ಬೀದರ್: ‘ನರೇಗಾ ಯೋಜನೆಯ ಅಡಿಯಲ್ಲಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 200 ಜನರಿಗೆ ಕೆಲಸ ನೀಡಬೇಕು. ಏ. 12,13 ಸರ್ಕಾರಿ ರಜಾ ದಿನಗಳಿದ್ದರೂ ಯಾರೂ ರಜೆ ಪಡೆಯದೆ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ಬದೋಲೆ ತಿಳಿಸಿದರು.
ನಗರದಲ್ಲಿ ವಿವಿಧ ತಾಲ್ಲೂಕು ಪಂಚಾಯಿತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ನರೇಗಾ ಸಹಾಯಕ ನಿರ್ದೇಶಕರೊಂದಿಗೆ ನಡೆಸಿದ ವಿಡಿಯೊ ಸಂವಾದದಲ್ಲಿ ಹೇಳಿದರು.
ನರೇಗಾ ಯೋಜನೆಯು ಗ್ರಾಮೀಣ ಪ್ರದೇಶದ ಬಡಜನರ ಬದುಕಿಗೆ ಆಸರೆಯಾಗಿದೆ. ಈ ಯೋಜನೆಯಡಿ ತೊಡಗಿಸಿಕೊಂಡವರು ಪರಿಣಾಮಕಾರಿ ಕೆಲಸ ಮಾಡಬೇಕು. ಅದು ಎಲ್ಲರ ಜವಾಬ್ದಾರಿ. ಎಲ್ಲರೂ ನಿಷ್ಠೆ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ದುಡಿಯಬೇಕು. ಬಡವರ ಬಾಳಿಗೆ ಆಸರೆಯಾಗುವುದಕ್ಕಿಂತ ಮತ್ತೊಂದು ದೊಡ್ಡ ಪುಣ್ಯದ ಕೆಲಸ ಬೇರೊಂದಿಲ್ಲ ಎಂದು ತಿಳಿಸಿದರು.
ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳವರು ಈ ಯೋಜನೆಯಡಿ ಕೆಲಸ ಮಾಡುತ್ತಾರೆ. ಈ ದುರ್ಬಲ ವರ್ಗದವರಿಗೆ ಕೆಲಸ ನೀಡುವುದು ನಮ್ಮ ಜವಾಬ್ದಾರಿ. ಈ ಯೋಜನೆಯಿಂದ ಸರ್ಕಾರಿ ಅಧಿಕಾರಿಗಳು, ಸಮಾಲೋಚಕರಿಗೆ ಸಂಬಳ, ಸವಲತ್ತು ಸಿಗುತ್ತಿವೆ. ಆದಕಾರಣ ಯೋಜನೆಯ ಸಮರ್ಪಕ ಅನುಷ್ಠಾನದೊಂದಿಗೆ ಜನರ ಬದುಕು ಕೂಡ ಹಸನಾಗಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಸಹಾಯಕ ಕಾರ್ಯದರ್ಶಿ ಬೀರೇಂದ್ರ ಸಿಂಗ್, ಎಡಿಪಿಸಿ ದೀಪಕ್, ಡಿಎಂಐಎಸ್ ಕೋಮಲಾ, ಡಿಐಇಸಿ ರಜನಿಕಾಂತ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.