ADVERTISEMENT

ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ ಲೀಜ್‌ಗೆ: ಸಚಿವ ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 12:20 IST
Last Updated 26 ಜನವರಿ 2021, 12:20 IST
ಬೀದರ್‌ನ ಪೊಲೀಸ್‌ ಕವಾಯತು ಮೈದಾನದಲ್ಲಿ ಮಂಗಳವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸಲ್ಲಿಸಿದರು
ಬೀದರ್‌ನ ಪೊಲೀಸ್‌ ಕವಾಯತು ಮೈದಾನದಲ್ಲಿ ಮಂಗಳವಾರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸಲ್ಲಿಸಿದರು   


ಬೀದರ್: ‘ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಲೀಜ್‌ ಮೇಲೆ ಕೊಡಲು ಚಿಂತನೆ ನಡೆದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಹೇಳಿದರು.

ಇಲ್ಲಿಯ ಪೊಲೀಸ್‌ ಕವಾಯತು ಮೈದಾನದಲ್ಲಿ ಜಿಲ್ಲಾ ಆಡಳಿತದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಈಗಾಗಲೇ ಸರ್ಕಾರದ ಮಟ್ಟದಲ್ಲಿ ಎರಡು ಸುತ್ತಿನ ಮಾತುಕತೆ ನಡೆದಿದೆ. ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಸಕ್ಕರೆ ಕಾರ್ಖಾನೆ ಮಾರಾಟ ಹಾಗೂ ಖಾಸಗಿಯವರಿಗೆ ಲೀಜ್‌ ಕೊಡುವ ವಿಷಯದಲ್ಲಿ ತಾಂತ್ರಿಕ ಅಡಚಣೆಗಳಿವೆ. ನಿಯಮಗಳಿಗೆ ಕೆಲವೊಂದು ತಿದ್ದುಪಡಿ ತಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

‘ಮೂರು ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ ರಾಜಕೀಯ ಪ್ರೇರಿತವಾಗಿದೆ’ ಎಂದು ಆರೋಪಿಸಿದರು.

‘ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಕೇವಲ 10ರಿಂದ 12 ಲಕ್ಷ ಟನ್‌ ಕಬ್ಬು ಮಾತ್ರ ಬೆಳೆದಿದೆ. ಜಿಲ್ಲೆಯಲ್ಲಿ ನಾಲ್ಕು ಸಕ್ಕರೆ ಕಾರ್ಖಾನೆಗಳಿವೆ. ರೈತರ ಕಬ್ಬು ನುರಿಸಲು ಯಾವುದೇ ಸಮಸ್ಯೆಯಾಗದು’ ಎಂದು ಸಂಸದ ಭಗವಂತ ಖೂಬಾ ಹೇಳಿದರು.

***
ಜಿಲ್ಲೆಗೆ ಬರಲಿವೆ ಇನ್ನೂ ಐದು ಹೊಸ ವಾಹನಗಳು

ಬೀದರ್‌: ‘ಜಿಲ್ಲೆಗೆ ತುರ್ತು ಸ್ಪಂದನ ಸಹಾಯಕ್ಕೆ ಇನ್ನೂ ಐದು ಹೊಸ ವಾಹನಗಳು ಬರಲಿವೆ. ಈ ಮೂಲಕ ಇಆರ್‌ಎಸ್‌ಎಸ್‌ ವಾಹನಗಳ ಸಂಖ್ಯೆ 20ಕ್ಕೆ ಹೆಚ್ಚಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ತಿಳಿಸಿದರು.

ನಗರದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ಕೋವಿಡ್ ಪ್ರಯುಕ್ತ ಜನರ ಆರೋಗ್ಯ ಕಾಪಾಡಲು ಎಲ್ಲರಿಗೂ ಆರೋಗ್ಯ, ಎಲ್ಲಡೆಯೂ ಆರೋಗ್ಯ ಎನ್ನುವ ಧ್ಯೇಯವಾಕ್ಯದೊಂದಿಗೆ ರಾಜ್ಯ ಸರ್ಕಾರ ಕಾರ್ಯಪ್ರವೃತ್ತವಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕೋವಿಶೀಲ್ಡ್‌ ಲಸಿಕಾಕರಣ ಪ್ರಗತಿಯಲ್ಲಿದೆ. ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಸ್ವಚ್ಛತಾ ಕಾರ್ಮಿಕರಿಗೆ ಹಾಗೂ ಪೊಲೀಸರಿಗೆ ಲಸಿಕೆ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗಬೇಕು ಎನ್ನುವುದು ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅನುಭವ ಮಂಟಪ ಕಟ್ಟಡ ನಿರ್ಮಾಣಕ್ಕೆ ಈಚೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜಿಲ್ಲೆಯ ಜನರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುವೆ’ ಎಂದರು.

ಇದಕ್ಕೂ ಮೊದಲು ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರ ಪಡೆ, ಪೊಲೀಸ್‌ ಪಡೆ, ಗೃಹರಕ್ಷಕ ದಳ, ಮಹಿಳಾ ಪೊಲೀಸ್‌ ಸಿಬ್ಬಂದಿ ಪರೇಡ್‌ ವೀಕ್ಷಣೆ ಮಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಿರ್ಮಲಾ ಮಾನೆಗೋಪಾಳೆ, ಸಂಸದ ಭಗವಂತ ಖೂಬಾ, ಶಾಸಕರಾದ ರಹೀಂಖಾನ್‌,  ಬಂಡೆಪ್ಪ ಖಾಶೆಂಪೂರ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪೂರೆ, ವಿಜಯಸಿಂಗ್, ಅರವಿಂದಕುಮಾರ ಅರಳಿ, ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ,
ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್, ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್, ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ, ಬೀದರ್‌ ಉಪ ವಿಭಾಗಾಧಿಕಾರಿ ಗರಿಮಾ ಪನ್ವಾರ್, ಬೀದರ್ ತಹಶೀಲ್ದಾರ್ ಗಂಗಾದೇವಿ ಇದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ನಿರೂಪಿಸಿದರು.

ಸಾಧಕರ ಸನ್ಮಾನ

ಬೀದರ್‌: ಜಿಲ್ಲಾ ಆಡಳಿತದ ವತಿಯಿಂದ ಆಯೋಜಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭೀಮರಾವ್‌ ಬೀದರಕರ್(ಪರಿಸರ), ವೀರಭದ್ರಪ್ಪ ಉಪ್ಪಿನ್‌, ದೀಪಕ ವಾಲಿ, ಶ್ರೀಕಾಂತ ಪಾಟೀಲ (ಸಮಾಜಸೇವೆ), ರಾಮಲಿಂಗ ಹಣಮಂತರಾವ್ (ಜಾನಪದ), ವಿಜಯಕುಮಾರ, ಪ್ರವೀಣ ಗುತ್ತೆ(ಚಿತ್ರಕಲೆ), ಮಲ್ಲಿಕಾರ್ಜುನ ಟಂಕಸಾಲೆ (ಶಿಕ್ಷಣ), ಶಮಾ ಖಾದ್ರಿ, ಸರುಬಾಯಿ ಶಂಕರ, ಶ್ಯಾಮರಾವ್‌ ನಲವಡೆ, ಶಾಂತಾ ಸಾಮ್ಯುವೆಲ್, ಪಿಎಸ್‌ಐ ಸಂಗೀತಾ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.