
ಬೀದರ್: ‘ಜಿಲ್ಲೆಯ ಪ್ರತಿಯೊಬ್ಬರೂ ಕಡ್ಡಾಯವಾಗಿ ಆಧಾರ್ ಕಾರ್ಡ್ ಮಾಡಿಸಿಕೊಂಡು, ಗುರುತಿನ ಚೀಟಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾಮಟ್ಟದ ಆಧಾರ್ ಮಾನಿಟರಿಂಗ್ ಕಮಿಟಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯ ಎಲ್ಲಾ ನಾಗರಿಕರು ಮೌಲ್ಯಯುತವಾಗಿರುವ ಆಧಾರ್ ಗುರುತಿನ ಚೀಟಿ ಹೊಂದುವುದು ಅವಶ್ಯಕವಾಗಿದೆ. ಹೊಸ ನೋಂದಣಿ, ಮರು ನೋಂದಣಿಗಾಗಿ ಬಯೋಮೆಟ್ರಿಕ್ ನೀಡುವ ಮೂಲಕ ಆಧಾರ್ ಗುರುತಿನ ಚೀಟಿ ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ 5 ವರ್ಷ ಮೇಲಿನ 1,23,830 ಮಕ್ಕಳು, 15 ವರ್ಷ ಮೇಲಿನ 79,033 ಸೇರಿದಂತೆ 2,02,863 ಜನರ ಆಧಾರ್ ನವೀಕರಣ ಬಾಕಿಯಿದೆ. ಬೀದರ್ ಜಿಲ್ಲೆಯಲ್ಲಿ ಇದುವರೆಗೆ 19,46,492 ಲಕ್ಷ ಜನ ಆಧಾರ್ ನೋಂದಣಿ ಮಾಡಿಸಿದ್ದಾರೆ. ಇವರಲ್ಲಿ 5 ವರ್ಷದೊಳಗಿನ 85,037 ಸಾವಿರ ಮಕ್ಕಳು, 5 ರಿಂದ 18 ವರ್ಷದ 4,39,333 ಲಕ್ಷ ಜನ, 18 ವರ್ಷ ಮೇಲಿನ 14,22,122 ಲಕ್ಷ ಜನ ಸೇರಿದ್ದಾರೆ ಎಂದರು.
ರಾಜ್ಯ ಆಧಾರ್ ನೋಂದಣಿ ಪ್ರಾಧಿಕಾರ ಜಿಲ್ಲೆಯ ನಾಡ ಕಚೇರಿಯ ಜನಸ್ನೇಹಿ ಕೇಂದ್ರಗಳ ಕಚೇರಿಯಲ್ಲಿ ಆಯ್ದ ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ನೋಂದಣಿ ಕೇಂದ್ರ ತೆರೆದಿದೆ. ಕಚೇರಿ ಸಮಯದಲ್ಲಿ ಆಧಾರ್ ಸೇವೆ ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಆಧಾರ್ ನಿಷ್ಕ್ರಿಯಗೊಂಡು ವಿವಿಧ ಸೌಲಭ್ಯ ಅಥವಾ ಸೇವೆ ಪಡೆಯಲು ತೊಂದರೆಯಾಗುತ್ತದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 500 ಹೆಚ್ಚು ಸಾರ್ವಜನಿಕ ಅಧಾರ್ ಸಮಸ್ಯೆಗಳಿವೆ. ಸದರಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕಚೇರಿಗೆ ಅಲೆದಾಡುತ್ತಿದ್ದಾರೆ. ಯು.ಐ.ಡಿ.ಐ ಆಧಾರ್ ಸಂಯೋಜಕ ಅಧಿಕಾರಿಗಳು 15 ದಿನಗಳಲ್ಲಿ ಈ ಕೆಲಸ ಮಾಡಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಬೀದರ್ ಯುಐಡಿಐ ಸಹಾಯಕ ವ್ಯವಸ್ಥಾಪಕ ಮುಹಮ್ಮದ್ ಮುಸಾಬ್, ರಿಕೇಶಕುಮಾರ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಸುಳ್ಳೊಳ್ಳಿ, ಲೀಡ್ ಬ್ಯಾಂಕ್ ಜಿಲ್ಲಾ ಆಧಾರ್ ಸಮಾಲೋಚಕ ಅಮರ್ ಆರ್. ಹಾಜರಿದ್ದರು.
ಎರಡು ಸಲ ತಿದ್ದುಪಡಿಗೆ ಅವಕಾಶ
‘ಆಧಾರ್ ತಿದ್ದುಪಡಿಯಲ್ಲಿ ಹೆಸರು ಮತ್ತು ಜನ್ಮ ದಿನಾಂಕ ತಿದ್ದುಪಡಿಗೆ ಎರಡು ಸಲ ಅವಕಾಶವಿದೆ. ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು. ‘ಹತ್ತು ವರ್ಷಗಳ ಹಿಂದೆ ನೋಂದಣಿ ಮಾಡಿಸಿದ ಎಲ್ಲಾ ಸಾರ್ಜಜನಿಕರು ತಮ್ಮ ಗುರುತಿನ ಹಾಗೂ ವಿಳಾಸದ ದಾಖಲೆ ನೀಡಿ ಅಪಡೇಟ್ ಮಾಡಿಕೊಳ್ಳುವಂತೆ ಸಾರ್ಜನಿಕರಿಗೆ ಸ್ವಚ್ಛತಾ ವಾಹನಗಳ ಧ್ವನಿವರ್ಧಕಗಳ ಮೂಲಕ ಪ್ರಚಾರ ಕೈಗೊಳ್ಳಬೇಕು’ ಎಂದು ಸೂಚಿಸಿದರು. 10 ವರ್ಷಗಳ ಹಿಂದೆ ಆಧಾರ್ ನೋಂದಣಿ ಮಾಡಿಸಿದ ಎಲ್ಲರೂ ಗುರುತಿನ ಹಾಗೂ ವಿಳಾಸ ದಾಖಲೆ ನೀಡಿ ಅಧಾರ್ ಕೇಂದ್ರದಲ್ಲಿ ಮರು ಅಪ್ಲೋಡ್ ಮಾಡಿಸಬೇಕು. ಆನ್‌ಲೈನ್ ಮೂಲಕವೂ ನೇರವಾಗಿ ನವೀಕರಿಸಲು ಅವಕಾಶವಿದೆ ಎಂದು ತಿಳಿಸಿದರು.
ಶಾಲೆಗಳಲ್ಲಿ ಆಧಾರ್ ಕ್ಯಾಂಪ್
‘ಶಾಲಾ ವಿದ್ಯಾರ್ಥಿಗಳಿಗೆ ಕ್ಲಸ್ಟರ್ ಮಟ್ಟದಲ್ಲಿ ಆಧಾರ್ ಕ್ಯಾಂಪ್ ಹಮ್ಮಿಕೊಂಡು ಬಯೋಮೆಟ್ರಿಕ್ ಮಾಡಿಸಬೇಕು’ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಸೂಚಿಸಿದರು. ಕರ್ನಾಟಕ ಓನ್ ಕೇಂದ್ರಗಳಿಗೆ 10 ಕಿಟ್‌ಗಳನ್ನು ಒದಗಿಸಿ ಬಾಕಿ ಇರುವ ಶಾಲಾ ಮಕ್ಕಳ ನೋಂದಣಿ/ತಿದ್ದುಪಡಿ ಮಾಡಬೇಕು. ಮೊಬೈಲ್ ನಂಬರ್ ಅಪ್‌ಡೇಟ್ ಬಾಕಿಯಿರುವ 130923 ನಿವಾಸಿಗಳು ಅಂಚೆ ಕಚೇರಿಗೆ ಭೇಟಿ ನೀಡಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.