ADVERTISEMENT

ಸ್ಮಾರಕಗಳ ಬೀಡು ‘ಬೀದರ್‌’

ಐತಿಹಾಸಿಕ ತಾಣಗಳ ವೀಕ್ಷಣೆಗೆ ಬನ್ನಿ ಪರಂಪರೆ ನಗರಕ್ಕೆ

ಚಂದ್ರಕಾಂತ ಮಸಾನಿ
Published 6 ಫೆಬ್ರುವರಿ 2020, 10:29 IST
Last Updated 6 ಫೆಬ್ರುವರಿ 2020, 10:29 IST
ಬಹಮನಿ ಸುಲ್ತಾನರ ಕಾಲದ ಕೋಟೆ
ಬಹಮನಿ ಸುಲ್ತಾನರ ಕಾಲದ ಕೋಟೆ   

ಬೀದರ್‌: ಸರ್ವ ಧರ್ಮ, ಮತಸ್ತರು ಸಹಬಾಳ್ವೆ ನಡೆಸಿಕೊಂಡು ಬಂದಿರುವ ಕಾರಣ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಕೋಟೆ, ವಾಡೆಗಳು, ಪುರಾತನ ದೇವಾಲಯಗಳು, ಮಠಗಳು, ಮಸೀದಿ ಹಾಗೂ ಚರ್ಚ್‌ಗಳು ಇವೆ. ಹಿಂದೂ–ಮುಸ್ಲಿಂ, ಕನ್ನಡ, ಉರ್ದು, ಮರಾಠಿ ಸಂಸ್ಕೃತಿಯ ಸಮ್ಮಿಲನವನ್ನು ಜಿಲ್ಲೆಯಲ್ಲಿ ಕಾಣಬಹುದಾಗಿದೆ.

ಪ್ರವಾಸಿಗರಿಗೆ ಬೀದರ್ ಅಚ್ಚುಮೆಚ್ಚಿನ ಸ್ಥಳವಾಗಿದೆ. ಪರಂಪರೆ ನಗರವು ಐತಿಹಾಸಿಕ ಸ್ಮಾರಕ, ಗುಡಿ, ಗೋಪುರಗಳನ್ನು ತನ್ನ ಒಡಲಲ್ಲಿ ಇಟ್ಟುಕೊಂಡು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಕಲಬುರ್ಗಿಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದವರು ನೋಡಲೇ ಬೇಕಾದ ಸ್ಥಳಗಳು ಇಲ್ಲಿವೆ.

ಬೀದರ್‌ ನಗರ ಕಲಬುರ್ಗಿಯಿಂದ 130 ಕಿ.ಮೀ ಅಂತರದಲ್ಲಿದೆ. ಕಲಬುರ್ಗಿಯಿಂದ ಬೀದರ್‌ಗೆ ಪ್ರತಿ ಅರ್ಧಗಂಟೆಗೊಂದು ತಡೆ ರಹಿತ ಬಸ್‌ಗಳು ಸಂಚರಿಸುತ್ತವೆ. ಸಮ್ಮೇಳನಕ್ಕಾಗಿ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗಿದೆ. ರೈಲು ಸಂಪರ್ಕ ಸಹ ಇದೆ. ಪ್ರವಾಸಿಗರು ಕುಟುಂಬ ಸಹಿತ ಅಥವಾ ತಂಡಗಳಲ್ಲಿ ಸ್ವಂತ ವಾಹನಗಳ ಮೂಲಕ ಬಂದರೆ ಅನೇಕ ಐತಿಹಾಸಿಕ ತಾಣಗಳನ್ನು ಸುಲಭವಾಗಿ ವೀಕ್ಷಿಸಬಹುದಾಗಿದೆ.

ADVERTISEMENT

ನಗರದಲ್ಲೇ ಇರುವ ಬಹಮನಿ ಸುಲ್ತಾನರ ಕಾಲದ ಕೋಟೆ ಪ್ರವಾಸಿಗರ ಆಕರ್ಷಣೆಯ ತಾಣವಾಗಿದೆ. ಕೋಟೆಯ ಪ್ರವೇಶ ದ್ವಾರ ಶಾರಜಾ ದರ್ವಾಜಾ, ಗುಂಬಜ್‌ ದರ್ವಾಜಾ, ರಂಗೀನ್‌ ಮಹಲ್, ಸೋಲಾ ಗುಂಬಜ್ ಮಸೀದಿ, ತರ್ಕಶ್‌ ಮಹಲ್, ಗಗನ ಮಹಲ್, ತಖ್ತ ಮಹಲ್, ದಿವಾನ್‌–ಏ– ಆಮ್, ಹಜಾರ್ ಕೊಠರಿ, ಬಾರೂದ್‌ ಖಾನಾ, ಚಾಂದಿನಿ ಚಬುತರಾ, ಮಂಡು ದರ್ವಾಜಾ, ಕಲ್ಮಡಗಿ ದರ್ವಾಜಾ, ದೆಹಲಿ ದರ್ವಾಜಾ, ಕರ್ನಾಟಕ ದರ್ವಾಜಾ ಹಾಗೂ ಕೋಟೆಯೊಳಗೆ ಇರುವ ವಸ್ತುಸಂಗ್ರಹಾಲಯಕ್ಕೂ ಭೇಟಿ ಕೊಡಬಹುದಾಗಿದೆ.

ಕೋಟೆಯಿಂದ ಕೇವಲ 100 ಮೀಟರ್ ಅಂತರದಲ್ಲಿಯೇ ದಕ್ಷಿಣ ಭಾರತದ ಮೊದಲ ವಿಶ್ವವಿದ್ಯಾಲಯ ಎಂದು ಗುರುತಿಸಿಕೊಂಡ ಮೆಹಮೂದ್‌ ಗವಾನ ಮದರಸಾ, ಮತ್ತೆ 100 ಅಡಿ ಮುಂದೆ ಸಾಗಿದರೆ 16.9 ಅಡಿ ಎತ್ತರದ ಗೋಪುರ ‘ಚೌಬಾರಾ’, ಹಾಗೆಯೇ ಮುಂದೆ ಹೊರಟರೆ ಫತ್ಹೇ ದರ್ವಾಜಾ ಹಾಗೂ ಮಂಗಲಪೇಟ್ ದರ್ವಾಜಾ ಕಾಣ ಸಿಗುತ್ತವೆ. ಗುರುನಗರದಲ್ಲಿ ಗಿಳಿ ಹಾಗೂ ಶಿವನಗರದಲ್ಲಿ ನಾಯಿ ಸ್ಮಾರಕವೂ ಇವೆ. ಕೇಂದ್ರ ಬಸ್‌ ನಿಲ್ದಾಣ ಸಮೀಪ ಬರೀದ್‌ ಶಾಹಿ ಉದ್ಯಾನ ಪ್ರವಾಸಿಗರಿಗೆ ಪುಳಕ ಉಂಟು ಮಾಡುತ್ತದೆ.

ಬೀದರ್‌ನಿಂದ 3 ಕಿ.ಮೀ ಅಂತರದಲ್ಲಿರುವ ಅಷ್ಟೂರ ಗ್ರಾಮದ ಹೊರವಲಯದಲ್ಲಿ ಬಹಮನಿ ಸುಲ್ತಾನರ ಗೋರಿಗಳು ಇವೆ. ಚೌಖಂಡಿ, ಅಲ್ಲಾವುದ್ದಿನ್‌ ಬಹಮನಿ, ಮಹಮೂದ್‌ಷಾ ಬಹಮನಿ, ದಾವೂದ್‌ ಬಹಮನಿ, ಮಹಮ್ಮದ್‌ ಮೊದಲಾದ ಬಹಮನಿ ಅರಸರ ಸ್ಮಾರಕಗಳಲ್ಲಿ ಬಹಮನಿ ಕಾಲದ ಕುಶಲಕರ್ಮಿಗಳ ಕಲಾ ನೈಪುಣ್ಯವನ್ನು ಕಾಣಬಹುದು.

ಸಿಖ್‌ರ ಧರ್ಮಗುರು ಗುರುನಾನಕರು ಬೀದರ್‌ಗೆ ಭೇಟಿ ನೀಡಿದ ಸ್ಥಳ ಇಂದು ಪುಣ್ಯಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದೆ. ಭೀಕರ ಬರಗಾಲದಲ್ಲಿ ಗುರುನಾನಕರು ಕಾಲು ಬೆರಳ ತುದಿಯಿಂದ ಬೆಟ್ಟದ ಅಡಿಯಲ್ಲಿನ ಕಲ್ಲು ಸರಿಸಿದಾಗ ನೀರು ಹರಿಯಲಾರಂಭಿಸಿತು ಎನ್ನುವ ಪ್ರತೀತಿ ಇದೆ. ಇಂದು ಆ ಸ್ಥಳ ಗುರುನಾನಕ ಝೀರಾ ಎಂದೇ ಕರೆಯಲ್ಪಡುತ್ತಿದೆ.

ಉತ್ತರ ಭಾರತದಿಂದ ನಿತ್ಯ ನೂರಾರು ಜನ ಸಿಖ್‌ರು ಇಲ್ಲಿಗೆ ಬಂದು ಹೋಗುತ್ತಾರೆ. ಇಲ್ಲಿ ನಿತ್ಯ ದಾಸೋಹ ನಡೆಯುತ್ತದೆ. ಪ್ರವಾಸಿಗರಿಗೆ ಉಳಿದುಕೊಳ್ಳಲು ಅತ್ಯಂತ ಕಡಿಮೆ ದರದಲ್ಲಿ ಕೊಠಡಿಗಳು ಲಭ್ಯ ಇವೆ.
ನಗರದಲ್ಲಿ ಒಂದು ಪುರಾತನ ಪಾಪನಾಶ ದೇವಾಲಯ ಇದ್ದು, ನವೀಕರಣಗೊಂಡಿದೆ.

ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದಿಂದ 6 ಕಿ.ಮೀ ಅಂತರದಲ್ಲಿ ನರಸಿಂಹಸ್ವಾಮಿ ಗುಹಾದೇವಾಲಯ ಇದೆ. ಕರ್ನಾಟಕ, ತೆಲಂಗಾಣ ಹಾಗೂ ಮಹಾರಾಷ್ಟ್ರದಿಂದ ನಿತ್ಯ ನೂರಾರು ಜನ ಬಂದು ದೇವರ ದರ್ಶನ ಪಡೆಯುತ್ತಾರೆ. ಇಲ್ಲಿ ಎದೆ ಮಟ್ಟದ ನೀರಿನಲ್ಲಿ 90 ಮೀಟರ್‌ ವರೆಗೆ ನಡೆದುಕೊಂಡು ಹೋಗಿ ದೇವರ ದರ್ಶನ ಪಡೆಯಬೇಕಾಗುತ್ತದೆ. ಶನಿವಾರ ಅತಿ ಹೆಚ್ಚು ಯಾತ್ರಿಗಳು ಇಲ್ಲಿಗೆ ಬರುತ್ತಾರೆ.

ಬೀದರ್‌ನಲ್ಲಿ ಏನಿದೆ

* 14ನೇ ಶತಮಾನದ ಬಹಮನಿ ಸುಲ್ತಾನರ ಕೋಟೆ
* ದಕ್ಷಿಣ ಭಾರತದ ಮೊದಲ ವಿಶ್ವವಿದ್ಯಾಲಯ ಮೆಹಮೂದ್‌ ಗವಾನ ಮದರಸಾ
* 71 ಅಡಿ ಎತ್ತರದ ಪುರಾತನ ವೀಕ್ಷಣಾ ಗೋಪುರ
* ಶಾಸನಗಳಿರುವ ಲೋಹದ ಬಾಗಿಲುಗಳು
* ಬರೀದ್‌ಶಾಹಿ, ಅಲಿಬರೀದ್, ಸಬ್ಬಲಬರೀದ್‌ ರಾಜಮನೆತನದ ಗೋರಿಗಳು
* ಪುರಾತನ ತಂತ್ರಜ್ಞಾನದ ಭೂಕಾಲುವೆ
* ಅಷ್ಟೂರಿನಲ್ಲಿರುವ ಬಹಮನಿ ಸುಲ್ತಾನರ ಸ್ಮಾರಕಗಳು
* ಗುರುನಾನಕ ಝೀರಾ
* ನರಸಿಂಹ ಝರಣಾ–ಪುರಾತನ ಗುಹಾ ದೇವಾಲಯ

ಕಲಬುರ್ಗಿಯಿಂದ ಎಷ್ಟು ದೂರದಲ್ಲಿವೆ

ಬೀದರ್ 130 ಕಿ.ಮೀ.
ಬಸವಕಲ್ಯಾಣ 80 ಕಿ.ಮೀ.
ಹುಮನಾಬಾದ್ ತಾಲ್ಲೂಕಿನ ಜಲಸಂಘ್ವಿ 90 ಕಿ.ಮೀ.
ಭಾಲ್ಕಿ 90 ಕಿ.ಮೀ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.