ವಿವಿಧೆಡೆ ಸಣ್ಣ ದೀಪಗಳಿರುವುದರಿಂದ ಹೆಚ್ಚಿನ ಮಟ್ಟಿನ ಪ್ರಕಾಶದ ಸಮಸ್ಯೆ ಯಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದರು. ಈಗ ಕೆಲ ದಿನಗಳಲ್ಲಿ ಹೈಮಾಸ್ಟ್‌ ದೀಪ ಅಳವಡಿಕೆ ಆಗುವುದರಿಂದ ಗ್ರಾಮಸ್ಥರಿಗೆ ಹೆಚ್ಚಿನ ಅನುಕೂಲ ಆಗುತ್ತದೆ’ ಎಂದು ಗ್ರಾಮದ ಪ್ರಮುಖ ಗಣೇಶ ಪಾಟೀಲ ತಿಳಿಸಿದರು.

‘ಗ್ರಾಮದ ಗಣೇಶ ದೇವಸ್ಥಾನ ಸಮೀಪ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರು ತಮ್ಮ ನಿಧಿಯಿಂದ ಸುಮಾರು 5 ಲಕ್ಷ ರೂಪಾಯಿ ಅನುದಾನ ನೀಡಿದ್ದಾರೆ. ಸಮುದಾಯ ಭವನ ನಿರ್ಮಾಣದಿಂದ ಗ್ರಾಮಸ್ಥರಿಗೆ ವಿವಿಧ ಸಣ್ಣ, ಪುಟ್ಟ ಕಾರ್ಯಕ್ರಮ, ಸಭೆ ನಡೆಸಲು ತುಂಬಾ ಸಹಕಾರಿ ಆಗಲಿದೆ’ ಎಂದು ಗ್ರಾಮ ಪ್ರಮುಖ ವಿಲಾಸ ಪಾಟೀಲ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.