ADVERTISEMENT

ಬೀದರ್‌ | ಮೂವರು ನಕಲಿ ವೈದ್ಯರಿಗೆ ದಂಡ: ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 13:52 IST
Last Updated 19 ಜೂನ್ 2025, 13:52 IST
ಶಿಲ್ಪಾ ಶರ್ಮಾ
ಶಿಲ್ಪಾ ಶರ್ಮಾ   

ಬೀದರ್‌: ಔರಾದ್‌ (ಬಿ) ತಾಲ್ಲೂಕಿನ ಮುಧೋಳ (ಬಿ) ಗ್ರಾಮದ ನಕಲಿ ವೈದ್ಯ ನಾರಾಯಣರಾವ್‌ ಕುಲರ್ಕಣಿ, ಬಸವರಾಜ ಒಂಟೆ ಅವರಿಗೆ ತಲಾ ₹50 ಸಾವಿರ ಹಾಗೂ ಸ್ಟಾಫ್ ನರ್ಸ್‌ ಪ್ರೇಮಾ ಜೀರಗೆ ಅವರಿಗೆ ₹1 ಲಕ್ಷ ದಂಡ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಜಿಲ್ಲಾ ನೋಂದಣಿ ಮತ್ತು ಕುಂದು ಕೂರತೆ ಪರಿಹಾರ ಪ್ರಾಧಿಕಾರದ ಸಭೆಯ‌ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಮೂವರು ಯಾವುದೇ ವೈದ್ಯಕೀಯ ಪದವಿ ಪಡೆದಿಲ್ಲ. ಇದರ ಬಗ್ಗೆ ದೂರುಗಳು ಬಂದಿದ್ದವು. ಔರಾದ್‌ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಗಾಯತ್ರಿ ಹಾಗೂ ಜಿಲ್ಲಾ ಕೆಪಿಎಂಇ ನೋಡಲ್‌ ಅಧಿಕಾರಿ ಡಾ. ದಿಲೀಪ್ ಡೋಂಗ್ರೆ ಅವರು ಸದರಿ ಗ್ರಾಮಕ್ಕೆ ಭೇಟಿ ನೀಡಿ ಕ್ಲಿನಿಕ್‌ಗಳನ್ನು ಸೀಜ್‌ ಮಾಡಿದ್ದಾರೆ ಎಂದು ಹೇಳಿದರು.

ADVERTISEMENT

ಡಾ. ರಂಜಿತ ಬಿರಾದಾರ ಅವರು ಮಹಾರಾಷ್ಟ್ರ ರಾಜ್ಯದಲ್ಲಿ ಆಯುರ್ವೇದ ಪದ್ದತಿಯಲ್ಲಿ ಪದವಿ ಹೊಂದಿದ್ದಾರೆ. ಆದರೆ, ಔರಾದ್‌ ತಾಲ್ಲೂಕಿನ ಏಕಂಬಾ ಗ್ರಾಮದಲ್ಲಿ ಅಲೋಪತಿ ವೈದ್ಯ ವೃತ್ತಿ ನಡೆಸುತ್ತಿದ್ದಾರೆ. ಆದರೆ, ಕರ್ನಾಟಕ ರಾಜ್ಯದಲ್ಲಿ ವೈದ್ಯ ವೃತ್ತಿ ನಡೆಸಬೇಕಾದರೆ ಕೆಪಿಎಂಇ ಕಾಯ್ದೆ ಪ್ರಕಾರ ಕರ್ನಾಟಕ ಆಯುರ್ವೇದ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿ ಮಂಡಳಿಯಿಂದ ಪ್ರಮಾಣ ಪತ್ರ ಪಡೆಯಬೇಕು. ಇದು ಕೆಪಿಎಂಇ ಕಾಯ್ದೆ 2007ರ ಕಲಂ 19 ಮತ್ತು 22ರ ಸ್ಪಷ್ಟ ಉಲ್ಲಂಘನೆ ಆಗಿರುವುದರಿಂದ ಕ್ರಮ ಕೈಗೊಳ್ಳಲಾಗಿದೆ. ಮುಂದೆ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.

ಆಯುರ್ವೇದ ವೈದ್ಯ ಡಾ. ರಂಜಿತ ಬಿರಾದಾರ ಅವರಿಗೆ ಕರ್ನಾಟಕ ಆಯುರ್ವೇದ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಮಾಡಿಸಿ ಮಂಡಳಿಯಿಂದ ಪ್ರಮಾಣ ಪತ್ರ ಪಡೆದು ಕೆಪಿಎಂಇ ನೋಂದಣಿ ಮಾಡಿಸಿ ಅದೇ ಪದ್ದತಿಯಲ್ಲಿ ವೈದ್ಯ ವೃತ್ತಿ ನಡೆಸಲು ಎಚ್ಚರಿಕೆ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.