ADVERTISEMENT

ಕೆಲಸಕ್ಕೆ ಅಡ್ಡಿ, ಹಲ್ಲೆ–ಜೀವ ಬೆದರಿಕೆ: ಇಬ್ಬರ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:45 IST
Last Updated 26 ಜುಲೈ 2025, 6:45 IST
   

ಬೀದರ್‌: ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಕಡತಗಳನ್ನು ಬಿಸಾಡಿ, ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬೀದರ್‌ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್‌ ಪಾಟೀಲ್‌ ಹಾಗೂ ಸಿಬ್ಬಂದಿ ಮಹಾದೇವಿ ಎಂಬುವರು ಕೊಟ್ಟಿರುವ ದೂರಿನ ಮೇರೆಗೆ ಇಲ್ಲಿನ ನೂತನ ನಗರ ಪೊಲೀಸ್‌ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಗಾದಗಿ ಗ್ರಾಮದ ಕಂಟೆಪ್ಪ ಸಿದ್ರಾಮಪ್ಪ ಹೊನ್ನಾ (77) ಮತ್ತು ಇವರ ಮಗ ರವಿಕಿರಣ್‌ ಕಂಟೆಪ್ಪ ಹೊನ್ನಾ ವಿರುದ್ಧ ಕಲಂ 115(2), 132, 352, 351(2), 3(5) ರ ಅಡಿ ಗುರುವಾರ ಪ್ರಕರಣ ದಾಖಲಾಗಿದೆ.

‘ಜೂನ್‌ 27ರಂದು ಮಧ್ಯಾಹ್ನ 12ರಿಂದ 1ರ ನಡುವೆ ಎಂದಿನಂತೆ ಕಚೇರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದೆವು. ಪಂಚಾಯತ್‌ ರಾಜ್‌ ಇಲಾಖೆಯ ಸಹಾಯಕ ನಿರ್ದೇಶಕ ಸಂಜುಕುಮಾರ ಜೊತೆ ಕಚೇರಿ ವಿಷಯವಾಗಿ ಚರ್ಚಿಸುತ್ತಿದ್ದೆ. ಈ ವೇಳೆ ಕಂಟೆಪ್ಪ ಹೊನ್ನಾ ಅವರು ಏಕಾಏಕಿ ಕಚೇರಿಗೆ ಬಂದು, ಮೇಜಿನ ಮೇಲಿನ ಎಲ್ಲ ಕಡತಗಳನ್ನು ಬಿಸಾಡಿದ್ದಾರೆ. ಕಳ್ಳರು, ಭ್ರಷ್ಟರು ಸೇರಿದಂತೆ ಇತರೆ ಪದಗಳಿಂದ ಅವಾಚ್ಯವಾಗಿ ನಿಂದಿಸಿದ್ದಾರೆ. ಅವರನ್ನು ಕಚೇರಿ ಹೊರಗೆ ಕಳಿಸಿದರೂ ಪುನಃ ಅವರ ಮಗ ರವಿಕಿರಣ್‌ ಜೊತೆಗೆ ಬಂದು, ಪುನಃ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ. ಮಹಿಳಾ ಸಿಬ್ಬಂದಿ ಮಹಾದೇವಿ ಅವರಿಗೂ ಬೈಯ್ದಿದ್ದಾರೆ. ಕಚೇರಿ ಕೆಲಸಕ್ಕೆ ಬಂದಿದ್ದ ಕಮಠಾಣ ಗ್ರಾಮ ಪಂಚಾಯಿತಿ ಪಿಡಿಒಗೂ ನಿಂದಿಸಿದ್ದಾರೆ. ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿದ್ದಾರೆ. ಇಬ್ಬರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಈಗಾಗಲೇ ಕಂಟೆಪ್ಪ ಅವರಿಗೆ ಸೇರಿದ ಗಾದಗಿ ಗ್ರಾಮದ ಆಸ್ತಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ಅಂತಿಮ ಆದೇಶ ಹೊರಡಿಸಲಾಗಿದೆ’ ಎಂದು ಮಾಣಿಕರಾವ್‌ ಪಾಟೀಲ್‌ ಹಾಗೂ ಮಹಾದೇವಿ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಂಟೆಪ್ಪ ಅವರು ಮಂಗಳವಾರ (ಜು.22) ಕೊಟ್ಟಿದ್ದ ದೂರಿನ ಮೇರೆಗೆ ಇಒ ಮಾಣಿಕರಾವ್‌ ಪಾಟೀಲ್‌ ಸೇರಿದಂತೆ ನಾಲ್ವರ ವಿರುದ್ಧ ಇಲ್ಲಿನ ನೂತನ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಗಾದಗಿಯಲ್ಲಿ ಹಿರಿಯರ ಆಸ್ತಿ ಹಂಚಿಕೆಗೆ ಸಂಬಂಧಿಸಿದಂತೆ ವಿವಾದ ತಲೆದೋರಿದೆ. ಗಾದಗಿ ಗ್ರಾಪಂ ಅಧಿಕಾರಿಗಳ ತಪ್ಪಿನಿಂದ ಆಸ್ತಿ ಬೇರೊಬ್ಬರ ಹೆಸರಿಗೆ ನಮೂದಾಗಿದೆ. ಈ ಕುರಿತು ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿಗೆ ಪತ್ರ ಬರೆದಿದ್ದರು. ವಿಳಂಬವಾಗಿದ್ದಕ್ಕೆ ತಾಪಂ ಕಚೇರಿಗೆ ವಿಚಾರಿಸಲು ಹೋದಾಗ ಇಒ ಮಾಣಿಕರಾವ್‌ ಪಾಟೀಲ್‌ ಅವರ ಪ್ರಚೋದನೆಯಿಂದ ಹಲ್ಲೆ ನಡೆಸಿದ್ದಾರೆ. ಇನ್ನೊಮ್ಮೆ ಕಚೇರಿಗೆ ಬಂದರೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಕಂಟೆಪ್ಪ ದೂರಿನಲ್ಲಿ ತಿಳಿಸಿದ್ದರು.

ಇಒ ಸೇರಿ ನಾಲ್ವರ ಅಮಾನತಿಗೆ ಆಗ್ರಹ

ಬೀದರ್‌: ‘ನಿವೃತ್ತ ನೌಕರ ಕಂಟೆಪ್ಪ ಹೊನ್ನಾ ಅವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಬೀದರ್‌ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ್‌ ಪಾಟೀಲ್‌ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸಬೇಕು’ ಎಂದು ನವನಿರ್ಮಾಣ ಸೇನೆಯ ಸಂಸ್ಥಾಪಕ ಅಧ್ಯಕ್ಷ ಸ್ವಾಮಿದಾಸ ಕೆಂಪೇನೋರ ಆಗ್ರಹಿಸಿದ್ದಾರೆ.

ಜಿಲ್ಲಾಧಿಕಾರಿ ಮೂಲಕ ಲೋಕಾಯುಕ್ತರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. 

‘ಆಸ್ತಿಯ ವಿಚಾರವಾಗಿ ಅಧಿಕಾರಿಗಳಿಗೆ ನ್ಯಾಯ ಕೇಳಲು ಹೋದಾಗ ಸದರಿ ಅಧಿಕಾರಿಗಳು ಹಿರಿಯ ನಾಗರಿಕ ಎಂಬುದನ್ನು ನೋಡದೆ ಹಲ್ಲೆ ನಡೆಸಿದ್ದಾರೆ. ಈಗಾಗಲೇ ಇವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ. ಮಾಣಿಕರಾವ್‌ ಪಾಟೀಲ್‌ ಅವರು ಪದೇ ಪದೇ ತಾಲ್ಲೂಕು ಪಂಚಾಯಿತಿ ಇಒ ಆಗಿ ವರ್ಗಾವಣೆ ಮಾಡಿಸಿಕೊಂಡು ಬರುತ್ತಿದ್ದಾರೆ. ಈ ಹಿಂದೆ ಒಮ್ಮೆ ಕೆಲಸದಿಂದ ಅಮಾನತುಗೊಂಡಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.