
ಶಿಲ್ಪಾ ಶರ್ಮಾ
ಬೀದರ್: ಗಾಳಿಪಟಕ್ಕೆ ಬಳಸುವ ಗಾಂಜಾ ದಾರ ಬಳಸುವುದರ ಮೇಲೆ ಜಿಲ್ಲಾಡಳಿತ ನಿಷೇಧ ಹೇರಿದ್ದು, ಕಾನೂನು ಉಲ್ಲಂಘಿಸಿ ಮಾಂಜಾ ತಯಾರಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.
ಚಿಟಗುಪ್ಪ ತಾಲ್ಲೂಕಿನ ತಾಳಮಡಗಿಯಲ್ಲಿ ಬುಧವಾರ ಬೆಳಿಗ್ಗೆ ಸಂಜುಕುಮಾರ್ ಗುಂಡಪ್ಪ ಹೊಸಮನಿ ಎಂಬುವರ ಕತ್ತಿಗೆ ಮಾಂಜಾ ಸಿಲುಕಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ಆದೇಶ ಹೊರಡಿಸಿದೆ.
ಗಾಳಿಪಟ ಹಾರಿಸಲು ನಿರ್ಬಂಧಿತ ಮಾಂಜಾ ದಾರ ಬಳಕೆ ಮಾಡುವುದರಿಂದ ಪ್ರಾಣಿ-ಪಕ್ಷಿಗಳಿಗೆ ಹಾಗೂ ಬೈಕ್ ಸವಾರರಿಗೆ ಸಮಸ್ಯೆಯಾಗುತ್ತಿದೆ. ಮಾರಣಾಂತಿಕ ತೊಂದರೆಗೂ ಕಾರಣವಾಗುತ್ತಿದೆ. ಇದರಿಂದ ಪರಿಸರಕ್ಕೂ ಹಾನಿಯುಂಟಾಗುತ್ತಿದೆ. ಗಾಳಿಪಟ ಹಾರಿಸಲು ಕೇವಲ ಹತ್ತಿ ದಾರ ಬಳಸಲು ಅನುಮತಿ ಇರುತ್ತದೆ. ನಿಷೇಧಿತ ಮಾಂಜಾ ದಾರ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆಯನ್ನು ರಾಷ್ಟ್ರೀಯ ಹಸಿರು ಪೀಠವು (ಎನ್‌ಜಿಟಿ) ಸಂಪೂರ್ಣವಾಗಿ ನಿಷೇಧಿಸಿ ಆದೇಶಿಸಿರುತ್ತದೆ. ಒಂದು ವೇಳೆ ಇಂತಹ ನಿಷೇಧಿತ ವಸ್ತುವಿನ ತಯಾರಿಕೆ, ಸಂಗ್ರಹಣೆ, ಮಾರಾಟ ಮತ್ತು ಬಳಕೆ ಮಾಡಿದರೆ ಅಂತಹವರ ವಿರುದ್ಧ ಪರಿಸರ ಸಂರಕ್ಷಣ ಕಾಯ್ದೆ -1986, ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆ ಕಲಂಗಳ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಬುಧವಾರ ರಾತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾವಿಗೆ ಕಾರಣರಾದವರ ಪತ್ತೆಗೆ ಸೂಚನೆ
ಕೂಡಲೇ ಜಿಲ್ಲೆಯಾದ್ಯಂತ ಯಾವುದೇ ಮಳಿಗೆಯಲ್ಲಿ ನಿಷೇಧಿತ ಚೀನಿ ಮಾಂಜಾ ದಾರ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಚಿಟಗುಪ್ಪ ತಾಲ್ಲೂಕಿನ ತಾಳಮಡಗಿಯಲ್ಲಿ ವ್ಯಕ್ತಿಯ ಸಾವಿಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜನ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.
ತತ್ ಕ್ಷಣವೇ ಈ ಬಗ್ಗೆ ಜಿಲ್ಲೆಯ ಸಾರ್ವಜನಿಕರ ಮೊಬೈಲ್ ಸಂಖ್ಯೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂದೇಶ ರವಾನಿಸಿ ಜಾಗೃತಿ ಮೂಡಿಸಬೇಕು. ದ್ವಿಚಕ್ರ ವಾಹನ ಚಲಾಯಿಸುವಾಗ ಕುತ್ತಿಗೆಗೆ ಒಂದು ವಸ್ತ್ರ ಸುತ್ತಿಕೊಳ್ಳುವಂತೆ ತಿಳಿಸಬೇಕು ಎಂದು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.