ADVERTISEMENT

ಪಿಯುಸಿ ಫಲಿತಾಂಶ| 21ನೇ ಸ್ಥಾನಕ್ಕೇರಿದ ಬೀದರ್‌ ಜಿಲ್ಲೆ

ಜಿಲ್ಲೆಯ ಶೇ 60.78ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಚಂದ್ರಕಾಂತ ಮಸಾನಿ
Published 18 ಜೂನ್ 2022, 19:31 IST
Last Updated 18 ಜೂನ್ 2022, 19:31 IST
ಬೀದರ್‌ನ ಕರ್ನಾಟಕ ಪ.ಪೂ. ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್‌ ಅವರು ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದ ಸೌಭಾಗ್ಯ ವೈಜಿನಾಥ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ವಿದ್ಯಾರ್ಥಿನಿಯರಾದ ಅನುಷ್ಕಾ ಅನಿಲ, ಸ್ನೇಹಾ ಎಸ್‌ ಹಾಗೂ ಪ್ರಾಚಾರ್ಯ ಬಸವರಾಜ ಬಲ್ಲೂರ್‌ ಇದ್ದಾರೆ
ಬೀದರ್‌ನ ಕರ್ನಾಟಕ ಪ.ಪೂ. ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್‌ ಅವರು ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದ ಸೌಭಾಗ್ಯ ವೈಜಿನಾಥ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ವಿದ್ಯಾರ್ಥಿನಿಯರಾದ ಅನುಷ್ಕಾ ಅನಿಲ, ಸ್ನೇಹಾ ಎಸ್‌ ಹಾಗೂ ಪ್ರಾಚಾರ್ಯ ಬಸವರಾಜ ಬಲ್ಲೂರ್‌ ಇದ್ದಾರೆ   

ಬೀದರ್‌: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಬೀದರ್‌ ಜಿಲ್ಲೆ ಕೊಂಚ ಸುಧಾರಣೆ ಕಂಡಿದೆ. ಪ್ರತಿ ಬಾರಿಯೂ ಕೊನೆಯ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿದ್ದ ಬೀದರ್‌ 21ನೇ ಸ್ಥಾನದಲ್ಲಿ ಗುರುತಿಸಿಕೊಂಡಿದ್ದು, ಶೇ 60.78ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

2019ರಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಬೀದರ್‌ ಜಿಲ್ಲೆ 30ನೇ ಸ್ಥಾನದಲ್ಲಿ ಇತ್ತು. ಆಗ ಶೇ 55.78ರಷ್ಟು ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದರು. 2020ರಲ್ಲಿ ಶೇಕಡ 64.61ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು.

ಕಳೆದ ವರ್ಷ ಕೋವಿಡ್‌ ಕಾರಣ ದ್ವಿತೀಯ ಪಿಯುಸಿ ಪರೀಕ್ಷೆಗೆ ಕುಳಿತ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣ ಮಾಡಲಾಗಿತ್ತು. 2020–21ರಲ್ಲಿ 16,173 ರೆಗ್ಯುಲರ್ ಹಾಗೂ 2,759 ರಿಪೀಟರ್ ಸೇರಿ ಒಟ್ಟು 18,932 ವಿದ್ಯಾರ್ಥಿಗಳು ಪಾಸಾಗಿದ್ದರು. ಪ್ರಸಕ್ತ ವರ್ಷ ಪರೀಕ್ಷೆಗೆ ಹಾಜರಾದ 16,306 ವಿದ್ಯಾರ್ಥಿಗಳಲ್ಲಿ 9,911 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಶಾಹಾಬಾದಕರ್ ತಿಳಿಸಿದ್ದಾರೆ.

ADVERTISEMENT

ಕೋವಿಡ್‌ ಕಾರಣ 2020ರಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸದೇ ಮುಂದಿನ ತರಗತಿಗೆ ಪ್ರಮೋಟ್‌ ಮಾಡಲಾಗಿತ್ತು. 2021ರಲ್ಲಿ ಎಲ್ಲ ವಿದ್ಯಾರ್ಥಿಗಳನ್ನೂ ಪಾಸ್‌ ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಪರಿಪೂರ್ಣ ಕಲಿಕೆ ಸಾಧ್ಯವಾಗಿರಲಿಲ್ಲ. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.

ಉತ್ತಮ ಫಲಿತಾಂಶ ಪಡೆದ ಜಿಲ್ಲೆಗಳ ಸಾಲಿನಲ್ಲಿ ಮೇಲಕ್ಕೆ ಏರಿದರೂ 2020ನೇ ಸಾಲಿನ ಫಲಿತಾಂಶಕ್ಕೆ ಹೋಲಿಸಿದರೆ ಈ ವರ್ಷದ ಫಲಿತಾಂಶ ಕಡಿಮೆಯಾಗಿದೆ. ಕೋವಿಡ್‌ ಕಾರಣ ಕಳೆದ ವರ್ಷ ಸಕಾಲದಲ್ಲಿ ಕಾಲೇಜುಗಳು ಶುರುವಾಗಿರಲಿಲ್ಲ. ಆನ್‌ಲೈನ್‌ ತರಗತಿಗಳ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗಿತ್ತು. ಬೋಧನೆ ಪರಿಣಾಮಕಾರಿಯಾಗಿರಲಿಲ್ಲ. ವಿದ್ಯಾರ್ಥಿಗಳ ಮೇಲೆ ಸೂಕ್ಷ್ಮ ನಿಗಾ ಇಡಲು ಸಾಧ್ಯವಾಗಿರಲಿಲ್ಲ. ಫಲಿತಾಂಶ ಕಡಿಮೆ ಬರಲು ಈ ಎಲ್ಲ ಅಂಶಗಳೇ ಕಾರಣವಾಗಿರಬಹುದು ಎಂದು ಕರ್ನಾಟಕ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಬಸವರಾಜ ಬಲ್ಲೂರ್‌ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್‌ ಕರಾಳ ಛಾಯೆಯ ಮಧ್ಯೆಯೂ ಎಲ್ಲ ಕಾಲೇಜುಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅನುದಾನ ರಹಿತ ಕಾಲೇಜುಗಳಿಗೇ ಉತ್ತಮ ಫಲಿತಾಂಶ ಬಂದಿರುವುದು ಗಮನಾರ್ಹವಾಗಿದೆ ಎಂದು ಶಾಹೀನ್‌ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಅಬ್ದುಲ್‌ ಖದೀರ್‌ ಹೇಳುತ್ತಾರೆ.

ಆನ್‌ಲೈನ್‌ ತರಗತಿ ಇದ್ದ ಕಾರಣ ವಿದ್ಯಾರ್ಥಿಗಳಿಗೆ ಹೈಸ್ಕೂಲ್‌ನಲ್ಲಿ ಮೂಲ ಶಿಕ್ಷಣ ಸರಿಯಾಗಿ ದೊರೆಯಲಿಲ್ಲ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಸಮಸ್ಯೆ ಅನುಭವಿಸಿದ್ದರು. ಕೈಯಲ್ಲಿ ಮೊಬೈಲ್‌ ಇದ್ದ ಕಾರಣ ಮನಸ್ಸನ್ನು ಕೇಂದ್ರೀಕರಿಸಿ ಅಧ್ಯಯನ ಮಾಡಲು ಅನೇಕ ವಿದ್ಯಾರ್ಥಿಗಳಿಗೆ ಸಾಧ್ಯವಾಗಲಿಲ್ಲ. ನಮ್ಮಂಥ ಕಾಲೇಜುಗಳು ಪ್ರಥಮ ವರ್ಷದಲ್ಲಿ ಹೊಸದಾಗಿ ಮೂಲ ಶಿಕ್ಷಣ ಕೊಟ್ಟು ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಗೊಳಿಸಿದವು ಎಂದು ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.