ADVERTISEMENT

ಬೀದರ್‌ ಜಿಲ್ಲೆಗೆ ಕೊರೊನಾ ಆಘಾತ, ಒಂದೇ ದಿನ 35 ಕೋವಿಡ್ ಸೋಂಕಿತರು ಪತ್ತೆ!

​ಪ್ರಜಾವಾಣಿ ವಾರ್ತೆ
Published 30 ಮೇ 2020, 15:34 IST
Last Updated 30 ಮೇ 2020, 15:34 IST
ಕಮಲನಗರ ತಾಲ್ಲೂಕಿನ ಮುಧೋಳ(ಕೆ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, ಗ್ರಾಮದಲ್ಲಿ ಶನಿವಾರ ಡಂಗುರ ಬಾರಿಸಲಾಯಿತು
ಕಮಲನಗರ ತಾಲ್ಲೂಕಿನ ಮುಧೋಳ(ಕೆ) ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, ಗ್ರಾಮದಲ್ಲಿ ಶನಿವಾರ ಡಂಗುರ ಬಾರಿಸಲಾಯಿತು   

ಬೀದರ್: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 35 ಜನರಿಗೆ ಕೋವಿಡ್‌ 19 ಸೋಂಕು ತಗುಲಿರುವುದು ಪತ್ತೆಯಾಗಿದೆ. ಗುರುವಾರ ಅನಾರೋಗ್ಯದಿಂದಾಗಿ ಮೃತಪಟ್ಟ ಚಿಟಗುಪ್ಪದ ಫಾತ್ಮಾಪುರದ 47 ವರ್ಷದ ಮಹಿಳೆಗೆ ಸೋಂಕು ಇದ್ದದ್ದು, ದೃಢಪಟ್ಟಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಕಾರಣ ಫಾತ್ಮಾಪುರದ ಮಹಿಳೆಯನ್ನು ಗುರುವಾರ ಬೀದರ್‌ನ ಬ್ರಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅವರು ಪಾರ್ಶ್ವವಾಯುದಿಂದ ಸಹ ಬಳಲುತ್ತಿದ್ದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕಮಲನಗರ ತಾಲ್ಲೂಕಿನಲ್ಲಿ ಒಂದೇ ಕುಟುಂಬದ ಐವರು ಸೇರಿ ಒಟ್ಟು 10 ಜನರಿಗೆ ಕೋವಿಡ್ 19 ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 135ಕ್ಕೆ ತಲುಪಿದೆ. ಮೃತಪಟ್ಟವರ ಸಂಖ್ಯೆಯೂ 4ಕ್ಕೆ ಏರಿದೆ.

ADVERTISEMENT

ಬಸವಕಲ್ಯಾಣದ 10 ಭಾಲ್ಕಿ ತಾಲ್ಲೂಕಿನ 9, ಕಮಲನಗರ ತಾಲ್ಲೂಕಿನ ಮುಧೋಳ(ಕೆ) ಗ್ರಾಮದ ಐವರು ಹಾಗೂ ಹುಮನಾಬಾದ್‌ನ ಇಬ್ಬರು ಸೇರಿ ಒಟ್ಟು 35 ಜನರಿಗೆ ಸೋಂಕು ಇರುವುದು ಪತ್ತೆಯಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಖಚಿತ ಪಡಿಸಿದರೂ ರಾಜ್ಯ ಬುಲಿಟಿನ್‌ನಲ್ಲಿ ಕೇವಲ 10 ಜನರ ಹೆಸರು ಉಲ್ಲೇಖಿಸಲಾಗಿದೆ.

ಬೆಳಿಗ್ಗೆ ಬಿಟ್ಟು ಸಂಜೆ ಮತ್ತೆ ಕರೆದೊಯ್ದರು

ಕಮಲನಗರ ತಾಲ್ಲೂಕಿನ ಮುಧೋಳ(ಕೆ) ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಐವರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ. 12 ದಿನಗಳ ಕ್ವಾರಂಟೈನ್ ಮುಗಿಸಿ ಮನೆಗೆ ತೆರಳಿದ ನಂತರ ವರದಿ ಪಾಸಿಟಿವ್ ಬಂದಿರುವುದು ವಲಸೆ ಕಾರ್ಮಿಕರಲ್ಲಿ ಆಘಾತ ಮೂಡಿಸಿದೆ.

ಬೆಳಿಗ್ಗೆ ಎಲ್ಲರನ್ನೂ ಮನೆಗೆ ಕಳಿಸಲಾಗಿತ್ತು. ವರದಿ ಬರುತ್ತಲೇ ಗಾಬರಿಯಾದ ಅಧಿಕಾರಿಗಳು ತಕ್ಷಣ ಅವರ ಮನೆಗಳಿಗೆ ತೆರಳಿ ಆಂಬುಲನ್ಸ್‌ನಲ್ಲಿ ಬೀದರ್‌ನ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.

ಮೇ 19 ರಂದು ಮುಂಬೈನಿಂದ ಬಂದಿದ್ದ 21 ಜನರನ್ನು ಮುಧೋಳದ ಸರ್ಕಾರಿ ಪ್ರಾಥಮಿಕ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇಡಲಾಗಿತ್ತು. ಇವರಲ್ಲಿ 29 ವಯಸ್ಸಿನ ಗಂಡ, 22 ವರ್ಷದ ಹೆಂಡತಿ, ಇಬ್ಬರು ಹಾಗೂ 38 ವರ್ಷದ ಮಹಿಳೆಗೆ ಸೋಂಕು ತಗುಲಿದ್ದು, ಇವರನ್ನು ಬ್ರಿಮ್ಸ್ ಆಸ್ಪತ್ರೆಯ ವಿಶೇಷ ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿದೆ.
ಸೋಂಕಿತರ ಸಂಬಂಧಿಗಳು ಹಾಗೂ ಪಕ್ಕದ ಮನೆಯವರನ್ನೂ ಕ್ವಾರಂಟೈನ್ ಮಾಡಲಾಗಿದೆ. ಇವರನ್ನು ಭೇಟಿಯಾದವರ ಮೇಲೂ ನಿಗಾ ಇಡಲಾಗಿದೆ.

ತಂದೆ, ಮಗಳಿಗೆ ಸೋಂಕು

ದೆಹಲಿಯಿಂದ ಕಲಬುರ್ಗಿಗೆ ರೈಲಿಗೆ ಬಂದು ಅಲ್ಲಿಂದ ಬಸ್‌ನಲ್ಲಿ ಹುಮನಾಬಾದ್ಗೆ ಬಂದಿರುವ 47 ವರ್ಷದ ವ್ಯಕ್ತಿ ಹಾಗೂ ಅವರ 17 ವರ್ಷದ ಮಗಳಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದೆ.

ಹೊರ ರಾಜ್ಯದಿಂದ ಬಂದಿರುವ ಕಾರಣ ಹುಮನಾಬಾದ್ನ ಕಿತ್ತೂರ ರಾಣಿ ಚೆನ್ನಮ್ಮ ವಸತಿ ನಿಲಯದ ಕ್ವಾರಂಟೈನ್ ಕೇಂದ್ರದಲ್ಲಿ ಇಟ್ಟು ಇವರ ಗಂಟಲು ದ್ರವ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ವರದಿ ಪಾಸಿಟಿವ್ ಬಂದಿದೆ.
ಪ್ರಾಥಮಿಕ ಸಂಪರ್ಕದಲ್ಲಿದ್ದ ಪತ್ನಿ, ಮೂರು ಜನ ಮಕ್ಕಳು ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದ 17 ಜನರನ್ನು ಹೋಮ್ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.

ಅಕ್ಕ– ತಂಗಿಗೆ ಕೋವಿಡ್‌ ಸೋಂಕು ದೃಢ

ಬಸವಕಲ್ಯಾಣ ತಾಲ್ಲೂಕಿನಲ್ಲಿ ಶನಿವಾರ 10 ಜನರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ.ರಾಜೋಳಾದಲ್ಲಿ 12 ಹಾಗೂ 9 ವರ್ಷದ ಅಕ್ಕ–ತಂಗಿಯರಿಗೆ ಸೋಂಕು ತಗುಲಿದೆ.ಮಿರಖಲ್ ಗ್ರಾಮದ 6 ವರ್ಷದ ಬಾಲಕಿ, 35 ವರ್ಷದ ತಾಯಿ, 19 ವರ್ಷದ ಯುವತಿ ಹಾಗೂ 28 ವರ್ಷದ ಯುವಕ, ಕೊಹಿನೂರಿನ 30 ಹಾಗೂ 32 ವರ್ಷದ ಮಹಿಳೆಯರು, ಉಜಳಂಬದಲ್ಲಿ 27 ವರ್ಷದ ಪುರುಷ ಹಾಗೂ ಮನ್ನಾಳಿಯ 20 ವರ್ಷದ ಮಹಿಳೆಗೆ ಸೋಂಕು ಇರುವುದು ಪತ್ತೆಯಾಗಿದೆ.

ಭಾಲ್ಕಿ ತಾಲ್ಲೂಕಿನಲ್ಲಿ 9 ಜನರಿಗೆ ಸೋಂಕು

ಭಾಲ್ಕಿ ತಾಲ್ಲೂಕಿನಲ್ಲಿ ಶನಿವಾರ 9 ಜನರಲ್ಲಿ ಕೋವಿಡ್‌ 19 ಸೋಂಕು ಪತ್ತೆಯಾಗಿದೆ.ದಾಡಗಿ ಗ್ರಾಮದ 62 ವರ್ಷದ ಪುರುಷ, 52 ವರ್ಷದ ಮಹಿಳೆ ಇಬ್ಬರೂ ಒಂದೇ ಕುಟುಂಬದವರು, 24 ವರ್ಷದ ಪುರುಷ, ಖಟಕಚಿಂಚೋಳಿಯ 24 ವರ್ಷದ ಮಹಿಳೆ, ಲಾಧಾದ 24 ವರ್ಷದ ಪುರುಷ, ಕೋಸಂನ 48 ವರ್ಷದ ಮಹಿಳೆ, ಸೋಮಪೂರದ 18 ವರ್ಷದ ಮಹಿಳೆ, ಭಾಲ್ಕಿಯ ಜೋಶಿನಗರದ 35 ಹಾಗೂ 21 ವರ್ಷದ ಮಹಿಳೆಯರಿಗೆ ಕೋವಿಡ್ 19 ಸೋಂಕು ತಗುಲಿದೆ.ಇವರೆಲ್ಲರೂ ಮಹಾರಾಷ್ಟ್ರದಿಂದ ಬಂದು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದರು. ಶುಕ್ರವಾರ ಎಲ್ಲರನ್ನೂ ಮನೆಗೆ ಕಳಿಸಲಾಗಿತ್ತು. ಶನಿವಾರ ಅವರನ್ನು ಬ್ರಿಮ್ಸ್‌ನ ವಿಶೇಷ ನಿಗಾ ಘಟಕದಲ್ಲಿ ಇಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.