ADVERTISEMENT

ಶೀಘ್ರವೇ ಬೀದರ್‌–ಹೈದರಾಬಾದ್‌ ರೈಲು ಮಾರ್ಗ ಡಬ್ಲಿಂಗ್‌: ಸಚಿವ ವಿ. ಸೋಮಣ್ಣ ಭರವಸೆ

ಹೈದರಾಬಾದ್‌–ಬೀದರ್‌–ಕಲಬುರಗಿ ನಡುವೆ ಡೆಮು ರೈಲು– ಸಚಿವ ಸೋಮಣ್ಣ ಭರವಸೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 10:27 IST
Last Updated 31 ಮೇ 2025, 10:27 IST
<div class="paragraphs"><p>ಸಚಿವ ಸೋಮಣ್ಣ</p></div>

ಸಚಿವ ಸೋಮಣ್ಣ

   

ಬೀದರ್‌: ರೈಲ್ವೆ ಖಾತೆ ರಾಜ್ಯ ಸಚಿವರಾದ ನಂತರ ಮೊದಲ ಬಾರಿಗೆ ವಿ. ಸೋಮಣ್ಣನವರು ಶನಿವಾರ ಬೀದರ್‌ ಜಿಲ್ಲೆಗೆ ಭೇಟಿ ನೀಡಿದರು.

ಹೈದರಾಬಾದ್‌ನಿಂದ ವಿಶೇಷ ರೈಲಿನಲ್ಲಿ ನಗರದ ರೈಲು ನಿಲ್ದಾಣಕ್ಕೆ ಆಗಮಿಸಿದರು. ಅಮೃತ ಭಾರತ ಯೋಜನೆಯಡಿ ಕೈಗೆತ್ತಿಕೊಂಡಿರುವ ನಗರದ ರೈಲು ನಿಲ್ದಾಣದ ನವೀಕರಣ ಕಾಮಗಾರಿಯನ್ನು ವೀಕ್ಷಿಸಿ ರೈಲ್ವೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ADVERTISEMENT

ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೀದರ್‌–ಹೈದರಾಬಾದ್‌ ನಡುವೆ ಸದ್ಯ ಏಕಪಥವಿದೆ. 120 ಕಿ.ಮೀ ಈ ರೈಲು ಮಾರ್ಗವನ್ನು ಡಬ್ಲಿಂಗ್‌ ಮಾಡಲು ಯೋಜಿಸಲಾಗಿದೆ. ಇದಕ್ಕಾಗಿ ₹400 ಕೊಟಿ ಖರ್ಚು ಮಾಡಲಾಗುವುದು. ₹1,700 ಕೋಟಿಯಲ್ಲಿ ಹೈದರಾಬಾದ್‌– ಬೀದರ್‌ ಮಾರ್ಗ ಮಧ್ಯದಲ್ಲಿ ಕವಚ ಯೋಜನೆ ಜಾರಿಗೆ ತರಲಾಗುವುದು. ಎಲ್ಲ ಅನುದಾನ ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.‌

ಹೈದರಾಬಾದ್‌–ಬೀದರ್‌–ಕಲಬುರಗಿ ನಡುವೆ ಡೆಮು ರೈಲು ಆರಂಭಿಸಲು ಚಿಂತನೆ ನಡೆದಿದೆ. ಬೀದರ್‌– ಮೆಟಲ್‌ಕುಂಟಾ ಮಧ್ಯದಲ್ಲಿ ₹50 ಕೋಟಿಯಲ್ಲಿ ಸುಸಜ್ಜಿತ ನಿಲ್ದಾಣ ಸ್ಥಾಪಿಸಲು ಉದ್ದೇಶಿಸಲಾಗಿದೆ. ಬೀದರ್‌–ಹೈದರಾಬಾದ್‌, ಬೀದರ್‌–ಬೆಂಗಳೂರು ನಡುವೆ ವಂದೇ ಭಾರತ್‌ ಆರಂಭಿಸಬೇಕೆಂಬ ಬೇಡಿಕೆ ಇದೆ. ಅದನ್ನು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಸಿಕಂದರಾಬಾದ್‌ನಿಂದ ಬೀದರ್‌ವರೆಗೆ 50 ಎಲ್‌ಸಿ ಗೇಟ್‌ಗಳು ಬರುತ್ತವೆ. ಮೂರು ವರ್ಷಗಳಲ್ಲಿ ಇವುಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ. ಎಲ್ಲ ಕಡೆಗಳಲ್ಲಿ ಕೆಳಸೇತುವೆ ಹಾಗೂ ಮೇಲ್ಸೇತುವೆ ನಿರ್ಮಿಸಲಾಗುವುದು ಎಂದು ಹೇಳಿದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಸಂಸದ ಸಾಗರ್‌ ಖಂಡ್ರೆ, ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ ಮತ್ತಿತರರು ಹಾಜರಿದ್ದರು.

ಕಮಲ್‌ ಹಾಸನ್‌ ವಿಷಾದ ವ್ಯಕ್ತಪಡಿಸದಿರುವುದು ಸರಿಯಲ್ಲ

‘ತಾನು ಏನು ಮಾತನಾಡಿದ್ದೇನೆ ಅದರ ಬಗ್ಗೆ ವಿಷಾದ ವ್ಯಕ್ತಪಡಿಸದೇ ಇರುವ ನಟ ಕಮಲ್‌ ಹಾಸನ್‌ ಅವರ ನಿಲುವು ಸರಿಯಾದುದಲ್ಲ’ ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ಇದು ಒಕ್ಕೂಟ ವ್ಯವಸ್ಥೆಯ ದೇಶ. ಯಾರು ಕೂಡ ಯಾರ ಬಗ್ಗೆಯೂ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು.

ಸಿಎಂಗೆ ಪತ್ರ–ಸೋಮಣ್ಣ

‘ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದೇನೆ’ ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ಅನಂತಕುಮಾರ ಅವರು ಹಿಂದೆ ಕೇಂದ್ರ ಸಚಿವರಿದ್ದಾಗ ಜನೌಷಧಿ ಕೇಂದ್ರಗಳನ್ನು ಆರಂಭಿಸಿದ್ದರು. ಅವುಗಳು ಜೀವರಕ್ಷಕದಂತೆ ಕೆಲಸ ನಿರ್ವಹಿಸುತ್ತಿವೆ. ಅವುಗಳನ್ನು ಬಂದ್‌ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.