ADVERTISEMENT

ಲಿಂಗಾಯತ ಧರ್ಮ ಹೋರಾಟಕ್ಕೆ ಭಾಲ್ಕಿಶ್ರೀ ‘ಗಟ್ಟಿಬೇರು’

46ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದಲ್ಲಿ ಬಸವಾನಂದ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:10 IST
Last Updated 1 ಡಿಸೆಂಬರ್ 2025, 5:10 IST
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಅನುಭವ ಮಂಟಪ ಉತ್ಸವದ ಸಮಾರೋಪದಲ್ಲಿ ಶಾಸಕ ಶರಣು ಸಲಗರ ಗ್ರಂಥ ಬಿಡುಗಡೆಗೊಳಿಸಿದರು. ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ಇದ್ದರು
ಬಸವಕಲ್ಯಾಣದಲ್ಲಿ ಭಾನುವಾರ ನಡೆದ ಅನುಭವ ಮಂಟಪ ಉತ್ಸವದ ಸಮಾರೋಪದಲ್ಲಿ ಶಾಸಕ ಶರಣು ಸಲಗರ ಗ್ರಂಥ ಬಿಡುಗಡೆಗೊಳಿಸಿದರು. ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು ಇದ್ದರು   

ಬಸವಕಲ್ಯಾಣ: ‘ಮಠಾಧೀಶರ ಒಕ್ಕೂಟದ ಅಧ್ಯಕ್ಷ ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಗಟ್ಟಿಬೇರು ಆಗಿರುವ ಕಾರಣ ಲಿಂಗಾಯತ ಧರ್ಮ ಮಾನ್ಯತೆಯ ಹೋರಾಟಕ್ಕೆ ಬಲ ಬರುವುದು ನಿಶ್ಚಿತ’ ಎಂದು ಮನಗುಂಡಿ ಬಸವಾನಂದ ಸ್ವಾಮೀಜಿ ಹೇಳಿದ್ದಾರೆ.

ನಗರದಲ್ಲಿ ಭಾನುವಾರ ನಡೆದ 46ನೇ ಶರಣ ಕಮ್ಮಟ ಮತ್ತು ಅನುಭವ ಮಂಟಪ ಉತ್ಸವದ ಎರಡನೇ ದಿನದ ‘ಲಿಂಗಾಯತ ಹೋರಾಟ ಮತ್ತು ರಾಷ್ಟ್ರೀಯತೆ’ ಗೋಷ್ಟಿಯಲ್ಲಿ ಅವರು ಮಾತನಾಡಿದರು.

‘ಅನ್ಯರ ನೇತೃತ್ವವಿದ್ದರೆ ಭರವಸೆ ಇರುತ್ತಿರಲಿಲ್ಲ. ಈಚೆಗೆ ಬಸವಲಿಂಗ ಪಟ್ಟದ್ದೇವರು ನಡೆಸಿದ ಬಸವ ಸಂಸ್ಕೃತಿ ಅಭಿಯಾನ ಸಫಲಗೊಂಡಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಆಗುವವರೆಗೂ ಇವರು ಪ್ರಯತ್ನ ಬಿಡಲಾರರು ಎಂಬ ನಂಬಿಕೆಯಿದೆ. ಮಾತೆ ಮಹಾದೇವಿ ಒಳಗೊಂಡು ಹಲವರು ರೂಪಿಸಿದ ಹೋರಾಟಗಳು ಕೆಲ ಕಾರಣಗಳಿಂದ ವಿಫಲವಾಗಿವೆ. ಆದ್ದರಿಂದ ಈ ಹೋರಾಟಕ್ಕೆ ಸರ್ವ ರೀತಿಯಿಂದ ಸಹಕರಿಸುವುದು ಸಮಾಜ ಬಾಂಧವರ ಕರ್ತವ್ಯವೂ ಆಗಿದೆ. ಚಾಮರಾಜನಗರದಿಂದ ಕಲ್ಯಾಣದವರೆಗೆ ಪಾದಯಾತ್ರೆ ಆಯೋಜಿಸುವ ಅಗತ್ಯವೂ ಇದೆ’ ಎಂದರು.

ADVERTISEMENT

ಆಳಂದ- ಉಸ್ತೂರಿ ಕೋರಣೇಶ್ವರ ಸ್ವಾಮೀಜಿ ಮಾತನಾಡಿ, ‘ಲಿಂಗಾಯತರು ಶತ್ರು ಮತ್ತು ಮಿತ್ರರನ್ನು ಗುರುತಿಸುವಲ್ಲಿ ಎಡವುತ್ತಿದ್ದಾರೆ. ಲಿಂಗಾಯತ ಧರ್ಮ ಮಾನ್ಯತೆ ಸಿಗದಂತೆ ಮಾಡುವುದು, ಬಸವತತ್ವದ ಸಾಹಿತ್ಯದ ಪ್ರಸಾರ ತಡೆಯುವುದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗುಪ್ತಕಾರ್ಯವಾಗಿದೆ. ನಾವೆಲ್ಲ ಹಿಂದೂಗಳು ಎಂಬುದನ್ನು ಒಪ್ಪೋಣ. ಆದರೆ, ಹಿಂದುತ್ವ ಹೇರಲು ಬಂದರೆ ವಿರೋಧಿಸಬೇಕು’ ಎಂದರು.

ಹಂದಿಗುಂದ ಶಿವಾನಂದ ಸ್ವಾಮೀಜಿ ಮಾತನಾಡಿ, ‘ಲಿಂಗಾಯತ ಧರ್ಮದ ಹೋರಾಟಗಾರರನ್ನು ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತಿದೆ. ಕೆಲ ಮಠಾಧೀಶರು ಅಪಶಬ್ದಗಳನ್ನು ಬಳಸಿ ನಿಂದಿಸುತ್ತಿದ್ದಾರೆ. ಯಾರು ಏನೇ ಮಾಡಿದರೂ ಲಿಂಗಾಯತ ಮಠಾಧೀಶರು ಬಗ್ಗುವುದಿಲ್ಲ. ಈ ಚಳವಳಿ ನಿಲ್ಲುವುದಿಲ್ಲ’ ಎಂದರು.

ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ‘ಬಸವಣ್ಣನವರ ಬಗ್ಗೆ ಅಪಶಬ್ದ ಬಳಸಿರುವ ಬಸನಗೌಡ ಪಾಟೀಲ ಯತ್ನಾಳ ಮತ್ತು ಇತರೆ ಮಠಾಧೀಶರ ಬಗ್ಗೆ ಸಂಬಂಧಿತರು ಪ್ರತ್ಯುತ್ತರ ನೀಡಬೇಕು. ಇವರಂತೆ ಬಸವಣ್ಣನವರ ಕುರಿತು ವಿರೋಧ ವ್ಯಕ್ತಪಡಿಸದ ರಾಷ್ಟ್ರೀಯ ಸ್ವಯಂಸೇವಕ ಸಂಘವೇ ಉತ್ತಮ ಎಂದೆನಿಸುತ್ತದೆ’ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಬಸವಲಿಂಗ ಪಟ್ಟದ್ದೇವರು, ಗುರುಬಸವ ಪಟ್ಟದ್ದೇವರು, ಬಸವರಾಜ ಬುಳ್ಳಾ ಮಾತನಾಡಿದರು. ಡಾ.ಉಲ್ಕಾ ಡಾ.ಮಲ್ಲಿಕಾರ್ಜುನ ರಗಟೆ ದಂಪತಿಗೆ ವೈದ್ಯ ಸಂಗಣ್ಣ ಪ್ರಶಸ್ತಿ, ರಮೇಶ ಮೋರ್ಗೆ ಮತ್ತು ಸೋಮಶಂಕರ ಕಾರಾಮುಂಗೆ ಅವರಿಗೆ ಒಕ್ಕಲಿಗ ಮುದ್ದಣ್ಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಘುಶಂಖ ಭಾತಂಬ್ರಾ, ರಾಜೀವ ಜುಬರೆ, ರಾಮಲಿಂಗ ಮುಚಳಂಬಿ, ಅಶೋಕ ಮೇನಕುದಳೆ, ರಾಜೇಶ್ರೀ ಕಿಶೋರ, ವಿಜಯಕುಮಾರ ಕಮ್ಮಾರ, ಖೇಮಣ್ಣ ಅಲ್ದಿ ಬರೆದ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ಕಾಡಾ ಅಚ್ಚುಕಟ್ಟು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಾಬು ಹೊನ್ನಾನಾಯಕ್, ಮುಖಂಡ ಧನರಾಜ ತಾಳಂಪಳ್ಳಿ, ಶಶಿಕಾಂತ ದುರ್ಗೆ, ಶಿವಕುಮಾರ ಶೆಟಗಾರ್, ರವೀಂದ್ರ ಕೊಳಕೂರ ಉಪಸ್ಥಿತರಿದ್ದರು.

ರಾಜ್ಯದಾದ್ಯಂತ ಪಾದಯಾತ್ರೆ ನಡೆಸುವ ಹಾಗೂ ದೆಹಲಿಯಲ್ಲಿ ಬಸವತತ್ವ ಸಮ್ಮೇಳನ ಆಯೋಜಿಸುವ ಬಗ್ಗೆ ಮಠಾಧೀಶರ ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಗುತ್ತದೆ.
ಬಸವಲಿಂಗ ಪಟ್ಟದ್ದೇವರು ಅಧ್ಯಕ್ಷ ರಾಜ್ಯ ಮಠಾಧೀಶರ ಒಕ್ಕೂಟ

ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿಗೆ ಆಗ್ರಹ

ಸಮಾರೊಪದಲ್ಲಿ ರಾಷ್ಟ್ರಮಟ್ಟದಲ್ಲಿ ಬಸವ ಜಯಂತಿ ಆಚರಿಸಬೇಕು ಎಂದು ಆಗ್ರಹಿಸುವ ಜೊತೆಗೆ ನಾಲ್ಕು ಬೇಡಿಕೆಗಳನ್ನು ಬಸವಲಿಂಗ ಪಟ್ಟದ್ದೇವರು ಮಂಡಿಸಿದರು. ಲಿಂಗಾಯತರು ಭೌಗೋಳಿಕವಾಗಿ ಹಿಂದೂಗಳೇ ಆಗಿದ್ದರೂ ಧಾರ್ಮಿಕವಾಗಿ ಸ್ವತಂತ್ರ ಧರ್ಮೀಯರು. ಆದ್ದರಿಂದ ಲಿಂಗಾಯತ ಧರ್ಮ ಮಾನ್ಯತೆ ನೀಡಬೇಕು. ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಬೇಕು. ದೇಶದಲ್ಲಿನ ಶರಣ ಸ್ಮಾರಕಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಆರಂಭಿಸಬೇಕು ಎಂದು ಒತ್ತಾಯಿಸಲಾಯಿತು. ಶಾಸಕ ಶರಣು ಸಲಗರ ಗ್ರಂಥ ಬಿಡುಗಡೆಗೊಳಿಸಿದರು. ವಿಧಾನಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ ಮುಖಂಡರಾದ ಆನಂದ ದೇವಪ್ಪ ಶಿವರಾಜ ನರಶೆಟ್ಟಿ ಶಶಿಕಾಂತ ದುರ್ಗೆ ಡಾ.ಎಸ್.ಬಿ.ದುರ್ಗೆ ಡಾ.ಜಿ.ಎಸ್.ಭುರಳೆ ಸೋಮನಾಥ ಯಾಳವಾರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.