ADVERTISEMENT

ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಣೆ

ಪೇಶ್ವೆ ಬಾಜಿರಾಯನ ವಿರುದ್ಧ ಮಹಾರ ಯೋಧರ ಹೋರಾಟದ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 16:28 IST
Last Updated 1 ಜನವರಿ 2019, 16:28 IST
ಬೀದರ್‌ನ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಿದರು
ಬೀದರ್‌ನ ಅಂಬೇಡ್ಕರ್ ವೃತ್ತದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಿದರು   

ಬೀದರ್: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಮಂಗಳವಾರ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.

ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಸಮಿತಿಯ ಪದಾಧಿಕಾರಿಗಳು ಘೋಷಣೆಗಳನ್ನು ಕೂಗಿದರು.

‘ಮಹಾರ್ ಸೈನಿಕರ ಶೌರ್ಯದ ಸ್ಮರಣಾರ್ಥ ಪ್ರತಿ ವರ್ಷ ಜನವರಿ 1 ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಗುತ್ತಿದೆ’ ಎಂದು ಸಮಿತಿಯ ಜಿಲ್ಲಾ ಪ್ರಧಾನ ಸಂಚಾಲಕ ರಾಜಕುಮಾರ ಬನ್ನೇರ್ ತಿಳಿಸಿದರು.

ADVERTISEMENT

‘ಪೇಶ್ವೆಗಳು ಜಾತಿ ವ್ಯವಸ್ಥೆಯಡಿ ಆಡಳಿತ ನಡೆಸುತ್ತಿದ್ದರು. ಪೇಶ್ವೆ ಬಾಜಿರಾಯನನ್ನು ಸೋಲಿಸಲು ಬಂದ ಬ್ರಿಟಿಷರು ಮಹಾರ ಯೋಧರ ನೆರವು ಕೋರಿದ್ದರು. ಆದರೆ, ಮಹಾರ ಯೋಧರು ಪೇಶ್ವೆಗೆ ಷರತ್ತಿನ ಬೆಂಬಲ ನೀಡಲು ಆತನ ಬಳಿಗೆ ತನ್ನ ದಂಡನಾಯಕ ಸಿದ್ಧನಾಯಕನನ್ನು ಕಳಿಸಿದರು’ ಎಂದು ಹೇಳಿದರು.

‘ಬಾಜಿರಾಯ ಬ್ರಾಹ್ಮಣ ಸಂಪ್ರದಾಯ ಪಾಲಿಸುವುದೇ ತನ್ನ ಧರ್ಮ ಎಂದು ಹೇಳಿ, ಅಸ್ಪೃಶ್ಯ ಯೋಧರ ಬೆಂಬಲ ತಿರಿಸ್ಕರಿಸಿ, ಸಿದ್ಧನಾಯಕನನ್ನು ಅಪಮಾನಿಸಿ ಕಳಿಸುತ್ತಾನೆ. ಇದರಿಂದ ಆಕ್ರೋಶಗೊಂಡ ಮಹಾರ್ ಯೋಧರು ಬಾಜಿರಾಯನ ಬೆನ್ನು ಮೂಳೆ ಮುರಿಯಲು ಬ್ರಿಟಿಷರ ಪರ ಯುದ್ಧ ಮಾಡಲು ಒಪ್ಪಿಕೊಳ್ಳುತ್ತಾರೆ’ ಎಂದು ತಿಳಿಸಿದರು.

‘1818ರ ಜನವರಿ 1 ರಂದು ಈಗಿನ ಪುಣೆ ಹತ್ತಿರದ ಭೀಮಾ ನದಿ ದಂಡೆ ಮೇಲಿನ ಕೋರೆಗಾಂವ್ ಬಳಿ 30 ಸಾವಿರ ಸೈನಿಕರಿದ್ದ ಪೇಶ್ವೆ ಹಾಗೂ 500 ಮಹಾರ್ ಯೋಧರ ಮಧ್ಯೆ ಯುದ್ಧ ನಡೆದು ಬ್ರಿಟಿಷರ ಕೊರಳಿಗೆ ವಿಜಯ ಮಾಲೆ ಬಿದ್ದಿತು. ಬಾಜಿರಾಯ ತಪ್ಪಿಕೊಂಡು ಓಡಿ ಹೋಗುತ್ತಾನೆ’ ಎಂದು ವಿವರಿಸಿದರು.

‘ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಪ್ರತಿ ವರ್ಷ ಭೀಮಾ ಕೋರೆಗಾಂವ್‌ಗೆ ಭೇಟಿ ನೀಡಿ ಹುತಾತ್ಮರ ಸ್ಮರಣಾರ್ಥ ಬ್ರಿಟಿಷ್ ಸರ್ಕಾರ ನಿರ್ಮಿಸಿರುವ ವೀರ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸುತ್ತಿದ್ದರು’ ಎಂದು ತಿಳಿಸಿದರು.

‘ಮಹಾರ್‌ ಯೋಧರ ತ್ಯಾಗ ವ್ಯರ್ಥವಾಗಲು ಬಿಡಬಾರದು. ಅವರ ಸಮಾನತೆಯ ಕನಸು ನನಸಾಗಿಸುವುದು ನಮ್ಮ ಗುರಿಯಾಗಬೇಕು’ ಎಂದು ಹೇಳಿದರು.

ಮುಖಂಡ ಅನಿಲಕುಮಾರ ಬೆಲ್ದಾರ್, ಸಮಿತಿಯ ಜಿಲ್ಲಾ ಘಟಕದ ಸಂಘಟನಾ ಸಂಚಾಲಕರಾದ ಝರೆಪ್ಪ ರಾಂಪುರೆ, ಬುದ್ಧಪ್ರಕಾಶ ಹರಗೆ, ಬಸವರಾಜ ಸಾಗರ, ಸಂಜುಕುಮಾರ ಮೇಟಿ, ಬಾಬು ಮಾನೆ, ಖಜಾಂಚಿ ಮಾರುತಿ ಶಿಂಧೆ, ದಲಿತ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ರಂಜೀತಾ ಜೈನೂರ, ದಲಿತ ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಅಶೋಕಕುಮಾರ ಹೊಸಮನಿ, ತಾಲ್ಲೂಕು ಪ್ರಧಾನ ಸಂಚಾಲಕ ರಮೇಶ ಸಾಗರ, ಬಸವಕಲ್ಯಾಣ ತಾಲ್ಲೂಕು ಸಂಚಾಲಕ ಶಾಂತಕುಮಾರ ಖರ್ಗೆ, ಭಾಲ್ಕಿ ತಾಲ್ಲೂಕು ಸಂಚಾಲಕ ರಾಜಕುಮಾರ ಕಾಳೇಕರ್ ಪಾಲ್ಗೊಂಡಿದ್ದರು.

ದಲಿತ ಮತ್ತು ಮೈನಾರಿಟಿ ಸೇನೆ:
ದಲಿತ ಮತ್ತು ಮೈನಾರಿಟಿ ಸೇನೆಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲಾಯಿತು.

ಸೇನೆಯ ವಿಭಾಗೀಯ ಉಪಾಧ್ಯಕ್ಷ ಜಾಫರ್ ಪಟೇಲ್, ಜಿಲ್ಲಾ ಘಟಕದ ಅಧ್ಯಕ್ಷ ಖಾಜಾ ಮೈನೊದ್ದಿನ್ ಬಗದಲ್, ಪ್ರಧಾನ ಕಾರ್ಯದರ್ಶಿ ಸಿದ್ರಾಮ ಬಿ., ಪಪ್ಪುರಾಜ ಮೇತ್ರೆ, ಎಂ.ಡಿ. ಸಲೀಂ, ಎಂ.ಡಿ. ಅನ್ವರ್ ಷಾ, ಕಿಶೋರ ನವಲಸಪುರ, ವಿನೋದ ರತ್ನಾಕರ, ಪ್ರಶಾಂತ ಭಾವಿಕಟ್ಟಿ, ಬುದ್ಧಾನಂದ ಬಡಿಗೇರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.