ಬೀದರ್: ‘ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ನ್ಯಾಯ ಕೊಡಿಸುವ ಆಶ್ವಾಸನೆ ನೀಡಿರುವುದರಿಂದ ಅವರ ಮಾತಿಗೆ ಬೆಲೆ ಕೊಟ್ಟು ಜೂನ್ 19ರಂದು ನಡೆಸಲು ಉದ್ದೇಶಿಸಿದ್ದ ‘ಬೀದರ್ ಚಲೋ’ ಪ್ರತಿಭಟನೆ ಹಾಗೂ ಬಹಿರಂಗ ಸಭೆ ಮುಂದೂಡಲಾಗಿದೆ’ ಎಂದು ಕರ್ನಾಟಕ ಭೀಮ ಸೇನೆಯ ರಾಜ್ಯ ಕಾರ್ಯದರ್ಶಿ ವಿಷ್ಣುವರ್ಧನ್ ವಾಲ್ದೊಡ್ಡಿ ತಿಳಿಸಿದರು.
‘ಬೀದರ್ ಜಿಲ್ಲೆಯಾದ್ಯಂತ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಗಳಿಗೆ ಅಪಮಾನ, ದಲಿತರ ಮೇಲೆ ದೌರ್ಜನ್ಯ, ಜಾತಿ ನಿಂದನೆ ಪ್ರಕರಣ, ಹೋರಾಟಗಾರರ ಮೇಲೆ ಸುಳ್ಳು ಪ್ರಕರಣ ದಾಖಲಿಸುತ್ತಿರುವುದನ್ನು ವಿರೋಧಿಸಿ ಜೂನ್ 19ರಂದು ಹೋರಾಟಕ್ಕೆ ಕರೆ ಕೊಡಲಾಗಿತ್ತು. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಲಾಗಿತ್ತು. ಆದರೆ, ಸಚಿವ ಈಶ್ವರ ಬಿ. ಖಂಡ್ರೆಯವರು ನಮ್ಮೊಂದಿಗೆ ಸಭೆ ನಡೆಸಿ, ತಾಳ್ಮೆಯಿಂದ ನಮ್ಮ ಸಮಸ್ಯೆ ಆಲಿಸಿದ್ದಾರೆ. ನ್ಯಾಯ ಒದಗಿಸಿಕೊಡುವ ಭರವಸೆ ಕೊಟ್ಟಿದ್ದಾರೆ’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
‘ಶೀಘ್ರದಲ್ಲೇ ಬಹಿರಂಗ ಸಭೆ ಆಯೋಜಿಸಲಾಗುವುದು. ಅದಕ್ಕೆ ಸಚಿವ ಈಶ್ವರ ಖಂಡ್ರೆಯವರು ಆಗಮಿಸಲಿದ್ದಾರೆ. ಅದರಲ್ಲಿ ನಮ್ಮ ಸಮಸ್ಯೆಗಳಿಗೆ ಕಂಡುಕೊಂಡ ಪರಿಹಾರ ಕ್ರಮಗಳ ಬಗ್ಗೆ ತಿಳಿಸುವರು. ಸಮಿತಿಯ ಪದಾಧಿಕಾರಿಗಳ ಸಭೆ ಕರೆದು, ಶೀಘ್ರದಲ್ಲೇ ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದರು.
‘ಕೆಲ ಅಧಿಕಾರಿಗಳು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅಂತಹವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನೂ ಸಚಿವರು ನೀಡಿದ್ದಾರೆ’ ಎಂದು ಹೇಳಿದರು.
ಸೇನೆಯ ಜಿಲ್ಲಾಧ್ಯಕ್ಷ ನಾಗಸೇನ್ ಬನ್ನೇರ್, ಮುಖಂಡ ಅಂಬರೀಷ ಕುದರೆ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಸಂದೀಪ್ ವಾಲದೊಡ್ಡಿ, ಲಕ್ಷ್ಮಣ ಕಾಂಬ್ಳೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.